ಬೆಂಗಳೂರು: ಎಲ್ಲಾ ಅಡೆತಡೆಗಳನ್ನು ಮೀರಿ ದೇಶಾದ್ಯಂತ ಹವಾ ಎಬ್ಬಿಸಿದ್ದ ರಾಕಿಂಗ್ ಸ್ಟಾರ್ ಅಭಿನಯದ ಬಹುನಿರೀಕ್ಷಿತ ‘ಕೆಜಿಎಫ್’ ಸಿನಿಮಾ ತೆರೆಗೆ ಅಪ್ಪಳಿಸಿದೆ. ವಿಶ್ವಾದ್ಯಂತ 2 ಸಾವಿರಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಐದು ಭಾಷೆಗಳಲ್ಲಿ ತೆರೆ ಕಂಡಿದೆ.
ರಾಜ್ಯದೆಲ್ಲೆಡೆ 350 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಯಶ್ ಅಭಿಮಾನಿಗಳು ಮಧ್ಯರಾತ್ರಿಯಿಂದ ಚಳಿಯಲ್ಲೇ ಕಾದು ಕುಳಿತಿದ್ದರು. ಆನ್‍ಲೈನ್ ಟಿಕೆಟ್ ಬುಕ್ಕಿಂಗ್‍ಗೆ ಭಾರಿ ಬೇಡಿಕೆ ಬಂದಿದ್ದು, ಈಗಾಗಲೇ ಟಿಕೆಟ್‍ಗಳು ಸೇಲ್ ಆಗುತ್ತಿದೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲೂ ಕೆಜಿಎಫ್ ರಿಲೀಸ್ ಆಗಿದೆ. ಬರೋಬ್ಬರಿ 2 ವರ್ಷಗಳ ಬಳಿಕ ಯಶ್ ಚಿತ್ರ ರಿಲೀಸ್ ಆಗಿದೆ.
Advertisement
Advertisement
ಚಿಕ್ಕಬಳ್ಳಾಪುರ ನಗರದ ವಾಣಿ ಚಿತ್ರಮಂದಿರದಲ್ಲಿ ಮುಂಜಾನೆಯೇ ಮೊದಲ ಪ್ರದರ್ಶನ ಆರಂಭವಾಗಿದ್ದು, ಬಹಳಷ್ಟು ಕೂತೂಹಲ ಹುಟ್ಟಿಸಿದ್ದ ‘ಕೆಜಿಎಫ್’ ಸಿನಿಮಾ ಕಣ್ತುಂಬಿಕೊಳ್ಳಲು ಯಶ್ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಮೊದಲ ಶೋ ಆರಂಭಕ್ಕೂ ಮುನ್ನ ಯಶ್ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ನಡೆಸಿ ಹರ್ಷೋದ್ಗಾರ ವ್ಯಕ್ತಪಡಿಸಿದರು. ಇನ್ನೂ ಅಭಿಮಾನಿಯೋರ್ವ ತನ್ನ ಎದೆ ಮೇಲೆ ಯಶ್ ಭಾವಚಿತ್ರ ಹಚ್ಚೆ ಹಾಕಿಸಿಕೊಂಡಿದ್ದು ಎಲ್ಲರ ಗಮನ ಸೆಳೆದಿತ್ತು.
Advertisement
ಮಂಡ್ಯದಲ್ಲಿ ಕೆಜಿಎಫ್ ಸಿನಿಮಾ ನೋಡಲು ಥಿಯೇಟರ್ ಮುಂದೆ ಅಭಿಮಾನಿಗಳು ಜಮಾಯಿಸಿದ್ದು, ಇಂದು 7 ಗಂಟೆಗೆ ಮೊದಲ ಶೋ ಆರಂಭವಾಗಿದೆ. ಅಷ್ಟೇ ಅಲ್ಲದೇ ಈಗಾಗಲೇ ಮೊದಲ ಎರಡು ಶೋಗಳ ಟಿಕೆಟ್ ಸಂಪೂರ್ಣ ಸೋಲ್ಡ್ ಔಟ್ ಆಗಿವೆ. ಆದರೂ ಮೊದಲ ಎರಡು ಶೋಗಳಿಗೆ ಟಿಕೆಟ್ ಸಿಗಲ್ಲ ಅಂತ ಗೊತ್ತಿದ್ದರೂ ಚಳಿಯನ್ನು ಲೆಕ್ಕಿಸದೆ ಗೇಟ್ ಮುಂಭಾಗ ಯಶ್‍ಗೆ ಜೈಕಾರ ಕೂಗುತ್ತ ಟಿಕೆಟ್‍ಗಾಗಿ ಅಭಿಮಾನಿಗಳು ಜಮಾಯಿಸಿದ್ದಾರೆ.
Advertisement
ಇನ್ನೂ ಗೊಂದಲದ ನಡುವೆಯೂ ಕೋಲಾರದಲ್ಲಿ ಮೂರು ಚಿತ್ರ ಮಂದಿರಗಳಲ್ಲಿ ‘ಕೆಜಿಎಫ್’ ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾ ನೋಡಲು ಮುಂಜಾನೆ 5 ಗಂಟೆಗೆ ಥಿಯೇಟರ್ ಬಳಿ ಯಶ್ ಅಭಿಮಾನಿಗಳು ಜಮಾಯಿಸಿದ್ದಾರೆ. ಚಿತ್ರದುರ್ಗದಲ್ಲಿ ಬೆಳಗ್ಗೆ 6 ಗಂಟೆಯ ಶೋಗೆ ಹೌಸ್ ಫುಲ್ ಆಗಿದ್ದು, ಯಶ್ ಬ್ಯಾನರ್ ಗೆ ನಿಂಬೆ ಹಣ್ಣಿನ ಮಾಲೆ ಹಾಕಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೇ ನಗರದ ಬಸವೇಶ್ವರ ಚಿತ್ರಮಂದಿರದಲ್ಲಿ ಕುಂಬಳಕಾಯಿ ಒಡೆದು ಸಿನಿಮಾಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
ಕೊಪ್ಪಳದಲ್ಲೂ ಯಶ್ ಅಭಿಮಾನಿಗಳಿಂದ ಸಂಭ್ರಮಾಚರಣೆ ಮಾಡಿದ್ದು, ಗಂಗಾವತಿಯ ಶಿವ ಚಿತ್ರಮಂದಿರದಲ್ಲಿ ಕೇಕ್ ಕಟ್ ಮಾಡಿ ಪಟಾಕಿ ಸಿಡಿಸಿ, ಯಶ್ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿದ್ದಾರೆ. ಇತ್ತ ಬಳ್ಳಾರಿಯಲ್ಲಿ ನಸುಕಿನ ಜಾವವೇ ಕೋರ್ಟ್ ತಡೆಯಾಜ್ಞೆ ಮಧ್ಯೆಯೂ ಬಳ್ಳಾರಿಯ ರಾಘವೇಂದ್ರ ಮತ್ತು ರಾಧಿಕ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನ ಶುರುವಾಗಿದೆ. ಟಿಕೆಟ್ ಆಗಿ ಅಭಿಮಾನಿಗಳ ಮಧ್ಯೆ ನೂಕುನುಗ್ಗಲು ಶುರುವಾಗಿದ್ದು, ಪೊಲೀಸರಿಂದ ಲಘುಲಾಠಿ ಪ್ರಹಾರ ಕೂಡ ನಡೆದಿದೆ.
ದಾವಣಗೆರೆಯಲ್ಲಿ ಎಸ್‍ಎಸ್ ಮಾಲ್ ಸೇರಿದಂತೆ ಗೀತಾಂಜಲಿ ಹಾಗೂ ವಸಂತ ಚಿತ್ರಮಂದಿರದ ಎರಡು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಬೆಳಗ್ಗಿನ ಜಾವ 5 ಗಂಟೆಗೆ ಕೆಜಿಎಫ್ ಸಿನಿಮಾ ಶುರುವಾಗಿದ್ದು, ಕ್ಯೂ ನಲ್ಲಿ ನಿಂತು ಅಭಿಮಾನಿಗಳು ಟಿಕೇಟ್ ಪಡೆಯುತ್ತಿದ್ದಾರೆ. ದಿನಕ್ಕೆ ಆರು ಶೋ ಗಳಲ್ಲಿ ಕೆಜಿಎಫ್ ಪ್ರದರ್ಶನಗೊಳ್ಳಲಿದ್ದು, ಗೀತಾಂಜಲಿ ಚಿತ್ರಮಂದಿರದಲ್ಲಿ ಸೋಮವಾರದ ವರೆಗೂ ಬಾಲ್ಕನಿ ಟಿಕೆಟ್ ಸೋಲ್ಡ್ ಔಟ್ ಆಗಿದೆ. 20 ಅಡಿ ಎತ್ತರದ ಯಶ್ ಕಟೌಟ್‍ಗೆ ಹೂವಿನ ಹಾರ ಹಾಕಿ ಜೈಕಾರ ಕೂಗಿದ್ದಾರೆ.
ತುಮಕೂರಿನಲ್ಲಿ ಮಾರುತಿ, ಮೈಲಾರಿ ಮತ್ತು ಕೃಷ್ಣ ಮೂರು ಚಿತ್ರಮಂದಿರಗಳಲ್ಲಿ ಕೆಜಿಎಫ್ ಸಿನಿಮಾ ರಿಲೀಸ್ ಆಗಿದೆ. 21 ಕಾಯಿ ಒಡೆದು ಚಿತ್ರ ಯಶಸ್ವಿಗೆ ಪ್ರಾರ್ಥನೆ ಸಲ್ಲಿಸಿದ್ದು, ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv