ನವದೆಹಲಿ: ಲೋಕಸಭಾ ಚುನಾವಣೆ (Lok Sabha Election 2024) ಘೋಷಣೆಯಾದ ಬಳಿಕ ಶುಕ್ರವಾರದವರೆಗೆ ದೇಶದಾದ್ಯಂತ ಸಿ-ವಿಜಿಲ್ ಆಪ್ (C-Vigil App) ಮೂಲಕ 79,000ಕ್ಕೂ ಹೆಚ್ಚು ಮಾದರಿ ನೀತಿ ಸಂಹಿತೆ (Model code of conduct) ಉಲ್ಲಂಘನೆ ದೂರುಗಳು ದಾಖಲಾಗಿವೆ. ಇದರಲ್ಲಿ 99%ಕ್ಕೂ ಹೆಚ್ಚು ದೂರುಗಳನ್ನು ಪರಿಹರಿಸಲಾಗಿದೆ ಮತ್ತು ಈ ದೂರುಗಳಲ್ಲಿ 89% ದೂರುಗಳನ್ನು 100 ನಿಮಿಷಗಳಲ್ಲಿ ಪರಿಹರಿಸಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ (Election Commission of India) ತಿಳಿಸಿದೆ.
ಭಾರತೀಯ ಚುನಾವಣಾ ಆಯೋಗದ ಸಿ-ವಿಜಿಲ್ ಅಪ್ಲಿಕೇಶನ್ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಹಿತಿ ಹಂಚಿಕೊಳ್ಳಲು ಜನರಿಗೆ ಪರಿಣಾಮಕಾರಿ ಸಾಧನವಾಗಿದೆ. ಅಕ್ರಮ ಹೋಡಿರ್ಂಗ್‍ಗಳು ಮತ್ತು ಬ್ಯಾನರ್‌ಗಳ ವಿರುದ್ಧ 58,500ಕ್ಕೂ ಹೆಚ್ಚು ದೂರುಗಳು (73% ದೂರುಗಳು) ಸ್ವೀಕರಿಸಲಾಗಿದೆ. ಹಣ, ಉಡುಗೊರೆಗಳು ಮತ್ತು ಮದ್ಯ ವಿತರಣೆಗೆ ಸಂಬಂಧಿಸಿದಂತೆ 1400ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಲಾಗಿದೆ. ಬಂದೂಕು ಪ್ರದರ್ಶನ ಮತ್ತು ಬೆದರಿಕೆಗೆ ಸಂಬಂಧಿಸಿದಂತೆ ಬಂದ 535 ದೂರುಗಳಲ್ಲಿ 529ನ್ನು ಈಗಾಗಲೇ ಪರಿಹರಿಸಲಾಗಿದೆ ಎಂದು ಆಯೋಗ ತಿಳಿಸಿದೆ. ಇದನ್ನೂ ಓದಿ: ದೈವಕೋಲದ ವೇಳೆ ಸಾರ್ವಜನಿಕ ಸಭೆ – ಜಯಪ್ರಕಾಶ್ ಹೆಗ್ಡೆ ವಿರುದ್ಧ ಕೇಸ್
1,000 ದೂರುಗಳು ನಿಷೇಧಿತ ಅವಧಿಯನ್ನು ಮೀರಿ ಪ್ರಚಾರಕ್ಕಾಗಿ ದಾಖಲಾಗಿದೆ. ಇದರಲ್ಲಿ ಅನುಮತಿಸಲಾದ ಸಮಯವನ್ನು ಮೀರಿ ಸ್ಪೀಕರ್‌ಗಳ ಬಳಕೆ ಸೇರಿದೆ. ಅಲ್ಲದೇ 2454 ದೂರುಗಳು ಆಸ್ತಿಗಳ ಹಾನಿಗೆ ಸಂಬಂಧಿಸಿದ್ದಾಗಿದೆ.
2024ರ ಸಾರ್ವತ್ರಿಕ ಚುನಾವಣೆಯ ಘೋಷಣೆಯ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು, ನಾಗರಿಕರು ಜಾಗರೂಕರಾಗಿರಿ, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಮತದಾರರಿಗೆ ಯಾವುದೇ ರೀತಿಯ ಪ್ರಚೋದನೆ, ವಿತರಣೆಯನ್ನು ದೂರು ನೀಡಲು ಅಪ್ಲಿಕೇಶನ್‍ನ್ನು ಬಳಸಬೇಕು ಎಂದು ಮಾಹಿತಿ ನೀಡಿದ್ದರು. ಇದನ್ನೂ ಓದಿ: ಪಕ್ಷ ಸೇರುವಂತೆ ಬಿವೈವಿ ಆಹ್ವಾನ – ಬೆಂಬಲಿಗರ ಜೊತೆ ಚರ್ಚಿಸಿ ನಿರ್ಧಾರ ಎಂದ ಸುಮಲತಾ