ಮುಂಬೈ: ಜಸ್ಲೋಕ್ ಆಸ್ಪತ್ರೆ, ರಹೇಜಾ ಆಸ್ಪತ್ರೆ, ಸೆವೆನ್ ಹಿಲ್ಸ್ ಆಸ್ಪತ್ರೆ, ಕೊಹಿನೂರ್ ಆಸ್ಪತ್ರೆ, ಕೆಇಎಂ ಆಸ್ಪತ್ರೆ, ಜೆಜೆ ಆಸ್ಪತ್ರೆ ಮತ್ತು ಸೇಂಟ್ ಜಾರ್ಜ್ ಆಸ್ಪತ್ರೆ ಸೇರಿದಂತೆ ಮುಂಬೈನ 50 ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ (Mumbai Hospitals) ಇಮೇಲ್ ಮೂಲಕ ಬಾಂಬ್ ಬೆದರಿಕೆಗಳು (Bomb Threat) ಬಂದಿವೆ.
ವಿಪಿಎನ್ ನೆಟ್‌ವರ್ಕ್ ಬಳಸಿ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಲಾಗಿದೆ ಎಂದು ಮುಂಬೈ ಪೊಲೀಸರು ಖಚಿತಪಡಿಸಿದ್ದಾರೆ. ಇಮೇಲ್ ಕಳುಹಿಸಿದವರ ಗುರುತು ಮತ್ತು ಬೆದರಿಕೆಯ ಉದ್ದೇಶ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಿಂದ ದುಬೈಗೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ
ಮುಂಬೈನ ಹಿಂದೂಜಾ ಕಾಲೇಜ್ ಆಫ್ ಕಾಮರ್ಸ್ ಅನ್ನು ಸ್ಫೋಟಿಸುವ ಬೆದರಿಕೆಯ ನಕಲಿ ಇಮೇಲ್ ಕೂಡ ಸಂಸ್ಥೆಗೆ ಬಂದಿದೆ. ಪೊಲೀಸ್ ತಂಡಗಳು ಮತ್ತು ಬಾಂಬ್ ಸ್ಕ್ವಾಡ್ ಎರಡೂ ಸ್ಥಳಗಳಲ್ಲಿ ಸಂಪೂರ್ಣ ಶೋಧ ನಡೆಸಿದರೂ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ. ಇಮೇಲ್ ಕಳುಹಿಸಿದ ವ್ಯಕ್ತಿಗಾಗಿ ಮುಂಬೈ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಮುಂಬೈನ ವಿಪಿ ರೋಡ್ ಪೊಲೀಸ್ ಠಾಣೆ ಈ ಬಗ್ಗೆ ತನಿಖೆ ನಡೆಸುತ್ತಿದೆ.
ನಿನ್ನೆ ಕೂಡ ಚೆನ್ನೈ, ಪಾಟ್ನಾ ಮತ್ತು ಜೈಪುರ ಸೇರಿದಂತೆ 41 ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆಗಳು ಬಂದಿದ್ದವು. ತಕ್ಷಣ ಅಲರ್ಟ್ ಆದ ಪೊಲೀಸರು ಎಲ್ಲಾ ಕಡೆ ಶೋಧ ಕಾರ್ಯ ನಡೆಸಿದ್ದರು. ಆದರೆ ಅಂತಹ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ. ಇದನ್ನೂ ಓದಿ: ಪ್ರತಿದಿನ ಸರಾಸರಿ 27 ಸೈಬರ್ ವಂಚನೆ ಪ್ರಕರಣ – 25,000 ಕೋಟಿ ರೂ. ಕಳೆದುಕೊಂಡ ಭಾರತೀಯರು