ನೇಪಿಟಾವ್/ಬ್ಯಾಂಕಾಕ್: ಮಯನ್ಮಾರ್ (Myanmar) ಮತ್ತು ನೆರೆಯ ಥೈಲ್ಯಾಂಡ್‌ನಲ್ಲಿ ಸಂಭವಿಸಿರುವ ಭೂಕಂಪದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಶುಕ್ರವಾರ ಬೆಳಗ್ಗೆ 11:50ರ ವೇಳೆಗೆ ಸಂಭವಿಸಿದ ಭೂಕಂಪ ಶನಿವಾರದ ಹೊತ್ತಿಗೆ ಸುಮಾರು 1600ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದೆ. ಅಲ್ಲದೇ 3,400 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಶುಕ್ರವಾರ ಮ್ಯಾನ್ಮಾರ್‌ನಲ್ಲಿ ಮೊದಲ 7.7 ತೀವ್ರತೆಯ ಭೂಕಂಪ ಸಂಭವಿಸಿತ್ತು. ಸಾಗಯಿಂಗ್‌ನ ವಾಯುವ್ಯಕ್ಕೆ ಭೂಮಿಯಿಂದ 10 ಕಿಮೀ ಆಳದಲ್ಲೇ ಕೇಂದ್ರ ಬಿಂದು ಪತ್ತೆಯಾಗಿತ್ತು. ಇದಾದ ಕೆಲವು ಗಂಟೆಗಳಲ್ಲಿ ಇನ್ನೂ ಮೂರ್ನಾಲ್ಕು ಭಾರಿ ಭೂಕಂಪ ಸಂಭವಿಸಿತ್ತು. ಸರಣಿ ಭೂಕಂಪದ ಹಿನ್ನೆಲೆ ಗಗನ ಚುಂಬಿ ಕಟ್ಟಡಗಳು ನೆಲಕ್ಕಪ್ಪಳಿಸಿದವು. ಇದರಿಂದ ಭಾರತದ ಕೆಲ ಪ್ರದೇಶಗಳಲ್ಲೂ ಭೂಮಿ ಕಂಪಿಸಿದ ಅನುಭವವಾಗಿತ್ತು. ಇದನ್ನೂ ಓದಿ: ಭೂಕಂಪದಿಂದಾಗಿ ಆಸ್ಪತ್ರೆ ನಾಮಾವಶೇಷ – ಬ್ಯಾಂಕಾಕ್‌ನ ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ
ಈ ನಡುವೆ ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಅಂತರ್ಯುದ್ಧದಿಂದಾಗಿ ತುರ್ತುಸೇವೆಗಳು ದುರ್ಬಲವಾಗಿವೆ. ಅಲ್ಲದೇ ಅಲ್ಲಿನ ಸರ್ಕಾರವೂ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಅಸಮರ್ಥವಾಗಿದೆ ಎಂದು ಹೇಳಲಾಗಿದೆ. ಸದ್ಯ ಮ್ಯಾನ್ಮಾರ್ ಒಂದರಲ್ಲೇ 1,640 ಮಂದಿ ಸಾವನ್ನಪ್ಪಿದ್ದು, ಬ್ಯಾಂಕಾಂಕ್‌ನಲ್ಲಿ ಈವರೆಗೆ 10 ರಿಂದ 20 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಕುಸಿದ ಕಟ್ಟಡಗಳ ಅವಶೇಷಗಳ ಅಡಿ ನೂರಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: Myanmar Earthquake | ಸಾವಿನ ಸಂಖ್ಯೆ ಬರೋಬ್ಬರಿ 1,000ಕ್ಕೆ ಏರಿಕೆ – 2,000ಕ್ಕೂ ಅಧಿಕ ಮಂದಿಗೆ ಗಾಯ
100 ವರ್ಷಗಳ ಹಳೆಯ ಸೇತುವೆ ಕುಸಿತ
ಮ್ಯಾನ್ಮಾರ್‌ನಲ್ಲಿ ಉಂಟಾದ ಭೀಕರ ಭೂಕಂಪ ಸಾಕಷ್ಟು ಸಾವು-ನೋವು ಉಂಟುಮಾಡಿದೆ. ಒಂದೆಡೆ ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಜೀವ ಉಳಿಸಬೇಕಾದ ಆಸ್ಪತ್ರೆಗಳೇ ಕಣ್ಣೀರಿನ ಕಥೆ ಹೇಳುತ್ತಿವೆ. ಸಾವಿರಾರು ಹಾಸಿಗೆ ಸೌಲಭ್ಯ ಹೊಂದಿರುವ ಆಸ್ಪತ್ರೆಗಳು ನಾಮಾವಶೇಷವಾಗಿದ್ದು, ನೊಂದ ಸಂತ್ರಸ್ತರಿಗೆ ರಸ್ತೆಯಲ್ಲೇ ಚಿಕಿತ್ಸೆ ನೀಡುವಂತಹ ಪರಿಸ್ಥಿತಿ ಬಂದೊದಗಿವೆ. ಅಲ್ಲದೇ ಸಾಗಯಿಂಗ್‌ನಿಂದ ಐರಾವಡ್ಡಿ ನದಿ ವರೆಗೆ ವ್ಯಾಪಿಸಿರುವ ಸುಮಾರು 100 ವರ್ಷಗಳಷ್ಟು ಹಳೆಯದಾದ ಆವಾ ಸೇತುವೆಯು ನೀರಿನಲ್ಲಿ ಕುಸಿದಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪತಿ, ಕೈತುಂಬ ಸಂಬಳ ಸಿಗುತ್ತಿದ್ದ ಕೆಲಸ ಬಿಟ್ಟ ಬಳಿಕ ಬರೋಬ್ಬರಿ 45 ಕೆಜಿ ತೂಕ ಇಳಿಸಿಕೊಂಡ ಮಹಿಳೆ