ಕಳೆದ ಕೆಲವು ವರ್ಷಗಳಿಂದ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ನಡೆಯುತ್ತಲೇ ಬಂದಿದೆ. ಇಲ್ಲಿನ ಹಲವು ಜಾತಿ, ಧರ್ಮ ಮತ್ತು ಸಮುದಾಯಗಳ ನಡುವಿನ ಸಂಘರ್ಷವೇ ಹಲವು ವರ್ಷಗಳ ಹಿಂಸಾಚಾರಕ್ಕೆ ಕಾರಣವಾಗಿದೆ. ಮೊದಲಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಹಿಂಸಾಚಾರಕ್ಕೆ ಕಾರಣವಾಗುತ್ತಲೇ ಬಂದಿದೆ. ದಿನಗಳದಂತೆ ಹಿಂಸಾಚಾರದ ಪರಿ ತೀವ್ರಗೊಳ್ಳುತ್ತಿದೆ. ಇದೀಗ ಮತ್ತೆ ಮಣಿಪುರದಲ್ಲಿ ಒಂದು ಬಾಂಬ್ ದಾಳಿ ಹಿಂಸಾಚಾರಕ್ಕೆ ಎಡೆ ಮಾಡಿಕೊಟ್ಟಿದೆ. ಇದು ಶುರುವಾಗಿದ್ದು ಹೇಗೆ? ಹಳೆ ವೈಷಮ್ಯವೇ ಇದಕ್ಕೆಲ್ಲ ಕಾರಣವಾಗ್ತಿದ್ಯಾ? ಎನ್ನುವ ಪ್ರಶ್ನೆ ಸದ್ಯ ಮುನ್ನೆಲೆಗೆ ಬಂದಿದೆ.
ಇತ್ತೀಚಿಗಷ್ಟೇ ಮಣಿಪುರದ ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್ ಟ್ರೋಂಗ್ಲಾಬಿ ಗ್ರಾಮದಲ್ಲಿ ಮನೆಯೊಂದರ ಮೇಲೆ ಬಾಂಬ್ ದಾಳಿ ನಡೆದಿದ್ದು, ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು. ಘಟನೆಯಲ್ಲಿ ತಾಯಿ ಗಾಯಗೊಂಡಿದ್ದರು. ಕುಕಿ ಉಗ್ರಗಾಮಿಗಳಿಂದ ಬಾಂಬ್ ದಾಳಿ ನಡೆದಿದೆ ಎಂದು ಶಂಕಿಸಲಾಗಿದೆ. ಇದಕ್ಕೂ ಮುನ್ನ 2023 ಮತ್ತು 2024ರಲ್ಲಿಯೂ ಇದೇ ಟ್ರೋಂಗ್ಲಾಬಿಯಲ್ಲಿ ಪದೇ ಪದೇ ಗುಂಡಿನ ಚಕಮಕಿ ನಡೆದಿತ್ತು. ಇದೀಗ ಮತ್ತೆ ಅದೇ ಪ್ರದೇಶದಲ್ಲಿಯೇ ದಾಳಿ ನಡೆದಿರುವುದರಿಂದ ಜನರನ್ನ ಮತ್ತೆ ಭಯಭೀತರನ್ನಾಗಿಸಿದೆ.

ಬಾಂಬ್ ದಾಳಿಯಿಂದಾಗಿ ಕೆಲ ಪ್ರದೇಶಗಳಲ್ಲಿ ತಕ್ಷಣದ ಅಶಾಂತಿಯನ್ನು ಉಂಟುಮಾಡಿತ್ತು. ಜೊತೆಗೆ ಸ್ಥಳೀಯರು ಕೂಡ ಪ್ರತಿಭಟನೆ ಮಾಡಿದರು. ನಿರಂತರವಾಗಿ ಹಿಂಸಾಚಾರ ನಡೆಯುತ್ತಿರುವುದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಇದರ ಪರಿಣಾಮ ಮಣಿಪುರ ಸರ್ಕಾರವು ಐದು ಕಣಿವೆಯ ಜಿಲ್ಲೆಗಳಲ್ಲಿ ಮೂರು ದಿನಗಳವರೆಗೆ ಬ್ರಾಡ್ಬ್ಯಾಂಡ್, ವಿಎಸ್ಎಟಿಗಳು ಮತ್ತು ವಿಪಿಎನ್ಗಳು ಸೇರಿದಂತೆ ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳನ್ನು ಸ್ಥಗಿತಗೊಳಿಸಿತ್ತು.
ಹಿಂಸಾಚಾರಕ್ಕೆ ಕಾರಣವೇನು?
ಇತ್ತೀಚಿಗೆ ನಡೆದ ಬಾಂಬ್ ದಾಳಿಯಲ್ಲಿ ಮಕ್ಕಳ ಸಾವನ್ನಪ್ಪಿದ್ದು, ತೀವ್ರ ಹಿಂಸಾಚಾರಕ್ಕೆ ಕಾರಣವಾಗಿ ಪರಿಣಮಿಸಿದೆ. ಇದರಿಂದ ಪ್ರತಿಭಟನಾಕಾರರು ಹಾಗೂ ಭದ್ರತಾ ಪಡೆಗಳ ನಡುವೆ ಜಿದ್ದಾಜಿದ್ದಿ ನಡೆಯಿತು. ಅಲ್ಲದೇ ಬಿಷ್ಣುಪುರ ಜಿಲ್ಲೆಯ ಸಿಆರ್ಪಿಎಫ್ ಶಿಬಿರದ ಮೇಲೆ ಗುಂಪೊಂದು ಕೂಡ ದಾಳಿ ನಡೆಸಿತು. ಅಲ್ಲದೇ ಶಿಬಿರದ ಕೆಲವು ಭಾಗಗಳನ್ನು ಧ್ವಂಸಗೊಳಿಸಿ, ವಾಹನಗಳನ್ನು ಸುಟ್ಟುಹಾಕಿದರು. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಹಿಂಸಾಚಾರ ಹೆಚ್ಚಾಗುತ್ತಿದೆ.
ಮಣಿಪುರದಲ್ಲಿ ಮುಖ್ಯವಾಗಿ ಮೂರು ಸಮುದಾಯಗಳಿವೆ. ಮೈತೈ, ಕುಕಿ ಹಾಗೂ ನಾಗ. ಇದರಲ್ಲಿ ಮೈತೈ ಹೆಚ್ಚಾಗಿ ಇಂಫಾಲ್ನ ಕಣಿವೆಯಲ್ಲಿ ವಾಸಿಸುತ್ತಾರೆ. ಕುಕಿ ಪರ್ವತ ಪ್ರದೇಶಗಳಲ್ಲಿ ವಾಸಿಸುವ ಜನಾಂಗ ಹಾಗೂ ನಾಗ ಪ್ರಮುಖ ಪರ್ವತ ಪ್ರದೇಶದ ಒಂದು ಸಮುದಾಯವಾಗಿದೆ. ಕಣಿವೆ ಪ್ರದೇಶ ಮತ್ತು ಪರ್ವತ ಪ್ರದೇಶಗಳ ನಡುವಿನ ಕೆಲವು ಅಸಮಾನತೆಗಳೇ ಸಂಘರ್ಷಕ್ಕೆ ಮೂಲ ಕಾರಣವಾಗಿದೆ ಎನ್ನಲಾಗಿದೆ.

ಇದಕ್ಕೂ ಮುನ್ನ ಮಣಿಪುರದಲ್ಲಿ 2023ರ ಮೇ ತಿಂಗಳಲ್ಲಿ ಮೈತೈ ಮತ್ತು ಕುಕಿ-ಜೋ ಗುಂಪುಗಳ ನಡುವೆ ಜನಾಂಗೀಯ ಹಿಂಸಾಚಾರ ನಡೆದಿತ್ತು. ಈ ವೇಳೆ 260ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಸಾವಿರಾರು ಜನ ಇಂದಿಗೂ ಅದರಿಂದ ಬಳಲುತ್ತಿದ್ದಾರೆ. ಆದರೆ ಹಿಂಸಾಚಾರವೇ ಆರುವ ಮುನ್ನ ಇದೀಗ ಇನ್ನೊಂದು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ.
ಶುರುವಾಗಿದ್ದು ಹೇಗೆ?
ಮಣಿಪುರವು ಒಮ್ಮೆಲೆ ಹೊತ್ತಿಕೊಂಡು ಉರಿಯುತ್ತಿರುವ ಜ್ವಾಲೆಯಲ್ಲ, ಬದಲಾಗಿ ಇತಿಹಾಸ, ಭೂಮಿ, ಗುರುತು ಮತ್ತು ಅಧಿಕಾರದಿಂದ ಅನಿವಾರ್ಯವಾಗಿ ನಿಧಾನಗತಿಯಲ್ಲಿ ಹೊತ್ತಿ ಉರಿಯುತ್ತಿದೆ. 2023ರ ಮೇ ತಿಂಗಳಿನಿಂದ ಸುಮಾರು ಮೂರು ವರ್ಷಗಳ ಕಾಲ ಮಣಿಪುರದ ಇಂಫಾಲ್ ಕಣಿವೆಯ 3.2 ಮಿಲಿಯನ್ ಜನರು ಪ್ರಬಲ ಮೈತೈ ಸಮುದಾಯ ಮತ್ತು ಸುತ್ತಮುತ್ತಲಿನ ಬೆಟ್ಟಗಳಲ್ಲಿರುವ ಕುಕಿ-ಝೋ ಬುಡಕಟ್ಟು ಜನಾಂಗದ ನಡುವಿನ ಹಿಂಸಾಚಾರದಿಂದ ನಲುಗಿ ಹೋಗಿದೆ.

ಮಣಿಪುರದ ಭೌಗೋಳಿಕ ಹಾಗೂ ಸಾಮಾಜಿಕ ರಚನೆಯೇ ಈ ಹಿಂಸಾಚಾರದ ಮೂಲ ಕಾರಣ. ಇಂಫಾಲ್ ಕಣಿವೆಯಲ್ಲಿ ವಾಸಿಸುವ ಮೈತೈ ಸಮುದಾಯ ಮತ್ತು ಪರ್ವತ ಪ್ರದೇಶಗಳಲ್ಲಿ ನೆಲೆಸಿರುವ ಕುಕಿ ಹಾಗೂ ನಾಗಾ ಸಮುದಾಯಗಳ ನಡುವೆ ವರ್ಷಗಳಿಂದ ಅಸಮಾನತೆ ಬೆಳೆದು ನಿಂತಿದೆ. ಭೂಮಿ ಹಕ್ಕು, ರಾಜಕೀಯ ಪ್ರಾಬಲ್ಯ ಮತ್ತು ಆರ್ಥಿಕ ಅಸಮಾನತೆಗಳು ಈ ಸಂಘರ್ಷಕ್ಕೆ ತುಷ್ಠಿ ನೀಡುತ್ತಾ ಬಂದಿದೆ.
ಇದಕ್ಕೂ ಮುನ್ನವೇ, 1990ರ ದಶಕದಲ್ಲಿ ನಾಗಾ ಮತ್ತು ಕುಕಿ ಸಮುದಾಯಗಳ ನಡುವೆ ನಡೆದ ಭೀಕರ ಹಿಂಸಾಚಾರವು ರಾಜ್ಯದ ಇತಿಹಾಸದಲ್ಲಿ ಕಪ್ಪು ಅಧ್ಯಾಯವಾಗಿತ್ತು. ನೂರಾರು ಜನರು ಸಾವನ್ನಪ್ಪಿದ್ದು, ಸಾವಿರಾರು ಜನರು ಸ್ಥಳಾಂತರಗೊಳ್ಳಬೇಕಾದ ಪರಿಸ್ಥಿತಿ ಎದುರಾಗಿತ್ತು. 2023ರಲ್ಲಿ ಉದ್ಭವಿಸಿದ ಹಿಂಸಾಚಾರದ ಪ್ರಮುಖ ಕಾರಣವೆಂದರೆ ಮೈತೈ ಸಮುದಾಯಕ್ಕೆ ST ಸ್ಥಾನಮಾನ ನೀಡಿದ್ದು. ಈ ನಿರ್ಧಾರಕ್ಕೆ ಕುಕಿ ಮತ್ತು ನಾಗಾ ಸಮುದಾಯಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ರಾಜ್ಯದ ಹಲವೆಡೆ ಸಂಘರ್ಷ ಉಂಟಾಯಿತು.

ಈ ಹಿಂಸಾಚಾರದ ಪರಿಣಾಮವಾಗಿ ಮನೆಗಳು, ಧಾರ್ಮಿಕ ಕಟ್ಟಡಗಳು ಸುಟ್ಟುಹೋಗಿದ್ದು, ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಂದಿವೆ. ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸಾವಿರಾರು ಜನರು ಶಿಬಿರಗಳಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿಯನ್ನು
ಒಂದು ಕಾಲದಲ್ಲಿ ಸ್ವತಂತ್ರ ರಾಜಪ್ರಭುತ್ವ ಆಗಿದ್ದ ಮಣಿಪುರ, 18ನೇ ಶತಮಾನದಲ್ಲಿ ಬರ್ಮೀಸ್ ಆಕ್ರಮಣಕ್ಕೆ ಒಳಗಾಗಿತ್ತು, ನಂತರ 1891ರ ಬಳಿಕ ಬ್ರಿಟಿಷರ ರಕ್ಷಣಾತ್ಮಕ ಸ್ಥಾನಮಾನಕ್ಕೆ ಒಳಪಟ್ಟಿತ್ತು. ನಂತರ ಭೂ ಕಾನೂನುಗಳು ಬಂದವು. ಮಣಿಪುರ ಭೂ ಕಂದಾಯ ಮತ್ತು ಭೂ ಸುಧಾರಣಾ ಕಾಯ್ದೆ 1960ರ ಪ್ರಕಾರ ಬುಡಕಟ್ಟು ಜನಾಂಗದವರಲ್ಲದವರು (ಮೈತೆಯಿಗಳು) ಬೆಟ್ಟಗಳಲ್ಲಿ ಭೂಮಿ ಖರೀದಿಸುವುದನ್ನು ನಿಷೇಧಿಸುತ್ತದೆ. ಆದರೆ ಇತರ ಹಿಂದುಳಿದ ವರ್ಗಗಳು ಎಂದು ವರ್ಗೀಕರಿಸಲಾದ ಮೈತೈಗಳ ಜನಸಂಖ್ಯೆ ಹೆಚ್ಚಾಯಿತು. ಕಣಿವೆಯ ಭೂಮಿ ವಿಭಜನೆಯಾಯಿತು. ಆದರೆ ಬೆಟ್ಟದ ಬುಡಕಟ್ಟು ಜನಾಂಗದವರು ವಿಶಾಲವಾದ ಕಾಡುಗಳನ್ನು ಹೊಂದಿದ್ದರು. ಇದರಿಂದ ಜನಾಂಗೀಯ-ರಾಷ್ಟ್ರೀಯತಾವಾದಿ ದಂಗೆಗಳ ಜಾಲವು ಹೊರಹೊಮ್ಮಲು ಆರಂಭಿಸಿತು.
ಇದರಿಂದಾಗಿ ಹಿಂಸಾಚಾರ ಆರಂಭವಾಗಿ ಮನೆಗಳು, ದೇವಾಲಯಗಳು, ಚರ್ಚ್ಗಳನ್ನು ಧ್ವಂಸ ಮಾಡಲಾಯಿತು. ಬಳಿಕ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಕೇಳಿಬಂದಿದೆ. ಸಾವಿರಾರು ಜನರು ಶಿಬಿರಗಳಿಗೆ ಸ್ಥಳಾಂತರಗೊಂಡರು. ಇದು ರಾಜ್ಯದ ಶಾಂತಿ ಹಾಗೂ ಭದ್ರತೆಯನ್ನು ಗಂಭೀರವಾಗಿ ಹದಗೆಡಿಸಿದೆ.

ಸದ್ಯದ ಪರಿಸ್ಥಿತಿ ಹೇಗಿದೆ?
ಹೆಚ್ಚುತ್ತಿರುವ ಅಶಾಂತಿಗೆ ಪ್ರತಿಕ್ರಿಯೆಯಾಗಿ, ಮಣಿಪುರ ಸರ್ಕಾರವು ಐದು ಕಣಿವೆಯ ಇಂಫಾಲ್ ಪಶ್ಚಿಮ, ಇಂಫಾಲ್ ಪೂರ್ವ, ತೌಬಲ್, ಕಾಕ್ಚಿಂಗ್ ಮತ್ತು ಬಿಷ್ಣುಪುರ ಸೇರಿ 5 ಜಿಲ್ಲೆಗಳಲ್ಲಿ ಮೂರು ದಿನಗಳವರೆಗೆ ಬ್ರಾಡ್ಬ್ಯಾಂಡ್, VSATಗಳು ಮತ್ತು VPNಗಳು ಸೇರಿದಂತೆ ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳನ್ನು ಸ್ಥಗಿತಗೊಳಿಸಲು ಆದೇಶಿಸಿತ್ತು. ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯ ನಡುವೆ ತಪ್ಪು ಮಾಹಿತಿ ಮತ್ತು ಸುಳ್ಳು ವದಂತಿಗಳು ಹರಡುವುದನ್ನು ತಡೆಯುವ ಗುರಿಯೊಂದಿಗೆ ಈ ಆದೇಶ ಹೊರಡಿಸಲಾಗಿದೆ.
ಸದ್ಯ ಟ್ರೋಂಗ್ಲಾಬಿ ಬಾಂಬ್ ದಾಳಿ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ಹಸ್ತಾಂತರಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ದುಷ್ಕರ್ಮಿಗಳ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ರಾಜ್ಯ ಪೊಲೀಸರು, ಅಸ್ಸಾಂ ರೈಫಲ್ಸ್, ಸಿಆರ್ಪಿಎಫ್ ಮತ್ತು ಹೆಲಿಕಾಪ್ಟರ್ಗಳನ್ನು ನಿಯೋಜಿಸಿ ಬೃಹತ್ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ.
ರಾಜ್ಯದಲ್ಲಿ ಇಂದಿಗೂ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ಭದ್ರತಾ ಪಡೆಗಳ ಕಟ್ಟುನಿಟ್ಟಿನ ನಿಯೋಜನೆ ಜಾರಿಯಲ್ಲಿದೆ. ಶಾಂತಿ ಮಾತುಕತೆಗಳು ನಡೆಯುತ್ತಿದ್ದರೂ, ಶಾಶ್ವತ ಪರಿಹಾರ ಕಂಡುಕೊಳ್ಳುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿಯೇ ಉಳಿದಿದೆ.

