ಭೋಪಾಲ್: 2020ರ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿ ನಂತರ ಜಾಮೀನಿನ ಆಧಾರದ ಮೇಲೆ ಬಿಡುಗಡೆಯಾಗಿದ್ದ ವ್ಯಕ್ತಿ ಯುವತಿಗೆ ಚಾಕು ತೋರಿಸಿ ಬೆದರಿಕೆಯೊಡ್ಡಿ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ನಡೆದಿದೆ.
ಈಗ 19 ವರ್ಷವಾಗಿರುವ ಯುವತಿ, ಎರಡು ವರ್ಷಗಳ ಹಿಂದೆ ಅಪ್ರಾಪ್ತಳಾಗಿದ್ದಾಗ ಇದೇ ಆರೋಪಿ ಅತ್ಯಾಚಾರವೆಸಗಿದ್ದನು. ಇದೀಗ ಮತ್ತೆ ಯುವತಿ ಮೇಲೆ ಆರೋಪಿ ಅತ್ಯಾಚಾರವೆಸಗಿದ್ದು, ತನ್ನ ವಿರುದ್ಧ ನೀಡಿರುವ ದೂರನ್ನು ಹಿಂಪಡೆಯುವಂತೆ ಬೆದರಿಕೆಯೊಡ್ಡಿದ್ದಾನೆ ಎಂದು ಆರೋಪಿಸಿದ್ದಾಳೆ. ಇದನ್ನೂ ಓದಿ: ಮೂರು ಮುದ್ದಾದ ಹುಲಿ ಮರಿಗಳನ್ನ ಅಮ್ಮನಂತೆ ಅಪ್ಪಿ ಮುದ್ದಾಡುವ ಚಿಂಪಾಂಜಿ
ಆರೋಪಿಯನ್ನು ವಿವೇಕ್ ಪಟೇಲ್ ಎಂದು ಗುರುತಿಸಲಾಗಿದ್ದು, ತನ್ನ ಸ್ನೇಹಿತನೊಂದಿಗೆ ಸೇರಿಕೊಂಡು ಈ ಕೃತ್ಯ ವೆಸಗಿದ್ದಾನೆ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು 2020ರಲ್ಲಿ ಬಂಧಿಸಲಾಗಿತ್ತು. ಆದರೆ ಒಂದು ವರ್ಷಗಳ ನಂತರ 2021ರಲ್ಲಿ ಜಾಮೀನಿನ ಮೇಲೆ ಆರೋಪಿ ಬಿಡುಗಡೆಯಾಗಿದ್ದನು ಎಂದು ಪೊಲೀಸ್ ಠಾಣೆಯ ಇನ್ಚಾರ್ಜ್ ಆಗಿರುವ ಆಸಿಫ್ ಇಕ್ಬಾಲ್ ತಿಳಿಸಿದ್ದಾರೆ.
ಘಟನೆ ಸಂಬಂಧ ದೂರು ನೀಡಿರುವ ಯುವತಿ ಆರೋಪಿಯು ಒಂದು ತಿಂಗಳ ಹಿಂದೆ ತನ್ನ ಸ್ನೇಹಿತನೊಂದಿಗೆ ತನ್ನ ಮನೆಗೆ ಬಲವಂತವಾಗಿ ನುಗ್ಗಿ ತನಗೆ ಚಾಕು ತೋರಿಸಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಆರೋಪಿ ಮತ್ತು ಆತನ ಸ್ನೇಹಿತ ಈ ಕೃತ್ಯದ ವೀಡಿಯೋ ಸೆರೆಹಿಡಿದಿದ್ದು, ತಾನು ನೀಡಿರುವ ದೂರನ್ನು ಹಿಂಪಡೆಯದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವನ್ನು ಪೋಸ್ಟ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಇದೀಗ ಈ ಸಂಬಂಧ ಪೊಲೀಸರು ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ್ದು, ಆರೋಪಿಗಳಿಬ್ಬರನ್ನು ಬಂಧಿಸಲು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: 10 ವರ್ಷ ದುಡಿದು SUV ಕಾರು ಖರೀದಿಸಿದ ಅಭಿಮಾನಿ – ಆನಂದ್ ಮಹೀಂದ್ರಾ ಮೆಚ್ಚುಗೆ ಮಾತು