ಸಾವಿನ ಅಂಚಲ್ಲಿದ್ದ ಅನಾಥ ಗರ್ಭಿಣಿ ಹಸುವಿಗೆ ಮರುಜನ್ಮ ನೀಡಿದ ಪಶುವೈದ್ಯರು

Public TV
1 Min Read
hbl cow

ಹುಬ್ಬಳ್ಳಿ: ಕೊರೊನಾ ಸೋಂಕಿನ ವಿರುದ್ಧ ಹೋರಾಟದಲ್ಲಿ ವಿಶ್ವದ ವೈದ್ಯರು ಮನುಕುಲದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಪಶುವೈದ್ಯರ ತಂಡ ಅನಾಥ ಗರ್ಭಿಣಿ ಹಸುವಿಗೆ ಮರುಜನ್ಮ ನೀಡಿದ ಹೃದಯಸ್ಪರ್ಶಿ ಪ್ರಸಂಗ ಹುಬ್ಬಳ್ಳಿಯ ಉಣಕಲ್ ಸಿದ್ದಪ್ಪಜ್ಜನ ಹೊಸಮಠದ ಆವರಣದಲ್ಲಿ ಜರುಗಿದೆ.

ಉಣಕಲ್ ಕ್ರಾಸ್ ರಾಮಲಿಂಗೇಶ್ವರ ದೇವಸ್ಥಾನದ ಬಯಲಿನಲ್ಲಿ ಪರಸ್ಪರ ಬಡಿದಾಡುತ್ತ ಬಂದ ನಾಲ್ಕಾರು ದನಗಳು ತುಂಬುಗರ್ಭಿಣಿ ಹಸುವೊಂದನ್ನು ಕೆಳಗೆ ಬೀಳಿಸಿ ದಾಳಿ ನಡೆಸಿದ್ದವು. ಈ ವೇಳೆ ಹಸುವಿನ ಹೊಟ್ಟೆಗೆ ಇರಿದು ಗಾಯಗೊಳಿಸಿದ್ದವು. ಹಲ್ಲೆಯಿಂದ ಪ್ರಜ್ಞೆ ತಪ್ಪಿ ಬಯಲಿನಲ್ಲಿ ನರಳುತ್ತ ಬಿದ್ದಿದ್ದ ಹಸುವಿನ ಉಪಚಾರಕ್ಕೆ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ರಾಜಣ್ಣ ಕೊರವಿ ಹಾಗೂ ಸಂಗಡಿಗರು ಮುಂದಾದರು.

hbl cow 1

ತಕ್ಷಣ ಉಣಕಲ್ ಪಶುವೈದ್ಯರನ್ನು ಕರೆದು ಪರಿಸ್ಥಿತಿ ವಿವರಿಸಿದಾಗ, ಗರ್ಭದಲ್ಲಿರುವ ಕರು ಸಾವನ್ನಪ್ಪಿದ್ದರೂ ಹಸುವನ್ನು ಉಳಿಸುವ ಪ್ರಯತ್ನಕ್ಕೆ ಮುಂದಾದರು. ವೈದ್ಯರ ಸಲಹೆಯ ಅನ್ವಯ ಹಸುವಿಗೆ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದಾಗ ಹಸುವನ್ನು ಟಂಟಂ ವಾಹನದ ಮೂಲಕ ಸಿದ್ದಪ್ಪಜ್ಜನ ಹೊಸಮಠದ ಆವರಣಕ್ಕೆ ಸ್ಥಳಾಂತರಿಸಿ, ಮಧ್ಯಾಹ್ನದಿಂದ ಸಂಜೆವರೆಗೆ ಉಣಕಲ್ ಹಾಗೂ ಹುಬ್ಬಳ್ಳಿ ಪಶುವೈದ್ಯರ ತಂಡ ಶಸ್ತ್ರಚಿಕಿತ್ಸೆಯನ್ನ ಯಶಸ್ವಿಯಾಗಿ ಮಾಡಿ ಮುಗಿಸಿದರು.

ಡಾ. ಈರಣ್ಣ ಸುಂಕದ, ಡಾ. ಶರಣು ಬದಾಮಿ, ಡಾ. ಹೊನ್ನಿನಾಯ್ಕರ ಹಾಗೂ ಸಿಬ್ಬಂದಿ ಕೆ.ಬಿ ಹುಬ್ಬಳ್ಳಿ, ಮೌನೇಶ ಹಾಗೂ ಎಸ್.ಕೆ ಗೌಡರ ಅವರು ಹಸುವಿನ ಹೊಟ್ಟೆಯಲ್ಲಿ ಸಾವನ್ನಪ್ಪಿದ್ದ ಕರುವನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರತಗೆದು ಚಿಕಿತ್ಸೆ ನೀಡಿದರು. ಸದ್ಯ ಪಶುವೈದ್ಯರ ತಂಡದ ಶ್ರಮ ಹಾಗೂ ಉಣಕಲ್ ಗ್ರಾಮಸ್ಥರ ಸಹಕಾರ ಆರೈಕೆಯಿಂದ ಹಸು ಚೇತರಿಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *