ಚಿಕ್ಕಬಳ್ಳಾಪುರ/ದೊಡ್ಡಬಳ್ಳಾಪುರ: ನಾಡೋಜ ಪ್ರಶಸ್ತಿ ಪುರಸ್ಕೃತ, ಸಾವಯವ ಕೃಷಿ ಪಂಡಿತ ಎಲ್. ನಾರಾಯಣರೆಡ್ಡಿ(80) ಇಂದು ಮುಂಜಾನೆ 5 ಗಂಟೆ ಸುಮಾರಿಗೆ ವಿಧಿವಶರಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮರಳೇನಹಳ್ಳಿ ಗ್ರಾಮದ ತೋಟದ ಮನೆಯಲ್ಲೇ ವಾಸವಾಗಿದ್ದ ನಾರಾಯಣರೆಡ್ಡಿಯವರು ಇಹಲೋಕ ತ್ಯಜಿಸಿದ್ದಾರೆ. ಅಂದಹಾಗೆ 80 ವರ್ಷ ವಯಸ್ಸಿನ ನಾರಾಯಣರೆಡ್ಡಿಯವರು ಕಳೆದ ಕೆಲ ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ತೀವ್ರವಾದ ಕಫ ಹಿನ್ನೆಲೆ ಇಂದು ಮುಂಜಾನೆ ತೋಟದ ಮನೆಯಲ್ಲಿ ನಿಧನರಾಗಿದ್ದಾರೆ.
Advertisement
Advertisement
ಕೃಷಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ನಾರಾಯಣರೆಡ್ಡಿ ಅವರು ಸಾವಯವ ಕೃಷಿ ಪಂಡಿತರೆಂದೇ ಪ್ರಖ್ಯಾತಿ ಗಳಿಸಿದ್ದಾರೆ. ಮೂಲತಃ ಬೆಂಗಳೂರಿನ ವೈಟ್ ಫೀಲ್ಡ್ ಸಮೀಪ ವರ್ತೂರು ಬಳಿ ಇರುವ ಸೊರೆಹುಣಸೆ ಇವರ ಸ್ವಗ್ರಾಮವಾಗಿದೆ. ಹೀಗಾಗಿ ಇವರ ಸ್ವಗ್ರಾಮ ಸೊರೆಹುಣಸೆ ಗ್ರಾಮದ ಹೊಲದಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಮುಂದಾಗಿದ್ದಾರೆ. ಮತ್ತೊಂದೆಡೆ ನಾರಾಯಣರೆಡ್ಡಿ ಅವರ ಮೂವರು ಪುತ್ರರಾದ ಮಂಜುನಾಥ್, ನಿತ್ಯಾನಂದ ಹಾಗೂ ಸಾಯಿರಾಮ್ ಸೇರಿದಂತೆ ಪತ್ನಿ ಸರೋಜಮ್ಮ ಹಾಗೂ ಸೊಸೆಯಂದಿರು, ಮೊಮ್ಮಕ್ಕಳನ್ನ ಅಗಲಿದ್ದಾರೆ.
Advertisement
ಕಿರಿಯ ಮಗ ಸಾಯಿರಾಮ್, ಸೊಸೆ, ಮೊಮ್ಮಕ್ಕಳು ಹಾಗೂ ಪತ್ನಿ ಸರೋಜಮ್ಮ ಜೊತೆ ಮರಳೇನಹಳ್ಳಿ ಗ್ರಾಮದ ತೋಟದ ಮನೆಯಲ್ಲೇ ನಾರಾಯಣರೆಡ್ಡಿ ಅವರು ವಾಸವಾಗಿದ್ದರು. ಹಿರಿಯ ಮಗ ಹಾಗೂ ಮತ್ತೋರ್ವ ಮಗ ಸೊರಹುಣಸೆ ಗ್ರಾಮದಲ್ಲೇ ವಾಸವಾಗಿದ್ದರು. ಕಳೆದ 25 ವರ್ಷಗಳ ಹಿಂದೆ ಮರಳೇನಹಳ್ಳಿ ಗ್ರಾಮಕ್ಕೆ ಬಂದಿದ್ದ ನಾರಾಯಣರೆಡ್ಡಿ ಅವರು 25 ಎಕರೆ ಜಮೀನಿನಲ್ಲಿ ಸಾವಯವ ಕೃಷಿಕಾಯಕ ಮಾಡುತ್ತಿದ್ದರು. 25 ಎಕೆರೆಯಲ್ಲಿ ಆಡು ಮುಟ್ಟಿದ ಸೊಪ್ಪಿಲ್ಲ ಅನ್ನೋ ಹಾಗೆ ಎಲ್ಲಾ ಬಗೆಯ ವಿವಿಧ ಜಾತಿಯ ಮರ ಗಿಡಗಳನ್ನ ಸಾವಯವ ಕೃಷಿ ಮೂಲಕ ಸಾಕಿ ಸಲುಹಿ ಬೆಳೆಸುವ ಮೂಲಕ ಮನೆ ಮಾತಾಗಿದ್ದರು.
Advertisement
ಇದಲ್ಲದೆ ಪ್ರತಿ ಭಾನುವಾರ ಇವರ ತೋಟದ ಮನೆಯಲ್ಲಿ ಸಾವಯವ ಕೃಷಿ ಕಣ್ತುಂಬಿಕೊಳ್ಳೋಕೆ ಬರುತ್ತಿದ್ದ ಕೃಷಿ ಪ್ರಿಯ ಅಥಿತಿಗಳಿಗೆ ಉಪನ್ಯಾಸ ನೀಡುತ್ತಿದ್ದರು. ಬರೀ ರಾಜ್ಯ ದೇಶ ಅಷ್ಟೇ ಅಲ್ಲದೇ ವಿದೇಶದಿಂದಲೂ ಸಹ ಇವರ ಸಾವಯವ ಕೃಷಿ ಬಗ್ಗೆ ಸಂಶೋಧನೆ ಮಾಡಲು ಹಲವು ವಿದ್ಯಾರ್ಥಿಗಳು, ಕೃಷಿ ಕಾಯಕ ಆಸಕ್ತರು ಸಹ ಬಂದು ಹೋಗುತ್ತಿದ್ದರು. ಹಲವು ಬಾರಿ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಇವರ ಕೃಷಿ ಉಪನ್ಯಾಸಗಳನ್ನ ನಡೆಸಿಕೊಡುತ್ತಿದ್ದರು. ಹೀಗಾಗಿ `ಕೃಷಿ ಮೇಷ್ಟ್ರು’ ಎಂದೇ ಫೇಮಸ್ ಆಗಿದ್ದರು.
ಸದಾ ಸಾವಯವ ಕೃಷಿ ಕಾಯಕ ಮಾಡುವ ಮೂಲಕ ಸಮಾಜಕ್ಕೆ ಸಾವಯವ ಕೃಷಿಯ ಮಹತ್ವವನ್ನ ಸಾರುತ್ತಿದ್ದರು. ಇನ್ನೂ ಇವರು ಯಾವುದೇ ಖಾಯಿಲೆ ಅನಾರೋಗ್ಯಕ್ಕೂ ತುತ್ತಾದರೂ ಆಸ್ಪತ್ರೆಗೆ ಹೋಗುತ್ತಿರಲಿಲ್ಲವಂತೆ. ಇಂಗ್ಲೀಷ್ ಔಷಧಿ ಬಗ್ಗೆ ತಿರಸ್ಕಾರ ಮನೋಭಾವ ಹೊಂದಿದ್ದರು. ಹೀಗಾಗೇ ಹುಷಾರಿಲ್ಲದಿದ್ದರೂ ಒಂದು ದಿನವೂ ಆಸ್ಪತ್ರೆಗೆ ಹೋಗಿರಲಿಲ್ಲ. ಇದರಿಂದ ಅವರನ್ನ ಬೇಗ ಕಳೆದಕೊಳ್ಳಬೇಕಾಯಿತು ಅಂತ ಅವರನ್ನು ಹತ್ತಿರದಿಂದ ಬಲ್ಲವರು ಹೇಳಿದ್ದಾರೆ.
ಸದ್ಯ ದೊಡ್ಡಬಳ್ಳಾಪುರ ನಗರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ತದನಂತರ ಪಾರ್ಥೀವ ಶರೀರವನ್ನ ಸ್ವಗ್ರಾಮ ಸೊರಹುಣಸೆಗೆ ತೆಗೆದುಕೊಂಡು ಹೋಗಿ ಸಂಜೆ ಅಂತ್ಯಕ್ರಿಯೆ ನೇರವೇರಿಸಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv