ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಾಡಾನೆ (Elephant) ಸಮಸ್ಯೆಯಿಂದ ಜೀವ ಭಯದಲ್ಲಿ ಬದುಕುತ್ತಿರುವ ಜನರಿಗೆ ಮತ್ತೊಂದು ಗಂಭೀರ ಸಮಸ್ಯೆ ಎದುರಾಗಿದೆ. ಗ್ರಾಮೀಣ ಪ್ರದೇಶಗಳಾದ ಬಾಳೆಲೆ, ಶ್ರೀಮಂಗಲ, ವೆಸ್ಟ್ ನೆಮ್ಮೆಲೆ, ಆನೆಚೌಕೂರು ಭಾಗದ ತೋಟ ಗದ್ದೆಗಳಲ್ಲಿ ಮೇಯಲು ಬಿಟ್ಟಿರುವ ಹಸುಗಳ ಮೇಲೆ ಹುಲಿಯೊಂದು (Tiger) ನಿರಂತರವಾಗಿ ದಾಳಿ ನಡೆಸುತ್ತಿದೆ.
ಕಳೆದ ಎರಡು ತಿಂಗಳ ಅವಧಿಯಲ್ಲಿ ಸುಮಾರು 8 ರಾಸುಗಳನ್ನು ಹುಲಿ ಬಲಿ ಪಡೆದುಕೊಂಡಿದೆ. ಹೀಗಾಗಿ ಈ ಊರಿನ ಗ್ರಾಮೀಣ ಪ್ರದೇಶಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈಗ ಅರಣ್ಯ ಇಲಾಖೆಯ (Forest Department) ಸಿಬ್ಬಂದಿಗಳು ಹುಲಿ ಸೆರೆಗೆ ಮುಂದಾಗಿದ್ದಾರೆ. ಸಾಕಾನೆ ಸಹಾಯದಿಂದ ಹುಲಿ ಸೇರೆಗೆ ಮುಂದಾಗಿರುವ ಅರಣ್ಯ ಇಲಾಖೆ ಸಿಬ್ಬಂದಿ, ಪ್ರತ್ಯೇಕ ತಂಡ ಕಟ್ಟಿಕೊಂಡು ಹುಲಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಬೋನಿಗೆ ಬೀಳದ ವ್ಯಾಘ್ರನಿಗೆ ಸಾಕಾನೆಗಳಾದ ಅಶೋಕ ಹಾಗೂ ಅಭಿಮನ್ಯು ಆನೆಗಳ ನೇತೃತ್ವದಲ್ಲಿ ಹುಲಿಗೆ ಅರವಳಿಕೆ ಮದ್ದು ನೀಡಿ ಸೆರೆಹಿಡಿಯುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಲ್ಲದೇ ಬಾಳೆಲೆ ವ್ಯಾಪ್ತಿಯ ದೇವನೂರು ಸುತ್ತಮುತ್ತ ಕಳೆದ ಒಂದು ತಿಂಗಳಿನಿಂದ 7 ಜಾನುವಾರುಗಳನ್ನು ಹುಲಿ ಕೊಂದಿದ್ದು, ಕ್ಯಾಮೆರಾದಲ್ಲಿ ಹುಲಿಯ ಗುರುತು ಪತ್ತೆಯಾಗಿದೆ. ಹುಲಿ ಗಣತಿಯಲ್ಲಿ ದೊರೆತಿರುವ ಮಾಹಿತಿಯಂತೆ ‘ನಾಗರಹೊಳೆ ಯು 61’ ಎಂದು ಗುರುತಿಸಲಾಗಿದೆ. ಇದು ಗಾತ್ರದಲ್ಲಿ ಸಣ್ಣದಾಗಿರುವ ಗಂಡು ಹುಲಿ ಎಂದು ತಿಳಿದುಬಂದಿದೆ.
ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಅವರು ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲದೇ ಈ ಹುಲಿಯ ಚಲನವಲನಗಳ ಬಗ್ಗೆ ಹಾಗೂ ಗ್ರಾಮಸ್ಥರಿಗೆ ಮೂಡಿರುವ ಆತಂಕದ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಾಗೂ ರಾಜ್ಯ ವನ್ಯಜೀವಿ ಪಿಸಿಸಿಎಫ್ ಪುಷ್ಕರ್ ಅವರೊಂದಿಗೆ ಶಾಸಕ ಎ.ಎಸ್.ಪೊನ್ನಣ್ಣ ಸಮಾಲೋಚನೆ ನಡೆಸಿ ಹುಲಿ ಸೆರೆಗೆ ತಕ್ಷಣ ಅನುಮತಿ ಕೊಡಿಸಿದ್ದಾರೆ.