IPL 2025 ಫೈನಲ್‌ ಪಂದ್ಯದ ವೇಳೆ ʻಆಪರೇಷನ್ ಸಿಂಧೂರʼ ವಿಜಯೋತ್ಸವ – ಸೇನೆಗೆ ಗೌರವ

Public TV
2 Min Read
IPL 2025 2 1

ಮುಂಬೈ: 18ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿ ಇನ್ನೇನು ಕೊನೆಯ ಹಂತಕ್ಕೆ ಬಂದುನಿಂತಿದೆ. ಇಂದು ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಲಕ್ನೋ ಸೂಪರ್‌ ಜೈಂಟ್ಸ್‌ ನಡುವೆ ಲೀಗ್‌ ಸುತ್ತಿನ ಕೊನೆಯ ಪಂದ್ಯ ನಡೆಯಲಿದೆ. ಈ ಆವೃತ್ತಿಯ ಐಪಿಎಲ್‌ ಫೈನಲ್‌ ಪಂದ್ಯದ ಸಮಾರೋಪ ಸಮಾರಂಭವನ್ನು ಭಾರತೀಯ ಸೈನಿಕರಿಗೆ (Indian Soldiers) ಅರ್ಪಿಸಲು ಬಿಸಿಸಿಐ ನಿರ್ಧರಿಸಿದೆ.

ಜೂನ್‌ 3ರಂದು ನಡೆಯಲಿರುವ ಐಪಿಎಲ್‌ ಫೈನಲ್‌ ಪಂದ್ಯದ ಸಮಾರೋಪದಲ್ಲಿ ʻಆಪರೇಷನ್ ಸಿಂಧೂರʼ (Operation Sindoor) ವಿಜಯೋತ್ಸವ ಆಚರಿಸಲು ಬಿಸಿಸಿಐ (BCCI) ನಿರ್ಧರಿಸಿದೆ.

Operation Sindoor Tribute

ಹೌದು. ಕಳೆದ ಏಪ್ರಿಲ್‌ 22ರಂದು ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನ ಹತ್ಯೆಗೈಯಲಾಗಿತ್ತು. ಇದಕ್ಕೆ ʻಆಪರೇಷನ್‌ ಸಿಂಧೂರʼ ಕಾರ್ಯಾಚರಣೆ ಮೂಲಕ ಭಾರತ (India) ಪ್ರತೀಕಾರ ತೀರಿಸಿಕೊಂಡಿತ್ತು. ಅಲ್ಲದೇ ಪಾಕಿಸ್ತಾನದ ದಾಳಿಗಳನ್ನ ವಿಫಲಗೊಳಿಸಿತ್ತು. ಭಾರತೀಯ ಸೇನೆಯ ಈ ಕಾರ್ಯವನ್ನು ಗೌರವಿಸುವ ಸಲುವಾಗಿ ಐಪಿಎಲ್‌ ಸಮಾರೋಪ ಸಮಾರಂಭದಲ್ಲಿ ʻಆಪರೇಷನ್‌ ಸಿಂಧೂರʼ ವಿಜಯೋತ್ಸವ ಆಚರಿಸಲು ನಿರ್ಧರಿಸಿದೆ.

ನಮ್ಮ ಸಶಸ್ತ್ರ ಪಡೆಗಳ ಶೌರ್ಯ, ಸಾಹಸ ಮತ್ತು ನಿಸ್ವಾರ್ಥ ಸೇವೆಯನ್ನು ಬಿಸಿಸಿಐ ಗೌರವಿಸುತ್ತದೆ. ಆಪರೇಷನ್ ಸಿಂಧೂರ್ ಅಡಿಯಲ್ಲಿ ಅವರ ವೀರೋಚಿತ ಪ್ರಯತ್ನಗಳು ರಾಷ್ಟ್ರವನ್ನು ರಕ್ಷಿಸುತ್ತಿವೆ. ಇದರ ಗೌರವಾರ್ಥವಾಗಿ, ಐಪಿಎಲ್​ ಫೈನಲ್ ಪಂದ್ಯವನ್ನು ಸಶಸ್ತ್ರ ಪಡೆಗಳಿಗೆ ಅರ್ಪಿಸಲು ಮತ್ತು ನಮ್ಮ ವೀರ ಯೋಧರನ್ನು ಗೌರವಿಸಲು ನಾವು ನಿರ್ಧರಿಸಿದ್ದೇವೆ. ಅದಕ್ಕಾಗಿ ಸಮಾರೋಪಕ್ಕೆ ಬಿಸಿಸಿಐ ಮೂರು ಸೇನೆಗಳ ಮುಖ್ಯಸ್ಥರನ್ನು ಆಹ್ವಾನಿಸಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ. ಐಪಿಎಲ್ ಫೈನಲ್ ಪಂದ್ಯದ ಆರಂಭಕ್ಕೂ ಮುನ್ನ ಮಿಲಿಟರಿ ಬ್ಯಾಂಡ್‌ನ ಪ್ರದರ್ಶನವೂ ನಡೆಯಲಿದೆ ತಿಳಿದು ಬಂದಿದೆ.

Punjab Kings 3

4 ತಂಡಗಳು ಪ್ಲೇ ಆಫ್‌ಗೆ
ಸೋಮವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಮಣಿಸಿರುವ ಪಂಜಾಬ್‌ ಕಿಂಗ್ಸ್‌ ಕ್ವಾಲಿಫೈಯರ್‌-1ಕ್ಕೆ ಅರ್ಹತೆ ಪಡೆದಿದೆ. ಇನ್ನು ಮುಂಬೈ ಎಲಿಮಿನೇಟರ್‌ನಲ್ಲಿ ಪಂದ್ಯವನ್ನಾಡಲಿದೆ. ಇಂದು (ಮಂಗಳವಾರ) ಆರ್‌ಸಿಬಿ ಹಾಗೂ ಲಕ್ನೋ ನಡುವಣ ಲೀಗ್‌ ಹಂತದ ಕೊನೆಯ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ ಪಂಜಾಬ್‌ ವಿರುದ್ಧ ಕ್ವಾಲಿಫೈಯರ್‌ 1ನಲ್ಲಿ ಪಂಜಾಬ್‌ ವಿರುದ್ಧ ಸೆಣಸಲಿದೆ. ಇಲ್ಲವೇ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ವಿರುದ್ಧ ಆಡಲಿದೆ.

ಐಪಿಎಲ್‌ ಪ್ಲೇ ಆಫ್‌ ವೇಳಾಪಟ್ಟಿ ಹೀಗಿದೆ…
ಮೇ 29: ಮೊದಲ ಕ್ವಾಲಿಫೈಯರ್ ಪಂದ್ಯ (ಪಂಜಾಬ್ ಕಿಂಗ್ಸ್ vs ತಂಡ-2), ಮುಲ್ಲನ್‌ಪುರ್ (ಚಂಡೀಗಢ), ಸಂಜೆ 7:30
ಮೇ 30: ಎಲಿಮಿನೇಟರ್ ಪಂದ್ಯ (ತಂಡ 3 vs ತಂಡ-4), ಮುಲ್ಲನ್‌ಪುರ್ (ಚಂಡೀಗಢ), ಸಂಜೆ 7:30
ಜೂನ್ 1: ದ್ವಿತೀಯ ಕ್ವಾಲಿಫೈಯರ್ ಪಂದ್ಯ (ಸೋತವರು Q1 vs ಎಲಿಮಿನೇಟರ್ ವಿನ್ನರ್), ಅಹಮದಾಬಾದ್, ಸಂಜೆ 7:30
ಜೂನ್ 3: ಫೈನಲ್ (ವಿಜೇತ Q1 vs ವಿಜೇತ Q2), ಅಹಮದಾಬಾದ್, ಸಂಜೆ 7:30

Share This Article