ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಗೆ 9 ಉಗ್ರರ ಅಡಗು ತಾಣಗಳು ನಾಶವಾಗಿವೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೇನೆ ಈ ಕಾರ್ಯಾಚರಣೆ ನಡೆಸಿತ್ತು. ಹಾಗಾದರೆ, ಯಾವ್ಯಾವ ಪ್ರದೇಶದಲ್ಲಿ ಯಾವ ಉಗ್ರ ಸಂಘಟನೆ ಇತ್ತು? ಅವುಗಳ ಪಾತ್ರ ಏನು ಎಂಬುದರ ಬಗ್ಗೆ ತಿಳಿಯೋಣ.
1. ಮರ್ಕಝ್ ಸುಭಾನ್ ಅಲ್ಲಾ, ಬಹವಾಲ್ಪುರ್ (ಪಾಕಿಸ್ತಾನ)
ಇದು 2015 ರಿಂದ ಕಾರ್ಯನಿರ್ವಹಿಸುತ್ತಿದೆ. 15 ಎಕರೆ ಪ್ರದೇಶದಲ್ಲಿ ಈ ಶಿಬಿರವಿದ್ದು, ಜೈಶ್-ಎ-ಮೊಹಮ್ಮದ್ (JeM)ನ ಮುಖ್ಯ ಕೇಂದ್ರವಾಗಿದೆ. ಇದನ್ನು ತರಬೇತಿ ಮತ್ತು ಮೂಲಭೂತೀಕರಣಕ್ಕಾಗಿ ಬಳಸಲಾಗುತ್ತದೆ. ಇದು 2019, ಫೆಬ್ರವರಿ 14ರ ಪುಲ್ವಾಮಾ ದಾಳಿಗೆ ನೇರವಾಗಿ ಸಂಬಂಧಿಸಿದೆ. ಮೌಲಾನಾ ಮಸೂದ್ ಅಜರ್, ಮುಫ್ತಿ ಅಬ್ದುಲ್ ರೌಫ್ ಅಸ್ಗರ್ ಮತ್ತು ಮೌಲಾನಾ ಅಮ್ಮರ್ ಸೇರಿದಂತೆ ಹಿರಿಯ ಜೆಇಎಂ ನಾಯಕರನ್ನು ಹೊಂದಿದೆ. ಈ ಸೈಟ್ ಶಸ್ತ್ರಾಸ್ತ್ರಗಳು, ಧಾರ್ಮಿಕ ಮತ್ತು ಕಾರ್ಯಕರ್ತರ ದೈಹಿಕ ತರಬೇತಿಗಾಗಿ ಮತ್ತು ಭಾರತ ವಿರೋಧಿ ಜಿಹಾದಿ ವಾಕ್ಚಾತುರ್ಯವನ್ನು ಪ್ರಚಾರ ಮಾಡಲು ಹೆಸರುವಾಸಿಯಾಗಿದೆ.
2. ಮರ್ಕಜ್ ತೈಬಾ, ಮುರಿಡ್ಕೆ (ಪಾಕಿಸ್ತಾನ)
ನಂಗಲ್ ಸಹ್ದಾನ್‌ನಲ್ಲಿರುವ ಲಷ್ಕರ್-ಎ-ತೈಬಾ (LeT) ನ ಪ್ರಮುಖ ತರಬೇತಿ ಸೌಲಭ್ಯ ಕೇಂದ್ರವಿದು. 2000 ರಲ್ಲಿ ಸ್ಥಾಪನೆಯಾದ ಈ ಉಗ್ರರ ಶಿಬಿರದಲ್ಲಿ ವರ್ಷಕ್ಕೆ 1 ಸಾವಿರ ಉಗ್ರರಿಗೆ ತರಬೇತಿ ನೀಡಿ ಭಯೋತ್ಪಾದಕ ಕೃತ್ಯಗಳಿಗೆ ಕಳುಹಿಸಲಾಗುತ್ತೆ. ಈ ಹಿಂದೆ ಒಸಾಮಾ ಬಿನ್ ಲಾಡೆನ್ ಈ ಶಿಬಿರಕ್ಕೆ ಆರ್ಥಿಕ ಸಹಾಯ ಒದಗಿಸಿದ್ದರು. ಅಜ್ಮಲ್ ಕಸಬ್ ಸೇರಿದಂತೆ 26/11 ಮುಂಬೈ ದಾಳಿಕೋರರಿಗೆ ಇಲ್ಲಿ ತರಬೇತಿ ನೀಡಲಾಗಿತ್ತು. 26/11 ರ ಪ್ರಮುಖ ಸಂಚುಕೋರರಾದ ಡೇವಿಡ್ ಹೆಡ್ಲಿ, ತಹವ್ವೂರ್ ರಾಣಾ ಮತ್ತು ಇತರರು ಈ ಸ್ಥಳಕ್ಕೆ ಭೇಟಿ ನೀಡಿದ್ರು.
3. ಸರ್ಜಲ್/ತೆಹ್ರಾ ಕಲಾನ್ ಉಡಾವಣಾ ಸೌಲಭ್ಯ (ನರೋವಾಲ್, ಪಾಕಿಸ್ತಾನ)
ಜಮ್ಮು ಮತ್ತು ಕಾಶ್ಮೀರಕ್ಕೆ ಭಯೋತ್ಪಾದಕ ಒಳನುಸುಳುವಿಕೆಗೆ ಬಳಸಲಾಗುತ್ತಿದ್ದ ಜೆಇಎಂ ಸೌಲಭ್ಯ, ಪ್ರಾಥಮಿಕ ಆರೋಗ್ಯ ಕೇಂದ್ರದಿಂದ (PHC) ರಹಸ್ಯವಾಗಿ ಕಾರ್ಯನಿರ್ವಹಿಸುತ್ತದೆ. ಸಾಂಬಾ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿಯಿಂದ ಕೇವಲ 6 ಕಿಮೀ ದೂರದಲ್ಲಿರುವ ಇದನ್ನು ಗಡಿಯಾಚೆಗಿನ ಸುರಂಗಗಳನ್ನು ಅಗೆಯಲು ಮತ್ತು ಭಾರತೀಯ ಪ್ರದೇಶಕ್ಕೆ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲು ಡ್ರೋನ್‌ಗಳನ್ನು ಉಡಾಯಿಸಲು ಸಹ ಬಳಸಲಾಗುತ್ತಿತ್ತು.
4. ಮೆಹಮೂನಾ ಜೋಯಾ ಸೌಲಭ್ಯ, ಸಿಯಾಲ್‌ಕೋಟ್ (ಪಾಕಿಸ್ತಾನ)
ಸರ್ಕಾರಿ ಶಾಲೆಯ ಆವರಣದಿಂದ ಹಿಜ್ಬುಲ್ ಮುಜಾಹಿದ್ದೀನ್ (HM) ನಡೆಸುತ್ತಿರುವ ಈ ಸ್ಥಳವು ಜಮ್ಮು ಪ್ರದೇಶಕ್ಕೆ HM ಕೇಡರ್‌ಗಳ ಒಳನುಸುಳುವಿಕೆ ಮತ್ತು ಶಸ್ತ್ರಾಸ್ತ್ರ ತರಬೇತಿಯನ್ನು ನೀಡುತ್ತದೆ. ಈ ಸೌಲಭ್ಯವನ್ನು HM ಕಮಾಂಡರ್ ಮೊಹಮ್ಮದ್ ಇರ್ಫಾನ್ ಖಾನ್ ಅಲಿಯಾಸ್ ಇರ್ಫಾನ್ ತಾಂಡಾ ನೋಡಿಕೊಳ್ಳುತ್ತಾನೆ. 20–25 ಸಕ್ರಿಯ ಭಯೋತ್ಪಾದಕರಿಗೆ ಆಶ್ರಯ ನೀಡಲಾಗಿದೆ.
5. ಮರ್ಕಜ್ ಅಹ್ಲೆ ಹದೀಸ್ ಬರ್ನಾಲಾ, ಭಿಂಬರ್ (PoJK)
ಬರ್ನಾಲಾ ಪಟ್ಟಣದ ಬಳಿ ಕಾರ್ಯತಂತ್ರ ರೂಪಿಸುವ ಎಲ್‌ಇಟಿ ಕೇಂದ್ರ. ಭಯೋತ್ಪಾದಕರನ್ನು ಒಳನುಸುಳಲು ಮತ್ತು ಪೂಂಚ್-ರಾಜೌರಿ-ರಿಯಾಸಿ ವಲಯಕ್ಕೆ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಲು ಬಳಸಲಾಗುತ್ತದೆ. 100–150 ಭಯೋತ್ಪಾದಕರಿಗೆ ಆಶ್ರಯ ನೀಡುವ ಸಾಮರ್ಥ್ಯವಿರುವ ಈ ಶಿಬಿರವನ್ನು ಖಾಸಿಮ್ ಗುಜ್ಜರ್, ಖಾಸಿಮ್ ಖಾಂಡಾ ಮತ್ತು ಅನಸ್ ಜರಾರ್ ಸೇರಿದಂತೆ ಎಲ್‌ಇಟಿ ನಾಯಕರು ನಿರ್ವಹಿಸುತ್ತಿದ್ದರು.
6. ಮರ್ಕಜ್ ಅಬ್ಬಾಸ್, ಕೋಟ್ಲಿ (PoJK)
ಮುಫ್ತಿ ಅಬ್ದುಲ್ ರೌಫ್ ಅಸ್ಗರ್‌ನ ಆಪ್ತ ಸಹಾಯಕ ಹಫೀಜ್ ಅಬ್ದುಲ್ ಶಕೂರ್ ಅಲಿಯಾಸ್ ಖಾರಿ ಜರ್ರಾರ್ ನೇತೃತ್ವದ ಜೆಇಎಂನ ಪ್ರಮುಖ ಭದ್ರಕೋಟೆ ಇದು. ಈ ಸ್ಥಳವು 100–125 ಕಾರ್ಯಕರ್ತರಿಗೆ ತರಬೇತಿ ನೀಡಿ, ಭಯೋತ್ಪಾದಕ ಕೃತ್ಯಗಳನ್ನ ನಡೆಸಲು, ಜಮ್ಮು ಮತ್ತು ಕಾಶ್ಮೀರದಲ್ಲಿ ಒಳನುಸುಳುವಿಕೆ ಮತ್ತು ಸಂಚು ರೂಪಿಸಲು ಪ್ಲ್ಯಾನ್ ಮಾಡುತ್ತದೆ.
7. ಮಸ್ಕರ್ ರಹೀಲ್ ಶಾಹಿದ್, ಕೋಟ್ಲಿ (PoJK)
ಹೆಚ್‌ಎಂನ (ಹಿಜ್ಬುಲ್ ಮುಜಾಹಿದ್ದೀನ್) ಅತ್ಯಂತ ಹಳೆಯ ಮತ್ತು ಅತ್ಯಂತ ಸಕ್ರಿಯ ಶಿಬಿರಗಳಲ್ಲಿ ಇದು ಕೂಡ ಒಂದು. 150–200 ಭಯೋತ್ಪಾದಕರಿಗೆ ತರಬೇತಿ ನೀಡಿ ಕೈಗೆ ಶಸ್ತ್ರಾಸ್ತ್ರಗಳನ್ನ ನೀಡುತ್ತದೆ. ದೈಹಿಕ ಕಸರತ್ತುಗಳ ಜೊತೆಗೆ ವಿಶೇಷ ಸ್ನೈಪರ್, ಬಿಎಟಿ (ಬಾರ್ಡರ್ ಆಕ್ಷನ್ ಟೀಮ್) ಮತ್ತು ಗುಡ್ಡಗಾಡು ಪ್ರದೇಶದಲ್ಲಿ ಕಾರ್ಯಾಚರಣೆಗಳನ್ನ ಮಾಡುವುದು, ಜೀವ ಹಾನಿಯಾಗದಂತೆ ಹೇಗೆ ಪ್ರಾಣ ಉಳಿಸಿಕೊಳ್ಳಬಹುದೆಂದು ತರಬೇತಿಯನ್ನು ನೀಡಲಾಗುತ್ತಿತ್ತು.
8. ಶಾವಾಯಿ ನಲ್ಲಾ ಕ್ಯಾಂಪ್, ಮುಜಫರಾಬಾದ್ (PoJK)
ಬೈತ್-ಉಲ್-ಮುಜಾಹಿದ್ದೀನ್ ಎಂದೂ ಕರೆಯಲ್ಪಡುವ ಈ ಎಲ್‌ಇಟಿ ಶಿಬಿರವು ನೇಮಕಾತಿ ಮತ್ತು ತರಬೇತಿ ಕೇಂದ್ರವಾಗಿದೆ. 26/11 ದಾಳಿಕೋರರೊಂದಿಗೆ ಸಂಪರ್ಕ ಹೊಂದಿದ್ದು, ಧಾರ್ಮಿಕ ಬೋಧನೆ ಮತ್ತು ಶಸ್ತ್ರಾಸ್ತ್ರ ನಿರ್ವಹಣೆಯನ್ನು ಒಳಗೊಂಡ ದೌರಾ-ಎ-ಆಮ್ ತರಬೇತಿಯನ್ನು ನೀಡುತ್ತದೆ. ಪಾಕಿಸ್ತಾನಿ ಐಎಸ್‌ಐ ಮತ್ತು ಸೈನ್ಯವು ಈ ಸೌಲಭ್ಯದಲ್ಲಿ ಶಸ್ತ್ರಾಸ್ತ್ರ ತರಬೇತಿಯನ್ನು ಒದಗಿಸುತ್ತವೆ ಎಂದು ಹೇಳಲಾಗುತ್ತಿದೆ. ಇದು 200–250 ಕಾರ್ಯಕರ್ತರಿಗೆ ಇಲ್ಲಿ ಉತ್ತರ ಕಾಶ್ಮೀರ ಒಳನುಸುಳಿಗೆ ಭಯೋತ್ಪಾದಕ ಕೃತ್ಯಗಳನ್ನ ಮಾಡಲು ತರಬೇತಿ ನೀಡುತ್ತದೆ.
9. ಮರ್ಕಜ್ ಸೈಯದ್ನಾ ಬಿಲಾಲ್, ಮುಜಫರಾಬಾದ್ (PoJK)
ಮುಜಫರಾಬಾದ್‌ನ ಕೆಂಪುಕೋಟೆಯ ಎದುರಿನ ಪ್ರಮುಖ ಜೆಇಎಂ ಶಿಬಿರ ಇದು. ಈ ಶಿಬಿರವನ್ನ ಜಮ್ಮು-ಕಾಶ್ಮೀರ ಗಡಿಯೊಳಗೆ ಒಳನುಸುಳಲು ಸಾರಿಗೆ ಸೌಲಭ್ಯವಾಗಿ ಬಳಸಲಾಗುತ್ತದೆ. ಇಲ್ಲಿ 50–100 ಜೆಇಎಂ ಕಾರ್ಯಕರ್ತರಿದ್ದು, ಈ ಸೌಲಭ್ಯವನ್ನು ಮುಫ್ತಿ ಅಸ್ಗರ್ ಖಾನ್ ಕಾಶ್ಮೀರಿ ನೇತೃತ್ವ ವಹಿಸಿದ್ದಾನೆ. ಪಾಕ್ ಸೇನೆಯ ಎಸ್‌ಎಸ್‌ಜಿ ಕಮಾಂಡೋಗಳು ಈ ಸ್ಥಳದಲ್ಲಿ ಕಾರ್ಯಕರ್ತರಿಗೆ ಸುಧಾರಿತ ಯುದ್ಧ ತರಬೇತಿಯನ್ನು ನೀಡುತ್ತಾರೆ ಎಂದು ಹೇಳಲಾಗುತ್ತಿದೆ.