ತುಮಕೂರು: ಸಿದ್ದರಾಮಯ್ಯರನ್ನು ಮತ್ತೆ ಮುಖ್ಯಮಂತ್ರಿ ಮಾಡಿದರೆ ಮಾತ್ರ ಮೈತ್ರಿ ಸರ್ಕಾರ ಉಳಿಯಲಿದೆ ಎಂದು ಕಾಂಗ್ರೆಸ್ ನ ಮಾಜಿ ಶಾಸಕ ಕೆ.ಎನ್ ರಾಜಣ್ಣ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ರಾಜಕೀಯ ಬೆಳವಣಿಗೆಯಲ್ಲಿ ಆಪರೇಷನ್ ಕಮಲದ ಪಾತ್ರವಿಲ್ಲ. ಮೈತ್ರಿ ಸರ್ಕಾರದ ವಿರುದ್ಧ ಶಾಸಕರು ಅಸಮಾಧಾನಗೊಂಡು ರಾಜೀನಾಮೆ ಕೊಟ್ಟಿದ್ದಾರೆ. ಹಾಗಾಗಿ ಎಲ್ಲಾ ಅತೃಪ್ತ ಶಾಸಕರು ಸಮಾಧಾನ ಆಗಬೇಕಾದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಬೇಕು ಎಂದು ರಾಜಣ್ಣ ಅಭಿಪ್ರಯಾಪಟ್ಟಿದ್ದಾರೆ.
ಬಿಜೆಪಿಯನ್ನ ಅಧಿಕಾರದಿಂದ ದೂರ ಇಡಬೇಕು ಅಂದರೆ ಸಿದ್ದರಾಮಯ್ಯರನ್ನ ಸಿಎಂ ಮಾಡಬೇಕು. ಹಾಗಾದ್ರೆ ಮಾತ್ರ ಸಮ್ಮಿಶ್ರ ಸರ್ಕಾರ ಉಳಿಯಲಿದೆ. ಇಲ್ಲ ಅಂದರೆ ಯಡಿಯೂರಪ್ಪ ನಾಲ್ಕೈದು ದಿನದಲ್ಲಿ ಮುಖ್ಯಮಂತ್ರಿ ಆಗಲಿದ್ದಾರೆ. ಖರ್ಗೆ ಅವರನ್ನು ಸಿಎಂ ಮಾಡ್ತಾರೆ ಎಂದು ದೇವೇಗೌಡರು ಹೇಳಿದ್ರು. ಅವರು ಹೇಳಿದ್ದಂತೆ ಯಾವತ್ತೂ ನಡೆದುಕೊಂಡಿಲ್ಲ. ಅವರು ಹೇಳಿದ್ದೆಲ್ಲಾ ಭಗವದ್ಗೀತೆನಾ ಎಂದು ಪ್ರಶ್ನಿಸಿದ್ದಾರೆ.
ಇಂದು ಕೂಡ ನಾಲ್ಕೈದು ಶಾಸಕರು ರಾಜೀನಾಮೆ ಕೊಡಲಿದ್ದಾರೆ. ಇದು ಆಪರೇಷನ್ ಕಮಲ ಅಲ್ಲ. ಸರ್ಕಾರದ ಮೇಲಿನ ಅಸಮಾಧಾನದಿಂದ ರಾಜೀನಾಮೆ ಕೊಟ್ಟಿದ್ದಾರೆ.
ಮುಂಬೈನಲ್ಲಿರುವ ಶಾಸಕರನ್ನು ಕರೆತರಲು ನಾಯಕರ ಜೊತೆ ನಾನು ಹೋಗುತ್ತಿದ್ದೇನೆ. ಶಾಸಕ ಮುನಿರತ್ನ ರಾಮಲಿಂಗಾ ರೆಡ್ಡಿ, ಸೇರಿದಂತೆ ಹಲವರು ಇರಲಿದ್ದಾರೆ. ವಾಪಸ್ ಕರೆದುಕೊಂಡು ಬಂದು ಸರ್ಕಾರ ಉಳಿಸುವ ಪ್ರಯತ್ನ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.