– ಕಾಂಗ್ರೆಸ್ ಶಾಸಕರೊಬ್ಬರಿಗೆ ಬಂದಿತ್ತು ಬಿಜೆಪಿಯಿಂದ ದುಬಾರಿ ಗಿಫ್ಟ್
ಬೆಂಗಳೂರು: ಆಪರೇಷನ್ ಕಮಲ ನಡೆಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ನಾನೇ ಸರ್ಟಿಫಿಕೇಟ್ ನೀಡುತ್ತೇನೆ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ, ಬಿಜೆಪಿ ನಾಯಕರು ಆಪರೇಷನ್ ಕಮಲವನ್ನು ನಿಲ್ಲಿಸಿಲ್ಲ. ಕಾಂಗ್ರೆಸ್‍ನ ಒಬ್ಬ ಶಾಸಕರಿಗೆ ಕರೆ ಮಾಡಿ ಬಹುದೊಡ್ಡ ಗಿಫ್ಟ್ ಕೊಡುವುದಾಗಿ ಆಮಿಷ ಒಡ್ಡಿದ್ದಾರೆ. ಅಷ್ಟೇ ಅಲ್ಲದೆ ಭಾರೀ ದುಬಾರಿಯ ಗಿಫ್ಟ್ ಅನ್ನು ಎಲ್ಲಿಗೆ ಕಳುಹಿಸಬೇಕು ಅಂತ ಕೇಳಿದ್ದಾರೆ. ಆದರೆ ಶಾಸಕರು ಗಿಫ್ಟ್ ಅನ್ನು ತಿರಸ್ಕರಿಸಿದ್ದು, ನಿನ್ನೆ ನನ್ನ ಗಮನಕ್ಕೆ ತಂದಿದ್ದಾರೆ ಎಂದರು.
Advertisement
Advertisement
ಬಿಜೆಪಿಯವರು ನಮ್ಮ ಶಾಸಕರಿಗೆ ನೀಡಲು ಮುಂದಾಗಿದ್ದ ಗಿಫ್ಟ್ ಮೌಲ್ಯ ಕೇಳಿದರೆ ನೀವು ಕೂಡ ಗಾಬರಿಯಾಗುತ್ತಿರಿ ಎಂದು ಮಾಧ್ಯಮಗಳಿಗೆ ತಿಳಿಸಿದರು. ಆಗ ಎಷ್ಟು ಸರ್ ಮೌಲ್ಯ ಅಂತ ಮಾಧ್ಯಮದವರು ಪ್ರಶ್ನಿಸುತ್ತಿದ್ದಂತೆ, ಅದನ್ನು ಸಮಯ ಬಂದಾಗ ಹೇಳುತ್ತೇನೆ. ಅವರಿಗೆ ಇಷ್ಟು ದೊಡ್ಡ ಮೊತ್ತದ ಗಿಫ್ಟ್ ನೀಡಲು ಹಣ ಎಲ್ಲಿಂದ ಬರುತ್ತದೆ ಎನ್ನುವುದೇ ತಿಳಿಯುತ್ತಿಲ್ಲ ಎಂದು ಕುಟುಕಿದರು.
Advertisement
ಬಿ.ಎಸ್.ಯಡಿಯೂರಪ್ಪ ಅವರು 2008ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಶಾಸಕರನ್ನು ಮಾರಾಟದ ವಸ್ತುಗಳನ್ನಾಗಿ ಮಾಡಿದ್ದರು. ಅದನ್ನೇ ಈಗಲೂ ಮಾಡುತ್ತಿದ್ದಾರೆ. ಅದು ಅವರ ಚಾಳಿ, ನಾನೇನು ಮಾಡಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.
Advertisement
ಜಂಟಿ ಅಧಿವೇಶನಕ್ಕೆ ಆಹ್ವಾನ ನೀಡುವ ಉದ್ದೇಶದಿಂದ ರಾಜ್ಯಪಾಲರನ್ನು ಭೇಟಿ ಮಾಡಿದ್ದೇನೆ. ಈ ಅಧಿವೇಶನ ಫೆಬ್ರವರಿ 6ರಂದು ನಡೆಯಲಿದೆ ಎಂದ ಅವರು, ವಿಧಾನ ಪರಿಷತ್ ನಾಮನಿರ್ದೇಶನ ಸ್ಥಾನಕ್ಕೆ ಕೆ.ಎ.ತಿಪ್ಪೇಸ್ವಾಮಿ ಅವರ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದೆವು. ಇದಕ್ಕೆ ರಾಜ್ಯಪಾಲರು ಒಪ್ಪಿಗೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಬಜೆಟ್ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಜೊತೆಗೆ ರೈತ ಮುಖಂಡರೊಂದಿಗೆ ಸಭೆ ನಡೆಸಿ ಸಲಹೆ ಪಡೆದಿದ್ದೇನೆ. ಬಿತ್ತನೆ ಬೀಜ, ಕಬ್ಬು ಬಾಕಿ ಸೇರಿ ಎಲ್ಲಾ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅವರ ಸಲಹೆಗಳನ್ನು ಜಾರಿಮಾಡುವ ನಿಟ್ಟಿನಲ್ಲಿ ಬಜೆಟ್ ಮಂಡಿಸಲಾಗುತ್ತದೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv