ನವದೆಹಲಿ: ರಾಜ್ಯದಲ್ಲಿ ಬಹುದಿನಗಳಿಂದ ನಡೆಯುತ್ತಿದ್ದ ರಾಜಕೀಯ ನಾಟಕಕ್ಕೆ ತೆರೆ ಬಿದ್ದಿದ್ದು, ರಾಜ್ಯದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಮೈತ್ರಿ ಸರ್ಕಾರ ರಚನೆ ಮಾಡಿದ ಮೊದಲ ವಾರದ ಬಳಿಕ ಆರಂಭವಾದ ಎರಡು ಪಕ್ಷದ ಆಂತರಿಕ ಕಚ್ಚಾಟದಿಂದ ಅಭಿವೃದ್ಧಿ ಕುಂಠಿತವಾಗಿತ್ತು. ಆದರೆ ಈಗ ಬಿಎಸ್ ಯಡಿಯೂರಪ್ಪ ಅವರು ಅಭಿವೃದ್ಧಿ ಪರ ಆಡಳಿತ ನಡೆಸುತ್ತಾರೆ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದರು.
Advertisement
ನಗರದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕಾಗಿ ನಡೆಯುತ್ತಿದ್ದ ನಾಟಕದಲ್ಲಿ ರಾಜ್ಯದ ಜನರು ಕಂಗಾಲಾಗಿದ್ದರು. ರಾಜ್ಯದ ಜನರಿಗೆ ಉತ್ತಮ ಸರ್ಕಾರ ನೀಡುವ ಉದ್ದೇಶದಿಂದಲೇ ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಬಿಜೆಪಿ ಆಹ್ವಾನ ನೀಡಿತ್ತು. ಮೈತ್ರಿ ಒಪ್ಪದ ಶಾಸಕರಿಗೆ ಬಿಜೆಪಿ ಬರುವಂತೆ ಆಹ್ವಾನ ನೀಡಿದ್ದೆವು, ಇದರಂತೆ ಬಿಜೆಪಿ ಮೇಲೆ ಒಲವು ಇರುವ ಶಾಸಕರು ಬರುವಂತೆಯೂ ಹೇಳಿದ್ದೆವು. ರಾಜ್ಯದಲ್ಲಿ ಹೆಚ್ಚು ಸೀಟು ಪಡೆದ ಪಕ್ಷಕ್ಕೆ ಸರ್ಕಾರ ರಚಿಸುವ ನೈತಿಕತೆ ಇದೆ ಎಂದರು.
Advertisement
ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆ ಆದ ಮೇಲೆ ನಾವು ಸುಮ್ಮನೆ ಆಗಿದ್ದೆವು. ಆದರೆ ಸರ್ಕಾರ ರಚನೆಯಾಗಿ 1 ವಾರದಲ್ಲೇ ಮೈತ್ರಿಯಲ್ಲಿ ಕಚ್ಚಾಟ ಆರಂಭವಾದ ಹಿನ್ನೆಲೆಯಲ್ಲಿ ನೈತಿಕತೆ ಆಧಾರದ ಮೇಲೆ ಕಾಂಗ್ರೆಸ್, ಜೆಡಿಎಸ್ ಅನೈತಿಕ ಮೈತ್ರಿ ಒಪ್ಪದ ನಾಯಕರನ್ನು ಆಹ್ವಾನಿಸಿದ್ದೆವು. ಕೇವಲ ಅತೃಪ್ತ ಶಾಸಕರು ಮಾತ್ರವಲ್ಲ ಮೈತ್ರಿ ಒಪ್ಪದ ಎಲ್ಲ ಶಾಸಕರಿಗೂ ಆಹ್ವಾನ ನೀಡಿದ್ದೆವು. ರಾಜ್ಯದ ಒಳಿತಿಗಾಗಿ ಮಾಡಿರುವುದರಿಂದ ಇದರಲ್ಲಿ ತಪ್ಪಿಲ್ಲ. ಆದರೆ ದೋಸ್ತಿ ನಾಯಕರು ಆಪರೇಷನ್ ಕಮಲದ ಬಣ್ಣ ಬಳೆಯುತ್ತಿದ್ದಾರೆ ಅಷ್ಟೇ ಎಂದರು.
Advertisement
Advertisement
ಮೈತ್ರಿ ಸರ್ಕಾರದ ಬಿಜೆಪಿ ಮೇಲೆ ಆಪರೇಷನ್ ಕಮಲ ಹೆಸರಿನಲ್ಲಿ ಎರಚಿದ ಬಣ್ಣ ಮಳೆಯಾಗಿ ಬಿದ್ದು ತೊಳೆದು ಹೋಗಿದ್ದು, ಕಾರ್ಮೋಡ ಕಳಚಿ ಎಲ್ಲವೂ ಸ್ಪಷ್ಟವಾಗಿದೆ. ಯಾವುದೇ ಒಬ್ಬ ವ್ಯಕ್ತಿಯಿಂದ ಸರ್ಕಾರ ಬಿತ್ತು ಎಂದು ಹೇಳಲು ಆಗಲ್ಲ. ಸಿದ್ದರಾಮಯ್ಯ ತಂಡ, ಜೆಡಿಎಸ್ ಪಕ್ಷದ ಬಂಡಾಯಗಳಿಂದ ಸರ್ಕಾರ ಬಿದ್ದಿದೆ. ಕಾಂಗ್ರೆಸ್ ನಾಯಕರ ಮನಸ್ಸಿನ ನಂಜು ಕಟ್ಟೆಯೊಡೆದು ಸರ್ಕಾರ ಪತನವಾಯಿತು ಎಂದರು.
ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಸರ್ಕಾರ ಇದೆ. ಆದ್ದರಿಂದ ಒಟ್ಟಿಗೆ ಕೂಡಿ ಮತ್ತಷ್ಟು ಕೆಲಸಗಳನ್ನು ಮಾಡುತ್ತೇವೆ. ಈಗ ಬಿಎಸ್ ಯಡಿಯೂರಪ್ಪ ಅವರ ನಾಯಕತ್ವದಲ್ಲೇ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆ ನಡೆಸಿದ್ದೆವು. ಅವರ ನಾಯಕತ್ವದಲ್ಲೇ ಭಾರೀ ಯಶಸ್ಸು ಪಡೆದಿದ್ದೇವೆ. ಅವರೊಂದಿಗೆ ನಡೆದು ಮುಂದಿನ ಅವಧಿಯಲ್ಲಿ 24 ಗಂಟೆಗಳ ಕಾಲ ಕೆಲಸ ಮಾಡುವ ಮೂಲಕ ಉತ್ತಮ ಆಡಳಿತ ನೀಡುವ ವಿಶ್ವಾಸವನ್ನು ವ್ಯಕ್ತಪಡಿಸಿದರು.