– ಹೊಸ ವರ್ಷಕ್ಕೂ ಮುನ್ನ ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಮದ್ಯ, ಮಾದಕ ವಸ್ತು ಜಪ್ತಿ
ನವದೆಹಲಿ: ಕೆಂಪು ಕೋಟೆ ಬಳಿ ಕಾರು ಬಾಂಬ್ ಸ್ಫೋಟ (Red Fort Blast) ಸಂಭವಿಸಿದ್ದ ಹಿನ್ನೆಲೆ ಈ ಬಾರಿ ಹೊಸ ವರ್ಷಾಚರಣೆಗೆ (New Year 2026) ಕಟ್ಟೆಚ್ಚರ ವಹಿಸಲಾಗಿದೆ. ಫುಲ್ ಅಲರ್ಟ್ ಆಗಿರುವ ದೆಹಲಿ ಪೊಲೀಸರು ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ. ಅದರಂತೆ ದಕ್ಷಿಣ ಮತ್ತು ಆಗ್ನೇಯ ದೆಹಲಿ ಪೊಲೀಸರು ನಡೆಸಿದ ʻಆಪರೇಷನ್ ಆಘಾಟ್ 3.0ʼ (Operation Aaghat) ವಿಶೇಷ ಕಾರ್ಯಾಚರಣೆಯಲ್ಲಿ 600 ಕ್ಕೂ ಹೆಚ್ಚು ಮಂದಿಯನ್ನ ಬಂಧಿಸಿದ್ದಾರೆ.
ರಾತ್ರಿಯಿಡೀ ನಡೆದ ಕಾರ್ಯಾಚರಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ, ಅಬಕಾರಿ ಕಾಯ್ದೆ, NDPS ಕಾಯ್ದೆ ಮತ್ತು ಜೂಜಾಟ ಕಾಯ್ದೆ ಸೇರಿದಂತೆ ವಿವಿಧ ಕಾನೂನು ಕ್ರಮಗಳ ಅಡಿಯಲ್ಲಿ ಒಟ್ಟು 285 ಆರೋಪಿಗಳು, ಅಪರಾಧ ತಡೆ ಕ್ರಮದ ಅಡಿಯಲ್ಲಿ 504 ಜನರು ಹಾಗೂ ಕ್ರಿಮಿನಲ್ ಹಿನ್ನೆಲೆಯುಳ್ಳ 116 ಮಂದಿ, ಆಸ್ತಿ ವಿಚಾರಕ್ಕೆ ಗಲಾಟೆ ಮಾಡಿಕೊಂಡ 10 ಮಂದಿ ಹಾಗೂ ಐವರು ಆಟೋ ಕಳ್ಳರನ್ನ ದೆಹಲಿ ಪೊಲೀಸರು (Delhi Police) ಬಂಧಿಸಿದ್ದಾರೆ.
ಅಲ್ಲದೇ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು, ಲಕ್ಷಾಂತರ ರೂಪಾಯಿ ಮೌಲ್ಯದ ನಗದು, ಅಕ್ರಮ ಮದ್ಯ, ಮಾದಕ ವಸ್ತುಗಳು ಹಾಗೂ ಇತರ ಕಳ್ಳತನದ ವಸ್ತುಗಳನ್ನ ಜಪ್ತಿ ಮಾಡಿದ್ದಾರೆ. ದೆಹಲಿಯಾದ್ಯಂತ ಅಪರಾಧ ನಿಗ್ರಹಿಸಲು ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆ ಕಾನೂನು ಸುವ್ಯವಸ್ಥೆ ಬಲಪಡಿಸಲು ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
1,000ಕ್ಕೂ ಅಧಿಕ ಮಂದಿ ವಿಚಾರಣೆ
ಆಪರೇಷನ್ ಆಘಾಟ್ ಕಾರ್ಯಾಚರಣೆ ಸಂದರ್ಭದಲ್ಲಿ ಪೊಲೀಸ್ ತಂಡಗಳು ಸುಮಾರು 1,000 ಕ್ಕೂ ಅಧಿಕ ಮಂದಿಯನ್ನ ವಿಚಾರಣೆ ನಡೆಸಿವೆ.
ಕಾರ್ಯಾಚರಣೆ ಸಮಯದಲ್ಲಿ 21 ದೇಶೀಯ ನಿರ್ಮಿತ ಪಿಸ್ತೂಲ್, 20 ಜೀವಂತ ಕಾರ್ಟ್ರಿಡ್ಜ್ ಮತ್ತು 27 ಚಾಕುಗಳನ್ನ ಜಪ್ತಿ ಮಾಡಲಾಗಿದೆ. ಒಟ್ಟು 12,258 ಕ್ವಾರ್ಟರ್ಸ್ ಅಕ್ರಮ ಮದ್ಯ, 6.01 ಕೆಜಿ ಗಾಂಜಾವನ್ನೂ ವಶಪಡಿಸಿಕೊಳ್ಳಲಾಗಿದೆ. ಜೂಜು ಅಡ್ಡೆ ಮೇಲೆ ನಡೆದ ದಾಳಿಯಲ್ಲಿ ಒಟ್ಟು 2,30,990 ರೂ. ನಗದು, ಕಳ್ಳತನವಾದ 310 ಮೊಬೈಲ್ ಫೋನ್, 231 ದ್ವಿಚಕ್ರ ವಾಹನಗಳು ಮತ್ತು 1 ನಾಲ್ಕು ಚಕ್ರದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಮುಂಬರುವ ವಾರಗಳಲ್ಲಿ ಇಂತಹ ವಿಶೇಷ ಡ್ರೈವ್‌ಗಳು ಮುಂದುವರಿಯಲಿವೆ ಎಂದು ದೆಹಲಿ ಪೊಲೀಸರು ಎಚ್ಚರಿಸಿದ್ದಾರೆ.


