ಮದುವೆ ವೇಳೆ ಬಯಲು ಮಲ ವಿಸರ್ಜನೆ, ಕಸ ಹಾಕಿದ್ದಕ್ಕೆ 2.5 ಲಕ್ಷ ರೂ. ದಂಡ

Public TV
2 Min Read
guptas marrage 2

ಡೆಹ್ರಾಡೂನ್: ಉತ್ತರಾಖಂಡ್‍ನ ಔಲಿಯ ದಿ ಸ್ಕೀ ರೆಸಾರ್ಟ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಮೂಲದ ಉದ್ಯಮಿ ಗುಪ್ತಾ ಸಹೋದರರ ಮದುವೆ ವೇಳೆ ಎಲ್ಲೆಂದರಲ್ಲಿ ಕಸ ಎಸೆದಿರುವುದು ಹಾಗೂ ಬಯಲು ಮಲ ವಿಸರ್ಜನೆ ಮಾಡಿರುವುದಕ್ಕೆ ಜೋಶಿಮಠ್ ನಗರ ಪಾಲಿಕೆ 2.5 ಲಕ್ಷ ದಂಡ ವಿಧಿಸಿದೆ.

ಬಯಲು ಮಲ ವಿಸರ್ಜನೆ ಮಾಡಿದ್ದಕ್ಕೆ 1 ಲಕ್ಷ ರೂ., ಎಲ್ಲೆಂದರಲ್ಲಿ ಕಸ ಹಾಕಿದ್ದಕ್ಕೆ 1.5 ಲಕ್ಷ ರೂ. ದಂಡ ವಿಧಿಸಿದೆ. ಗುಪ್ತಾ ಸಹೋದರರ ಮದುವೆಯನ್ನು ಉತ್ತರಾಖಂಡ್‍ನ ಪ್ರವಾಸಿ ತಾಣವಾದ ಔಲಿಯ ಪರ್ವತ ಪ್ರದೇಶದ ಸುಂದರ ತಾಣದಲ್ಲಿ ಆಯೋಜಿಸಲಾಗಿತ್ತು. ಮದುವೆ ಸಮಾರಂಭದ ಎಲ್ಲ ಕಸವನ್ನು ನೇರವಾಗಿ ನಗರಪಾಲಿಕೆ ಸಿಬ್ಬಂದಿಯವರೇ ಸ್ವಚ್ಛಗೊಳಿಸುವುದು ನಿಯಮ, ಇದಕ್ಕೆ ವ್ಯವಸ್ಥೆಯನ್ನೂ ಮಾಡಲಾಗಿತ್ತು. ನಗರಪಾಲಿಕೆ ಕಸ ವಿಲೇವಾರಿಗೆ ಬಿಲ್ ಸಹ ನೀಡಿತ್ತು. ಆದರೂ ಸಹ ಕಸವನ್ನು ಎಲ್ಲೆಂದರಲ್ಲಿ ಚೆಲ್ಲಲಾಗಿದೆ, ಅಲ್ಲದೆ, ಬಯಲು ಮಲ ವಿಸರ್ಜನೆ ಮಾಡಲಾಗಿದೆ ಎಂದು ಪಾಲಿಕೆ 2,5 ಲಕ್ಷ ರೂ. ದಂಡ ವಿಧಿಸಿದೆ.

guptas marrage 5

ಅಲ್ಲದೆ, ರೆಸಾರ್ಟ್ ಬಳಿಯ ಕಸವನ್ನು ತೆರವುಗೊಳಿಸಲು ಈಗಾಗಲೇ ಪಾಲಿಕೆ 8.14 ಲಕ್ಷ ರೂ. ಬಿಲ್ ಮಾಡಿದ್ದು, ಗುಪ್ತಾ ಸಹೋದರರು ಈಗಾಗಲೇ 5.54 ಲಕ್ಷ ರೂ.ಗಳನ್ನು ಮುಂಗಡವಾಗಿ ಪಾವತಿಸಿದ್ದಾರೆ. ಉಳಿದ ಹಣವನ್ನು ನೀಡುವಂತೆ ಗುಪ್ತಾ ಸಹೋದರರಿಗೆ ತಿಳಿಸಲಾಗಿದೆ. ಅಲ್ಲದೆ 54 ಸಾವಿರ ರೂ.ಗಳನ್ನು ಬಳಕೆದಾರರ ಶುಲ್ಕ ಎಂದು ವಿಧಿಸಲಾಗಿದೆ.

ಪಾಲಿಕೆಯ ಬಿಲ್ ಹಾಗೂ ದಂಡವನ್ನು ಶೀಘ್ರವೇ ಪಾವತಿಸುವುದಾಗಿ ಗುಪ್ತಾ ಸಹೋದರರು ತಿಳಿಸಿದ್ದಾರೆ. ಈ ಮದುವೆಯೊಂದರಲ್ಲೇ ಜೋಶಿಮಠ್ ನಗರ ಪಾಲಿಕೆ 321 ಕ್ವಿಂಟಾಲ್ ಕಸವನ್ನು ಸಂಗ್ರಹಿಸಿದೆ. ಆದರೂ ಸಹ ಸಮಾರಂಭದ ಸ್ಥಳದಲ್ಲಿ ಎಲ್ಲೆಂದರಲ್ಲಿ ಕಸ ಹಾಕಲಾಗಿದೆ.

ಈ ಮಧ್ಯೆ ಭದ್ರತಾ ಠೇವಣಿಯಾಗಿ ಉತ್ತರಾಖಂಡ್‍ನ ಚಮೋಲಿ ಜಿಲ್ಲಾಡಳಿತದಲ್ಲಿ ಗುಪ್ತಾ ಸಹೋದರರು ಇಟ್ಟ 3 ಕೋಟಿ ರೂ. ಹಣದ ಕುರಿತು ಜುಲೈ 8 ರಂದು ನೈನಿತಾಲ್ ಹೈ ಕೋರ್ಟ್ ವಿಚಾರಣೆಯ ಮರುದಿನ ನಿರ್ಧರಿಸಲಾಗುವುದು. ನೈನಿತಾಲ್ ಹೈ ಕೋರ್ಟ್ ಆದೇಶದ ಮೇರೆಗೆ 13 ಅಧಿಕಾರಿಗಳ ತಂಡ ಔಲಿಯಲ್ಲಿ ನಡೆಯುವ ಸಮಾರಂಭಗಳ ಮೇಲೆ ಕಣ್ಣಿಟ್ಟಿದ್ದು, ಎಲ್ಲ ಕಾರ್ಯಕ್ರಮಗಳ ವಿಡಿಯೋ ಚಿತ್ರೀಕರಣ ಮಾಡುತ್ತದೆ.

guptas marrage 4

ಅರಣ್ಯ, ಉತ್ತರಾಖಂಡ್ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಚಿಮೋಲಿ ಜಿಲ್ಲಾಡಳಿತ, ಉತ್ತರಾಖಂಡ್ ಜಲ್ ಸಂಸ್ಥಾನ್, ಆದಾಯ, ಪಿಡಬ್ಲ್ಯುಡಿ ಸೇರಿದಂತೆ ವಿವಿಧ ಇಲಾಖೆಗಳ ಒಟ್ಟು 13 ಅಧಿಕಾರಿಗಳು ನಿಗಾ ವಹಿಸಿದ್ದಾರೆ. ಅಲ್ಲದೆ, ಔಲಿ ಪ್ರದೇಶದಲ್ಲಿ ಹೆಲಿಕಾಪ್ಟ್‍ರ್ ಲ್ಯಾಂಡಿಂಗ್ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕಾಪರ್‍ಗಳು ಗಣ್ಯರನ್ನು ಕರೆ ತರಲು ಅವಕಾಶ ನೀಡಲಾಗಿದೆ. ಅಲ್ಲಿಂದ ಕಾರ್ ಮೂಲಕ ಗಣ್ಯರು ಮದುವೆ ಸಮಾರಂಭವಕ್ಕೆ ತೆರಳಬಹುದಾಗಿದೆ.

ಹೈ ಕೋರ್ಟ್ ಆದೇಶದನ್ವಯ ಕೇವಲ 150 ಗಣ್ಯರಿಗೆ ಮಾತ್ರ ಅವಕಾಶವಿತ್ತು. ಇದರಲ್ಲಿ ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಬಾಬಾ ರಾಮ್‍ದೇವ್ ಹಾಗೂ ಇತರ ಗಣ್ಯರು ನವ ಜೋಡಿಗಳನ್ನು ಹಾರೈಸಿದ್ದರು. ಕತ್ರಿನಾ ಕೈಫ್ ಸೇರಿದಂತೆ ಇತರ ಬಾಲಿವುಡ್ ನಟ, ನಟಿಯರೂ ಸಹ ಭಾಗವಹಿಸಿದ್ದರು.

guptas marrage 3

ಮುಖ್ಯಮಂತ್ರಿ ರಾವತ್ ಅವರು ಈ ಹಿಂದೆಯೇ ಸೂಚಿಸಿದ್ದು, ಪರಿಸರಕ್ಕೆ ಹಾನಿಯುಂಟು ಮಾಡುವ ಯಾವುದೇ ಕೃತ್ಯಗಳನ್ನು ಸಹಿಸುವುದಿಲ್ಲ. ಔಲಿಯನ್ನು ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಔಲಿಯ ಸ್ಕೀ ರೆಸಾರ್ಟ್‍ನ್ನು ಇದೀಗ ಸ್ವಚ್ಛಗೊಳಿಸಲಾಗಿದ್ದು, ಎಲ್ಲ ಕಸವನ್ನು ತೆರವುಗೊಳಿಸಲಾಗಿದೆ. ಜೂ. 30ರೊಳಗೆ ಸ್ವಚ್ಛಗೊಳಿಸುವುದಾಗಿ ಜೋಶಿಮಠ್ ಪಾಲಿಕೆ ತಿಳಿಸಿತ್ತು. ಅದರಂತೆ ಎಲ್ಲ ಕಸವನ್ನು ಸ್ವಚ್ಛಗೊಳಿಸಲಾಗಿದೆ ಎಂದು ಪಾಲಿಕೆಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪಿ.ನೌತಿಯಾಲ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *