ಮೈತ್ರಿಯಿಂದ ಎರಡು ಕುಟುಂಬಗಳಿಗೆ ಮಾತ್ರ ಲಾಭ – ಎ.ಮಂಜು

Public TV
2 Min Read
hsn a.manju

ಹಾಸನ: ಮೈತ್ರಿಯಿಂದ ಲೋಕಸಭಾ ಚುನಾವಣೆಯಲ್ಲಿ ಎರಡು ಕುಟುಂಬದವರಿಗೆ ಮಾತ್ರ ಲಾಭವಾಗಿದೆ ಎಂದು ಹಾಸನ ಪರಾಚಿತ ಬಿಜೆಪಿ ಅಭ್ಯರ್ಥಿ ಎ.ಮಂಜು ಹೇಳಿದ್ದಾರೆ.

ಅರಕಲಗೂಡಿನಲ್ಲಿ ಮಾತನಾಡಿದ ಅವರು, ಒಂದು ದೇವೇಗೌಡರ ಮೊಮ್ಮಗ ಪ್ರಜ್ವಲ್‍ನನ್ನು ರಾಜಕೀಯಕ್ಕೆ ತರಲು, ಮತ್ತೊಂದು ಡಿ.ಕೆ.ಶಿವಕುಮಾರ್ ತಮ್ಮನನ್ನು ಗೆಲ್ಲಿಸಲು ಮಾತ್ರ ಈ ಮೈತ್ರಿ ಲಾಭವಾಗಿದೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್‍ಗೆ ಶೂನ್ಯವಾಗಿದೆ. ಚುನಾವಣೆಗೂ ಮುನ್ನವೇ ಮೈತ್ರಿಯಿಂದ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂದು ನಾನೇ ಭವಿಷ್ಯ ನುಡಿದಿದ್ದೆ. ಅದು ಈಗ ನಿಜವಾಗಿದೆ ಎಂದರು.

prajwal 11

ನೂತನವಾಗಿ ಆಯ್ಕೆಯಾದ ಸಂಸದ ಪ್ರಜ್ವಲ್ ರೇವಣ್ಣ ರಾಜೀನಾಮೆ ನೀಡುವ ಹೇಳಿಕೆಯನ್ನು ಮನಃಪೂರ್ವಕವಾಗಿ ಹೇಳಿಲ್ಲ. ಇದು ನಾಟಕವೋ ಮತ್ತೊಂದೋ ಮುಂದೆ ನೋಡೋಣ. ರಾಜೀನಾಮೆ ಕೊಡುತ್ತೇನೆ ಎಂಬ ಬಗ್ಗೆ ನನಗೆ ಮಾಧ್ಯಮದಲ್ಲಿ ನೋಡಿ ಗೊತ್ತಾಯಿತು. ಅದು ಅವರ ವೈಯಕ್ತಿಕ ವಿಚಾರವಾಗಿದೆ. ದೇವೇಗೌಡರ ಈ ಪರಿಸ್ಥಿತಿಗೆ ಇವರೇ ಕಾರಣರಾಗಿದ್ದಾರೆ. ದೇವೇಗೌಡರು ಹಾಸನದಿಂದ ನಿಲ್ಲಲಿ ಎಂದು ರಾಜಕೀಯ ವಿರೋಧಿಯಾದರೂ ನಾನೇ ಹೇಳಿದ್ದೆ. ಅಂದು ದೇವೇಗೌಡರನ್ನು ಇಲ್ಲಿಂದ ಓಡಿಸಿದ್ದು ಇವರೇ, ಬಹುಶಃ ಇವತ್ತು ಅರಿವಾಗಿದೆ ಅನಿಸುತ್ತಿದೆ ಎಂದರು.

ದೇವೇಗೌಡರನ್ನ ಇಲ್ಲಿಂದ ತಳ್ಳಿದ್ದರು ಎಂಬ ಅಪವಾದ ಅವರ ಮೇಲಿದೆ. ಈಗ ಭವಾನಿ ರೇವಣ್ಣ ಕಣ್ಣೀರು ಹಾಕಿದ್ದರಂತೆ. ಅವರಿಗೆ ಅವತ್ತು ನಮ್ಮ ಮಾವ ಎಂಬ ಗೌರವ ಇರಲಿಲ್ಲವೆ ಎಂದು ಜನರು ಮಾತನಾಡುತ್ತಿದ್ದಾರೆ. ಅವರ ಮೇಲೆ ಗೌರವ ಇದ್ದಿದ್ದರೆ ಇದೆಲ್ಲವನ್ನು ಮೊದಲೇ ತಿಳಿದುಕೊಳ್ಳಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

dk shivakumar devegowda 02 1504349049

ದೇವೇಗೌಡರನ್ನು ಹಾಸನದಿಂದ ಇವರೇ ಹೋಗುವ ರೀತಿ ಮಾಡಿದ್ದಾರೆ. ಇದು ಹಾಸನ ಜನರ ಮನಸ್ಸಿನಲ್ಲಿ ಇದೆ ಎಂದು ತಿಳಿದಿದ್ದು, ಇದರಿಂದ ತಪ್ಪಿಸಿಕೊಳ್ಳಲು ಈ ರೀತಿ ಮಾತನಾಡುತ್ತಿದ್ದಾರೆ ಎಂಬುದು ನಮ್ಮ ಅಭಿಪ್ರಾಯವಾಗಿದೆ. ಪ್ರಜ್ವಲ್ ತಮ್ಮ ಹೇಳಿಕೆಯನ್ನ ಮನಃಪೂರ್ವಕವಾಗಿ ಹೇಳಿಲ್ಲ. ಇದು ನಾಟಕವೋ ಮತ್ತೊಂದು ಮುಂದೆ ನೋಡೋಣ ಎಂದು ವ್ಯಂಗ್ಯ ಮಾಡಿದ್ದಾರೆ.

ದೇವೇಗೌಡರು ರಾಜ್ಯದ ಶಕ್ತಿ ಎಂದು ಈಗ ಅರಿವಾಗಿದೆಯಾ? ದೇವೇಗೌಡರು ಕುಟುಂಬದ ಶಕ್ತಿ ಮಾತ್ರವಾಗಿದ್ದರೂ ಈಗ ಅವರು ಮೈತ್ರಿಗೂ ಶಕ್ತಿಯಾಗಲಿಲ್ಲ. ದೇವೇಗೌಡರು ಗೆಲ್ಲಬೇಕು ಎಂಬ ಆಸೆ ಎಲ್ಲರಿಗೂ ಇದೆ. ಅವರು ಸೋತಿದ್ದು ನಿಜವಾಗಿಯೂ ನನಗೆ ಬೇಸರವಾಗಿದೆ. ಹಾಸನದಲ್ಲಿ ಚುನಾವಣೆ ಗೆದ್ದಿರುವುದು ಜೆಡಿಎಸ್ ಅಲ್ಲ, ಮೈತ್ರಿ ಗೆದ್ದಿದೆ. ಜನರನ್ನ ದಾರಿತಪ್ಪಿಸಲು ಪ್ರಜ್ವಲ್ ರಾಜೀನಾಮೆ ಹೇಳಿಕೆ ನೀಡಿದ್ದಾರೆ ಎಂದು ಮಂಜು ಟೀಕಿಸಿದರು.

Share This Article
Leave a Comment

Leave a Reply

Your email address will not be published. Required fields are marked *