ಬೆಂಗಳೂರು : ಮುಡಾ ಪ್ರಕರಣದಲ್ಲಿ (MUDA Case) ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮತ್ತು ಸಚಿವ ಬೈರತಿ ಸುರೇಶ್ (Byrathi Suresh) ಅವರಿಗೆ ಜಾರಿ ನಿರ್ದೇಶನಾಲಯ (ED) ನೀಡಿರುವ ನೋಟಿಸ್‌ನಲ್ಲಿ ವಿಶೇಷತೆಯೂ ಇಲ್ಲ. ರಾಜಕೀಯ ಪ್ರೇರಿತವೂ ಅಲ್ಲ ಎಂದು ವಿಪಕ್ಷ ನಾಯಕ ಅಶೋಕ್ (Ashok) ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪ (Yediyurappa) ಸಿಎಂ ಆಗಿದ್ದಾಗ ಸಿಬಿಐ, ಲೋಕಾಯುಕ್ತ, ಇಡಿ ನೋಟಿಸ್ ಕೊಟ್ಟಿತ್ತು.ಆಗ ಯಾಕೆ ಸುದ್ದಿ ಆಗಲಿಲ್ಲ. ಈಗ ಯಾಕೆ ಸುದ್ದಿ ಆಗ್ತಿದೆ ಅಂತ ಪ್ರಶ್ನೆ ಮಾಡಿದರು.
ಇಡಿ ನೋಟಿಸ್ ರಾಜಕೀಯ ಪ್ರೇರಿತ ಎಂಬ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿಕೆಗೆ ತಿರುಗೇಟು ಕೊಟ್ಟ ಅಶೋಕ್, ಅವರೇನು ಸತ್ಯ ಹರಿಶ್ಚಂದ್ರರಾ? ಯಡಿಯೂರಪ್ಪ, ಜನಾರ್ದನ ರೆಡ್ಡಿಗೆ ಹಿಂದೆ ನೋಟಿಸ್ ಕೊಟ್ಟಾಗ ರಾಜಕೀಯ ಪ್ರೇರಿತ ಅಲ್ಲವಾ? ಸಿಎಂ, ಡಿಕೆ ಶಿವಕುಮಾರ್, ಕಾಂಗ್ರೆಸ್ ಮೇಲೆ ಕೊಟ್ಟರೆ ಮಾತ್ರ ರಾಜಕೀಯ ಪ್ರೇರಿತನಾ ಅಂತ ಪ್ರಶ್ನೆ ಮಾಡಿದರು.
ಕಾಂಗ್ರೆಸ್‌ನವರಿಗೆ ನೋಟಿಸ್ ಕೊಟ್ಟರೆ ಅದು ರಾಜಕೀಯ ಪ್ರೇರಿತ ಅಂತ ಪುಸ್ತಕ ತಂದು ಬಿಡಿ ಅಂತ ಲೇವಡಿ ಮಾಡಿದರು. ಸಿಬಿಐ ಮತ್ತು ಇಡಿ ಅವತ್ತು ಇತ್ತು. ಇವತ್ತು ಇದೆ. ಏನು ಬದಲಾವಣೆ ಆಗಿಲ್ಲ ಅಂತ ಡಿಕೆಶಿಗೆ ಅಶೋಕ್ ತಿರುಗೇಟು ಕೊಟ್ಟರು. ಇದನ್ನೂ ಓದಿ: MUDA Scam| ಸಿಎಂಗೆ ಸಂಕಷ್ಟ – ವಿಚಾರಣೆಗೆ ಹಾಜರಾಗುವಂತೆ ಪತ್ನಿಗೆ ಇಡಿ ಸಮನ್ಸ್
ಇಡಿ ಕಾನೂನಾತ್ಮಕ ಸಂಸ್ಥೆಯಾಗಿದೆ. ಲ್ಯಾಂಡ್ ಕನ್ವರ್ಷನ್, 50:50 ಅನುಪಾತದಲ್ಲಿ ಸೈಟ್ ನೀಡಿದ್ದು ಅಧಿಕಾರಿಗಳು. ಲೋಕಾಯುಕ್ತ ರಿಪೋರ್ಟ್ ಕೂಡಾ ಅಧಿಕಾರಿಗಳು ಅಂತಾನೇ ರಿಪೋರ್ಟ್ ಕೊಡೋದು. ಈ ಸರ್ಕಾರದಲ್ಲಿ ವಾಲ್ಮೀಕಿ ಹಗರಣದಲ್ಲಿ ಎಸ್‌ಐಟಿ ಏನು ಮಾಡಿತ್ತು? ತನಿಖೆ ನಡೆಸಿ ಕ್ಲೀನ್ ಚಿಟ್ ಕೊಟ್ಟರು. ಮುಡಾ ಪ್ರಕರಣಕ್ಕೂ ಕ್ಲೀನ್ ಚಿಟ್ ಕೊಡ್ತಾರೆ ಅಂತ ಭವಿಷ್ಯ ನುಡಿದರು.
ಲೋಕಾಯುಕ್ತ ಪೊಲೀಸರು ಸಿಎಂ ಅಡಿಯಲ್ಲಿ ಬರುತ್ತಾರೆ. ಪಾಪ ಅವರಿಗೆ ಪ್ರಮೋಷನ್ ಬೇಕು. ಪ್ರಮೋಷನ್ ಬೇಕಾಗಿರುವವರು ಹೇಗೆ ಅವರ ವಿರುದ್ದ ತನಿಖೆ ಮಾಡುತ್ತಾರೆ? ನಾನು ಅವರ ಮೇಲೆ ಆರೋಪ ಮಾಡುವದಿಲ್ಲ. ವರದಿಯಲ್ಲಿ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ಕೊಡ್ತಾರೆ ಅಂತ ಲೋಕಾಯುಕ್ತ ತನಿಖೆಗೆ ವಿರೋಧ ಮಾಡಿದರು.