ಗಾಂಧಿನಗರ: ಕತ್ತೆಗಳ ಎದೆ ಮಾತ್ರ 56 ಇಂಚು ಇರುತ್ತದೆ ಎಂದು ಗುಜರಾತ್ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ಅರ್ಜುನ್ ಮೊಧ್ವಾಡಿಯಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸಿದ್ದಾರೆ.
ಗುಜರಾತ್‍ನ ಬನಸ್ಕಾಂತ ಜಿಲ್ಲೆಯ ದೇಸ ಪಟ್ಟಣದಲ್ಲಿ ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಅರ್ಜುನ್ ಮೊಧ್ವಾಡಿಯಾ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
2014ರ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು, ನನ್ನಂತೆ 56 ಇಂಚು ಎದೆಯುಳ್ಳ ವ್ಯಕ್ತಿ ಮಾತ್ರ ದೃಢ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಉಲ್ಲೇಖಿಸಿದ ಮೊಧ್ವಾಡಿಯಾ ಅವರು, ಸದೃಢ ವ್ಯಕ್ತಿಯ ಎದೆ 36 ಇಂಚು ಇರುತ್ತದೆ. ಹಾಗೆ ಬಾಡಿ ಬಿಲ್ಡರ್ ಎದೆ 42 ಇಂಚು ಇರಬಹುದು. ಆದರೆ ಕತ್ತೆಗಳ ಎದೆ ಮಾತ್ರ 56 ಇಂಚು ಇರಲು ಸಾಧ್ಯ. ಹೋರಿಗಳು ಸಾಮಾನ್ಯವಾಗಿ 100 ಇಂಚು ಎದೆ ಹೊಂದಿರುತ್ತವೆ ಎಂದು ಹೇಳಿ ಲೇವಡಿ ಮಾಡಿದ್ದಾರೆ.
ಪ್ರಧಾನಿ ಮೋದಿ 56 ಇಂಚಿನ ನಾಯಕ ಎಂದು ಯಾರಾದರು ಹೇಳಿದರೆ ಮೋದಿ ಬೆಂಬಲಿಗರಿಗೆ ಭಾರೀ ಖುಷಿಯಾಗುತ್ತದೆ. ಆದರೆ ಕತ್ತೆಗಳಿಗೆ ಮಾತ್ರ 56 ಇಂಚು ಎದೆ ಇರುತ್ತದೆ ಎನ್ನುವುದು ಅವರಿಗೆ ತಿಳಿದಿಲ್ಲ ಎಂದು ಮೊಧ್ವಾಡಿಯಾ ಹೇಳಿಕೆ ನೀಡಿದ್ದಾರೆ.
ದೇಸ ಪಟ್ಟಣದಲ್ಲಿ ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಾಜೀವ್ ಸಾತವ್, ಬನಸ್ಕಾಂತ ಲೋಕಸಭಾ ಚುನಾವಣೆಯ ಅಭ್ಯರ್ಥಿ ಪಾರ್ಥಿ ಭಟೋಲ್ ಕೂಡ ಭಾಗಿಯಾಗಿದ್ದರು.
ಅರ್ಜುನ್ ಮೊಧ್ವಾಡಿಯಾ ಅವರ ಹೇಳಿಕೆಯನ್ನು ಬಿಜೆಪಿ ನಾಯಕರು ಖಂಡಿಸಿದ್ದು, ಪ್ರಧಾನಿ ಮೋದಿ ಹಾಗೂ ಜನರಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ.
ಸೋಲಿನ ಭಯದಿಂದ ಕಾಂಗ್ರೆಸ್ಸಿಗರು ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ. ಅರ್ಜುನ್ ಮೊಧ್ವಾಡಿಯಾ ಅವರು ಬಳಸಿದ ಪದಗಳು ಅಸಮರ್ಪಕ, ಆಘಾತಕಾರಿ ಮತ್ತು ಖಂಡನೀಯವಾಗಿವೆ ಎಂದು ಬಿಜೆಪಿ ವಕ್ತಾರ ಭರತ್ ಪಾಂಡೆ ಹೇಳಿದ್ದಾರೆ.