ಬೆಂಗಳೂರು: ಈರುಳ್ಳಿ ಬೆಲೆ ಕುಸಿದ ಹಿನ್ನೆಲೆಯಲ್ಲಿ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ ಎರಡು ತಿಂಗಳಿಂದ ಈರುಳ್ಳಿ ಚಿಕನ್‍ಗೆ ಕಾಂಪಿಟೇಷನ್ ಕೊಡುತ್ತಿತ್ತು. ಈರುಳ್ಳಿ ದೋಸೆ, ಈರುಳ್ಳಿ ಪಕೋಡಾ, ಈರುಳ್ಳಿ ಪಲ್ಯೆ ಹೀಗೆ ಯಾವುದೇ ಈರುಳ್ಳಿ ಖಾದ್ಯಗಳು ಹೋಟೆಲ್‍ಗಳಲ್ಲಿ ಸಿಗುತ್ತಿರಲಿಲ್ಲ. ಆದರೆ ಈಗ ಈರುಳ್ಳಿ ಬೆಲೆ ಕಡಿಮೆ ಆಗುವುದರ ಮೂಲಕ ಗ್ರಾಹಕರಿಗೆ ಸಂತಸದ ಸುದ್ದಿ ದೊರೆತಿದೆ.
ಕಳೆದ ಎರಡು ತಿಂಗಳಿಂದ ಈರುಳ್ಳಿ ದರ ಗಗನಕ್ಕೇರಿದ್ದು, ಕೆ.ಜಿಗೆ 120-150 ರೂ ಆಗಿತ್ತು. ಕೆಲ ಸಮಯದಲ್ಲಿ 200 ರೂ. ಗಡಿ ದಾಟಿತ್ತು. ಈಗ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ ಮಧ್ಯಮ ಗುಣಮಟ್ಟದ ಈರುಳ್ಳಿ 60 ರಿಂದ 70 ರೂ.ಗೆ ಮಾರಟ ಮಾಡಲಾಗುತ್ತಿದೆ. ಹಾಗೆಯೇ ಕಡಿಮೆ ಗುಣಮಟ್ಟದ ಈರುಳ್ಳಿ ಒಂದು ಕೆ.ಜಿಗೆ 30 ರಿಂದ 40 ರೂ. ವರೆಗೆ ಮಾರಾಟ ಮಾಡಲಾಗುತ್ತಿದೆ.
ಈರುಳ್ಳಿ ಬೆಲೆ ದಿಢೀರ್ ಇಳಿಕೆಯಾದ್ದರಿಂದ ಗ್ರಾಹಕರು ಖುಷಿಯಾಗಿದ್ದಾರೆ. ಹುಬ್ಬಳ್ಳಿ, ಬಳ್ಳಾರಿ, ಮಹಾರಾಷ್ಟ್ರ ಸೇರಿದಂತೆ ಹಲವೆಡೆಗಳಿಂದ ಹೊಸ ಈರುಳ್ಳಿ ಬರುತ್ತಿರುವುದೇ ಬೆಲೆ ಕಡಿಮೆಯಾಗಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.