ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಕಾರು ಗದ್ದೆಗೆ ಪಲ್ಟಿಯಾದ ಪರಿಣಾಮ ಓರ್ವ ಯುವಕ ಸಾವಿಗೀಡಾದ ಘಟನೆ ಕುಂಸಿ ಬಳಿ ನಡೆದಿದೆ. ಅಪಘಾತದಲ್ಲಿ ನಾಲ್ವರು ಯುವಕರು ಗಾಯಗೊಂಡಿದ್ದಾರೆ.
ಮೃತಪಟ್ಟ ಯುವಕನನ್ನು ಬೆಂಗಳೂರಿನ ನೆಲಮಂಗಲ ನಿವಾಸಿ ಚಂದನ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಕೊಡಗು ಮೂಲದ ನಂದನ್, ಕೋಲಾರದ ಕೋದಂಡ, ಹಾಸನದ ಭರತ್, ಮಂಡ್ಯದ ಯೋಗೇಶ್ ಎನ್ನಲಾಗಿದೆ. ಐದು ಮಂದಿ ಯುವಕರು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ರಜೆ ಇದ್ದ ಕಾರಣ ಐವರು ಯುವಕರು ಬೆಂಗಳೂರಿನಿಂದ ಸಿಗಂದೂರು ದೇವಾಲಯಕ್ಕೆ ತೆರಳುತ್ತಿದ್ದರು.
ಕುಂಸಿಯ ಕೆರೆಕೋಡಿ ಬಳಿ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಜಮೀನಿಗೆ ಉರುಳಿದೆ. ತಲೆಗೆ ಪೆಟ್ಟು ಬಿದ್ದಿದ್ದರಿಂದ ಕಾರು ಚಲಾಯಿಸುತ್ತಿದ್ದ ಚಂದನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಕುಂಸಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.