ಬೆಂಗಳೂರು: ಅಭಿಮಾನಿಗಳ ಅಭಿಮಾನಿ ನಟ ಕಿಚ್ಚ ಸುದೀಪ್ ತಮ್ಮನ್ನ ಇಷ್ಟಪಡುವ ಫ್ಯಾನ್ಸ್ ಗಳ ಬಹುದಿನದ ಕನಸನ್ನು ನನಸು ಮಾಡಿದ್ದಾರೆ.
ಸುದೀಪ್ ಸದಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಅವರನ್ನು ಭೇಟಿ ಮಾಡುವುದು ಅಭಿಮಾನಿಗಳಿಗೆ ದೊಡ್ಡ ಕನಸಾಗಿ ಉಳಿದುಕೊಂಡಿತ್ತು. ಸ್ಟಾರ್ ಗಳನ್ನ ಭೇಟಿ ಮಾಡುವ ಅವಕಾಶ ಅಂದರೆ ಅವರ ಹುಟ್ಟುಹಬ್ಬದ ದಿನದಂದು. ಆದರೆ ಸುದೀಪ್ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ಳಬಾರದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಆದ್ದರಿಂದ ಬರ್ತ್ ಡೇ ಹೆಸರಿನಲ್ಲೂ ಅಭಿಮಾನಿಗಳು ಅವರನ್ನು ಭೇಟಿ ಮಾಡಲು ಅವಕಾಶ ಸಿಗಲಿಲ್ಲ.
ಕಳೆದ ವರ್ಷ ಸೆಪ್ಟೆಂಬರ್ 2 ರಂದು ಸುದೀಪ್ ಅವರನ್ನ ಭೇಟಿ ಮಾಡಿ ಫೋಟೋ ತೆಗೆಸಿಕೊಂಡಿದ್ದ ಅಭಿಮಾನಿಗಳು ಸುಮಾರು ಒಂದೂವರೆ ವರ್ಷದ ನಂತರ ಮತ್ತೆ ಸುದೀಪ್ ಅವರನ್ನ ಭೇಟಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಜೊತೆಯಲ್ಲೇ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಅಖಿಲ ಕರ್ನಾಟಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇನಾ ಸಮಿತಿಯಿಂದ ಇತ್ತೀಚೆಗಷ್ಟೆ ಅಭಿಮಾನಿಗಳಿಂದ ಕಿಚ್ಚನ ಭೇಟಿ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಸಮಾರಂಭದಲ್ಲಿ ಸುದೀಪ್ ಅವರಿಗಾಗಿ ಅಭಿನಂದನಾ ಕಾರ್ಯಕ್ರಮವನ್ನು ಕೂಡ ಆಯೋಜನೆ ಮಾಡಲಾಗಿತ್ತು. ಕಿಚ್ಚ ಚಿತ್ರರಂಗದಲ್ಲಿ 22 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಸುದೀಪ್ ಅವರನ್ನ ಭೇಟಿ ಮಾಡಿ ನೆಚ್ಚಿನ ನಟನೊಂದಿಗೆ ಖುಷಿಯನ್ನ ಹಂಚಿಕೊಂಡಿದ್ದಾರೆ.
ಸುದೀಪ್ ಅವರನ್ನ ಭೇಟಿ ಮಾಡಲು ಸಾಧ್ಯವಾಗದ ಸಾವಿರಾರು ಅಭಿಮಾನಿಗಳು ಸೋಮವಾರ ಸುದೀಪ್ ಅವರ ಮನೆಯ ಬಳಿ ಜಮಾಯಿಸಿದ್ದರು. ಸಾವಿರಾರು ಅಭಿಮಾನಿಗಳ ಜೊತೆ ಕಿಚ್ಚ ಕೆಲ ಸಮಯ ಕಾಲ ಕಳೆದಿದ್ದಾರೆ. ಬೆಂಗಳೂರು ಹಾಗೂ ಸುತ್ತಮುತ್ತ ಇರುವ ಅಭಿಮಾನಿಗಳನ್ನ ಕಿಚ್ಚ ಭೇಟಿ ಮಾಡಿದ್ದಾರೆ. ಅಭಿಮಾನಿಗಳೆಲ್ಲಾ ತಮ್ಮ ನಟನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ಇದನ್ನು ಓದಿ: ಶ್ರೀದೇವಿ ನಿಧನಕ್ಕೆ ಕಂಬನಿ ಮಿಡಿದ ನಟ ಕಿಚ್ಚ ಸುದೀಪ್