Connect with us

International

ಬಾಂಬ್ ದಾಳಿಗೂ ಮುನ್ನ ಚರ್ಚ್ ಎದುರು ಮಗುವನ್ನು ಮಾತನಾಡಿಸಿದ ದಾಳಿಕೋರ!

Published

on

– ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಕೊಲಂಬೋ: ಈವರೆಗೆ ಶ್ರೀಲಂಕಾ ಸರಣಿ ಬಾಂಬ್ ದಾಳಿಯಲ್ಲಿ 321 ಮಂದಿ ಬಲಿಯಾಗಿದ್ದು, 500ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಒಟ್ಟು 8 ಕಡೆಯಲ್ಲಿ ಬಾಂಬ್ ಸ್ಫೋಟ ನಡೆದಿದ್ದು, ಸೆಂಟ್ ಸೆಬಾಸ್ಟಿಯನ್ ಚರ್ಚ್ ನಲ್ಲಿ ಆತ್ಮಾಹುತಿ ದಾಳಿ ನಡೆಸುವ ಮೊದಲು ಚರ್ಚ್ ಎದುರು ದಾಳಿಕೋರ ಮಗುವೊಂದನ್ನು ಮಾತನಾಡಿಸಿದ ಸಿಸಿಟಿವಿ ದೃಶ್ಯಾವಳಿ ಸದ್ಯ ಭಾರೀ ಸದ್ದು ಮಾಡುತ್ತಿದೆ.

ಹೌದು. ಬ್ಯಾಗೊಂದನ್ನು ಬೆನ್ನಿಗೆ ಹಾಕಿಕೊಂದು ಆರಾಮಾಗಿ ಸಾಮಾನ್ಯರಂತೆ ಚರ್ಚ್ ಕಡೆ ಬರುತ್ತಿದ್ದ ದಾಳಿಕೋರನಿಗೆ ತಾತನೊಂದಿಗೆ ಬರುತ್ತಿದ್ದ ಮಗುವೊಂದು ಅಡ್ಡಸಿಕ್ಕಿದೆ. ಈ ವೇಳೆ ಆತ ಆ ಮಗುವಿನ ತಲೆ ಸವರಿ ಮಾತನಾಡಿಸಿ ಅಲ್ಲಿಂದ ಮುಂದೆ ಸಾಗಿದ್ದಾನೆ. ಬಳಿಕ ಚರ್ಚ್ ನ ಪ್ರಾರ್ಥನಾ ಸಭಾಂಗಣದಲ್ಲಿ ನೂರಾರು ಮಂದಿ ಪ್ರಾರ್ಥನೆ ಸಲ್ಲಿಸುತ್ತಿರುವಾಗ ಅವರನ್ನು ನೋಡುತ್ತಾ ದಾಳಿಕೋರ ಮುಂದೆ ಬಂದು ಜನರ ಮಧ್ಯೆ ಪ್ರಾರ್ಥನೆಗೆ ಕುಳಿತಿದ್ದಾನೆ. ಈ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ:ಶ್ರೀಲಂಕಾದಲ್ಲಿ ದಾಳಿ ನಡೆಸಿದ ಜೆಎನ್‍ಟಿ ಸಂಘಟನೆ ಉದ್ದೇಶ ಏನು? – ಇಲ್ಲಿದೆ ಪೂರ್ಣ ಮಾಹಿತಿ

ದಾಳಿಕೋರ ಬಂದ ರೀತಿ, ಆತನ ವೇಷಭೂಷಣ, ನಡವಳಿಕೆ ಗಮನಿಸಿದರೆ ಆತ ನೂರಾರು ಅಮಾಯಕ ಜೀವಗಳ ಬಲಿ ಪಡೆದಿದ್ದಾನೆ ಎಂದು ಊಹಿಸಲು ಸಾಧ್ಯವಾಗಲ್ಲ. ಜನಸಾಮಾನ್ಯರಂತೆ ಚರ್ಚ್ ಗೆ ಪ್ರರ್ಥನೆ ಸಲ್ಲಿಸಲು ಆತ ಬಂದಿದ್ದಾನೆ ಎನ್ನುವ ರೀತಿ ವರ್ತಿಸಿದ್ದಾನೆ. ಸೆಂಟ್ ಸೆಬಾಸ್ಟಿಯನ್ ಚರ್ಚ್ ವೊಂದರಲ್ಲೇ ಸುಮಾರು 100ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ. ಅವರಲ್ಲಿ 27 ಮಕ್ಕಳು ಕೂಡ ಬಲಿಯಾಗಿದ್ದು, 10ಕ್ಕೂ ಹೆಚ್ಚು ಮಂದಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ:ಕನ್ನಡಿಗರು ಸೇರಿ 321 ಮಂದಿಯನ್ನು ಹತ್ಯೆಗೈದಿದ್ದು ನಾವೇ ಎಂದ ಐಸಿಸ್

ಈಸ್ಟರ್ ಶುಭ ಸಂದರ್ಭದಲ್ಲಿ ಪ್ರಾರ್ಥನೆಗೆ ಸೇರಿದ್ದವರನ್ನು ಗುರಿಯಾಗಿಸಿ ಭಾನುವಾರ ಬೆಳಗ್ಗೆ 8:45ರ ಸುಮಾರಿಗೆ ಬಾಂಬ್ ಸ್ಫೋಟಿಸಲಾಗಿದೆ. ಕೊಲಂಬೋ ಬಂದರು ಸಮೀಪದ ಸೆಬಾಸ್ಟಿಯನ್ ಚರ್ಚ್, ಸೇಂಟ್ ಅಂತೋನಿಯ ಶ್ರೈನ್, ಜಿಯಾನ್ ಚರ್ಚ್, ಸಿನ್ನಮೋನ್ ಗ್ರ್ಯಾಂಡ್, ಕೊಲಂಬೊದ ಶಾಂಗ್ರಿಲಾ ಹೋಟೆಲ್, ಕಿಂಗ್ಸ್ಬರಿ ಹೋಟೆಲ್, ದೆಹಿವಾಲಾ -ಮೌಂಟ್ ಲವಿನಿಯಾದಲ್ಲಿನ ದೆಹಿವಾಲಾ ಝೂ, ಮಹವಿಲಾ ಗಾರ್ಡನ್ ನಲ್ಲಿ  ಬಾಂಬ್ ಸ್ಫೋಟವಾಗಿದೆ.

ಶ್ರೀಲಂಕಾದಲ್ಲಿ ಬಾಂಬ್ ದಾಳಿ ನಡೆಸಿದ್ದು ನ್ಯಾಷನಲ್ ತೌಹೀತ್ ಜಮಾತ್(ಜೆಎನ್‍ಟಿ) ಸಂಘಟನೆಯ ಸದಸ್ಯರು ಎಂಬುದನ್ನು ಸರ್ಕಾರ ಅಧಿಕೃತವಾಗಿ ಪ್ರಕಟಿಸಿತ್ತು. ಭಾನುವಾರ ಸ್ಫೋಟ ನಡೆದ ಬಳಿಕ ಯಾವೊಂದು ಸಂಘಟನೆ ಈ ಕೃತ್ಯದ ಹೊಣೆಯನ್ನು ಹೊತ್ತುಕೊಂಡಿರಲಿಲ್ಲ. ಆದರೆ ಈಗ ಶ್ರೀಲಂಕಾದ ಆರೋಗ್ಯ ಸಚಿವ ಮತ್ತು ಸರ್ಕಾರದ ವಕ್ತಾರರಾದ ರಜಿತಾ ಸೆನೆರತ್ನೆ ಈ ಕೃತ್ಯವನ್ನು ಜೆಎನ್‍ಟಿ ಸಂಘಟನೆ ನಡೆಸಿದೆ. ಶ್ರೀಲಂಕಾದ ಪ್ರಜೆಗಳೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಈ ಸಂಘಟನೆಗೆ ಅಂತರಾಷ್ಟ್ರೀಯ ಸಂಬಂಧ ಇರುವ ಸಾಧ್ಯತೆ ಇರಬಹುದು ಎಂದು ಶಂಕಿಸಿಸಲಾಗಿದ್ದು, 8 ಬಾಂಬ್ ಸ್ಫೋಟದ ಸಂಬಂಧ ಇಲ್ಲಿಯವರೆಗೂ 24 ಮಂದಿಯನ್ನು ಬಂಧಿಸಲಾಗಿದೆ.

ಶ್ರೀಲಂಕಾದಲ್ಲಿ ದಾಳಿ ನಡೆಸಲು ಉಗ್ರರು ಪ್ಲಾನ್ ಮಾಡುತ್ತಿದ್ದಾರೆ. ಹೀಗಾಗಿ ಎಚ್ಚರದಲ್ಲಿ ಇರುವಂತೆ ಭಾರತದ ಗುಪ್ತಚರ ಇಲಾಖೆ ಶ್ರೀಲಂಕಾಕ್ಕೆ ಈ ತಿಂಗಳ ಆರಂಭದಲ್ಲಿ ತಿಳಿಸಿತ್ತು ಎಂದು ಮಾಧ್ಯಮವೊಂದು ಸುದ್ದಿ ಪ್ರಕಟಿಸಿದೆ.

Click to comment

Leave a Reply

Your email address will not be published. Required fields are marked *