ನವದೆಹಲಿ: ಕೊರೊನಾ ವೈರಸ್ ರೂಪಾಂತರ ಓಮಿಕ್ರನ್‌ಗೆ ಸಂಬಂಧಿಸಿದ ಒಂದೇ ಒಂದು ಪ್ರಕರಣ ಕೂಡ ಈವರೆಗೂ ದಾಖಲಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಮನುಸುಖ್ ಮಾಂಡವೀಯ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಸಂಸತ್ ಅಧಿವೇಶನದಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಶಂಕಿತ ಪ್ರಕರಣಗಳನ್ನು ತ್ವರಿತವಾಗಿ ಪರೀಕ್ಷೆಗೆ ಒಳಪಡಿಸುತ್ತಿದ್ದೇವೆ. ಜಿನೋಮ್ ಅನುಕ್ರಮಗಳನ್ನು ಪಾಲಿಸುತ್ತಿದ್ದೇವೆ. ಕೊರೊನಾ ಸಾಂಕ್ರಾಮಿಕದಿಂದ ನಾವು ಈಗಾಗಲೇ ಬಹಳಷ್ಟು ಕಲಿತಿದ್ದೇವೆ. ಪ್ರಸ್ತುತ ನಮ್ಮಲ್ಲಿ ಸಾಕಷ್ಟು ಪ್ರಯೋಗಾಲಯಗಳು, ಸಂಪನ್ಮೂಲಗಳಿವೆ. ಈ ಸಂದಿಗ್ಧತೆಯನ್ನು ನಿರ್ವಹಿಸಲು ನಾವು ಸಮರ್ಥರಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ರೂಪಾಂತರಿ ನಮ್ಮ ದೇಶದಲ್ಲೂ ಇರಬಹುದು: ಡಾ.ಸಿ.ಎಸ್ ಮಂಜುನಾಥ್
ಐಸಿಎಂಆರ್ ಸಾಂಕ್ರಾಮಿಕ ರೋಗತಜ್ಞ ಡಾ. ಸಮಿರಾನ್ ಪಾಂಡೆ ಅವರು ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತದಲ್ಲಿ ಓಮಿಕ್ರಾನ್ ಹೊಸ ತಳಿ ಪತ್ತೆಯಾಗುವುದರೆ ಯಾವುದೇ ಅಚ್ಚರಿ ಪಡಬೇಕಾಗಿಲ್ಲ. ಅದು ತುಂಬಾ ವೇಗವಾಗಿ ಹರಡುವ ತಳಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು. ಇದನ್ನೂ ಓದಿ: OMICRON ಸೋಂಕಿಗೆ ಪ್ರತ್ಯೇಕ ಆಸ್ಪತ್ರೆ: ದೆಹಲಿ ಸರ್ಕಾರ
ಇದಕ್ಕೆ ಪ್ರತಿಕ್ರಿಯೆಯಾಗಿ ಕೇಂದ್ರದ ಆರೋಗ್ಯ ಸಚಿವರು ಸಂಸತ್ ಅಧಿವೇಶನದಲ್ಲಿ ಮಾತನಾಡಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿರುವ ಓಮಿಕ್ರಾನ್ ತಳಿ ಈಗ ಯುಕೆ, ಜರ್ಮನಿ, ಜಪಾನ್, ಹಾಂಗ್‌ಕಾಂಗ್‌ಗೂ ಹರಡಿದೆ. ಆದರೆ ಭಾರತದಲ್ಲಿ ಈವರೆಗೂ ಹೊಸ ತಳಿಯ ಒಂದು ಪ್ರಕರಣವೂ ದೃಢಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.