ನವದೆಹಲಿ: ಕೊರೊನಾ ವೈರಸ್ ರೂಪಾಂತರ ತಳಿ ಓಮಿಕ್ರಾನ್, ಭಾರತಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ತಿಳಿಸಿದ್ದಾರೆ.
ಕೋವಿಡ್ ವಿಚಾರವಾಗಿ ಭಾರತದ ನಡಾವಳಿಗೆ ಇದೊಂದು ಎಚ್ಚರಿಕೆಯ ಕರೆಗಂಟೆ. ಪ್ರತಿಯೊಬ್ಬರೂ ಎಚ್ಚರಿಕೆಯಿಂದಿರಬೇಕು, ಮಾಸ್ಕ್ ಧರಿಸುವುದನ್ನು ಮರೆಯಬಾರದು. ಮಾಸ್ಕ್ ನಿಮ್ಮ ಪಾಕೆಟ್‌ನಲ್ಲಿರುವ ಲಸಿಕೆಯಂತೆ. ಕೋವಿಡ್ ತಡೆಗಟ್ಟುವಲ್ಲಿ ಮಾಸ್ಕ್ ಪಾತ್ರವೂ ಪರಿಣಾಮಕಾರಿಯಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಭಾರೀ ಡೇಂಜರ್ – ಹೊಸ ವೈರಸ್, ಹೊಸ ಲಕ್ಷಣ!
ಎಲ್ಲಾ ವಯೋಮಾನದವರಿಗೂ ಲಸಿಕೆ ನೀಡುವುದು, ಜನರು ಗುಂಪುಗೂಡುವುದನ್ನು ತಪ್ಪಿಸುವುದು, ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡುಬರುವಂತಹ ಪ್ರದೇಶಗಳಲ್ಲಿ ಹೆಚ್ಚಿನ ನಿಗಾವಹಿಸುವ ಕೆಲಸ ಮಾಡಬೇಕು. ಓಮಿಕ್ರಾನ್ ವಿರುದ್ಧ ಹೋರಾಡಲು ವಿಜ್ಞಾನಿಗಳು ನೀಡುವ ಸಲಹೆ ಇದಾಗಿದೆ. ಓಮಿಕ್ರಾನ್ ನಿಯಂತ್ರಣಕ್ಕೆ ನಮಗೆ ವಿಜ್ಞಾನ ಕೇಂದ್ರಿತ ತಂತ್ರಗಾರಿಕೆ ಅಗತ್ಯವಿದೆ ಎಂದು ಡಾ. ಸೌಮ್ಯಾ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಬ್ರಿಟನ್‌ನಲ್ಲಿ ಮೊದಲ ಬಾರಿಗೆ ಇಬ್ಬರಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ಪತ್ತೆ
ರೂಪಾಂತರಿ ಡೆಲ್ಟಾಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಹರಡುವ ಸಾಮರ್ಥ್ಯವನ್ನು ಓಮಿಕ್ರಾನ್ ಹೊಂದಿದೆ. ಆದರೂ ಈ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಹೊಸ ತಳಿ ಬಗ್ಗೆ ಸಾಕಷ್ಟು ಮಾಹಿತಿಗಳು ಹೊರಬರಲಿವೆ ಎಂದು ತಿಳಿಸಿದ್ದಾರೆ.