ಶ್ರೀನಗರ: ಕಳೆದ ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ (Pahalgam Terrorist Attack) ಬಳಿಕ ಜಮ್ಮು ಮತ್ತು ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ (Omar Abdullah) ಮೊದಲ ಬಾರಿಗೆ ಪ್ರಧಾನಿ ಮೋದಿ ಅವರನ್ನ ಭೇಟಿಯಾಗಿದ್ದಾರೆ.
ದೆಹಲಿಯ (Delhi) ಪ್ರಧಾನಿ ನಿವಾಸದಲ್ಲಿಂದು ಮೋದಿ ಭೇಟಿಯಾದ ಒಮರ್ ಅಬ್ಲುಲ್ಲಾ ಅವರು ಉಗ್ರರ ದಾಳಿ ಹಾಗೂ ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿಯ ಕುರಿತು ಚರ್ಚಿಸಿದ್ದಾರೆ. ಅಲ್ಲದೇ ಉಗ್ರರನ್ನು ಸದೆಬಡಿಯುವ ನಿಟ್ಟಿನಲ್ಲಿ ಹಾಗೂ ದೇಶದ ಭದ್ರತೆಗೆ ಸಂಬಂಧಿಸಿದ ವಿಷಯಗಳ ಕುರಿತು ಕೇಂದ್ರ ಸರ್ಕಾರ (Central Government) ಯಾವುದೇ ನಿರ್ಧಾರ ತೆಗೆದುಕೊಂಡರೂ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜಲ ಮಾರ್ಗ ಬಂದ್ – ಪಾಕ್‌ಗೆ ಹೋಗುವ, ಬರುವ ಹಡಗುಗಳ ಸಂಚಾರಕ್ಕೆ ಬ್ರೇಕ್ ಹಾಕಿದ ಭಾರತ
ಇನ್ನೂ ದಾಳಿಯ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) ಭದ್ರತಾ ಸವಾಲುಗಳು ಹೆಚ್ಚಾಗುತ್ತಿದ್ದು, ಕೇಂದ್ರವು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಚೆನ್ನೈಗೆ ಬಂದು ಶ್ರೀಲಂಕಾಗೆ ಹೋದ್ರಾ ಪಹಲ್ಗಾಮ್ ಉಗ್ರರು? – ಶ್ರೀಲಂಕಾ ಏರ್‌ಪೋರ್ಟಲ್ಲಿ ತಪಾಸಣೆ
ಜನರು ಒಗ್ಗಟ್ಟಿನಿಂದ ಇರಬೇಕು: ಫಾರೂಕ್
ಇದಕ್ಕೂ ಮುನ್ನ ಜೆ&ಕೆ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ದಾಳಿಯನ್ನು ಖಂಡಿಸಿದರು. ಭಯೋತ್ಪಾದನೆಯ ವಿರುದ್ಧ ದೇಶದ ಜನ ಒಗ್ಗಟ್ಟಿನಿಂದ ನಿಲ್ಲುವಂತೆ ಮನವಿ ಮಾಡಿದರು. ದಾಳಿಯಲ್ಲಿ ಭಾಗಿಯಾಗಿರುವವರು ಮಾನವೀಯತೆಯ ಶತ್ರುಗಳು, ಅವರು ನರಕದಲ್ಲಿ ಕೊಳೆಯುತ್ತಾರೆ. ಪಾಕ್ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಸಿಂಧೂ ನದಿ ನೀರು ಒಪ್ಪಂದವನ್ನು ಪುನರುಚ್ಚರಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಎಲ್ಲಾ ಹಿಂದೂಗಳನ್ನು ಸಾಲಾಗಿ ನಿಲ್ಲುವಂತೆ ಹೇಳಿದ್ರು: ಪಹಲ್ಗಾಮ್ ಭೀಕರತೆ ಬಿಚ್ಚಿಟ್ಟ ಸುಬೋಧ್
ಏ.22ರಂದು ನಡೆದಿತ್ತು ನರಮೇಧ
ಜಮ್ಮು-ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಜನಪ್ರಿಯ ಪ್ರವಾಸಿತಾಣ ಪಹಲ್ಗಾಮ್‌ನಲ್ಲಿ ಕಳೆದ ಏ.22ರಂದು ಉಗ್ರರು ನಡೆಸಿದ ಗುಂಡಿನ ದಾಳಿಗೆ ಇಬ್ಬರು ಕನ್ನಡಿಗರು ಸೇರಿ 26 ಮಂದಿ ಬಲಿಯಾಗಿದ್ದಾರೆ. 2019ರಲ್ಲಿ 40 ಯೋಧರನ್ನು ಬಲಿ ಪಡೆದ ಪುಲ್ವಾಮಾ ದಾಳಿಯ ಬಳಿಕ ಉಗ್ರರು ಕಣಿವೆಯಲ್ಲಿ ನಡೆಸಿದ ಭೀಕರ ದಾಳಿ ಇದಾಗಿದೆ. ಇದುವರೆಗೂ ಭದ್ರತಾಪಡೆಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದ ಉಗ್ರರು, ಇದೇ ಮೊದಲ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ಅಮಾಯಕ ಪ್ರವಾಸಿಗರನ್ನು ಟಾರ್ಗೆಟ್ ಮಾಡಿ ಹತ್ಯೆ ಗೈದಿದ್ದರು. ಈ ಘಟನೆ ಇದೀಗ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಭೀತಿ ತಂದೊಡ್ಡಿದೆ.