ಚಿಕ್ಕಬಳ್ಳಾಪುರ: ರಾಗಿ ಬೆಳೆ ಕಾವಲಿಗೆ ತೆರಳಿದ್ದ ವೃದ್ಧೆ ಕೊಲೆಯಾಗಿರುವ ಘಟನೆ ದೊಡ್ಡಬಳ್ಳಾಪುರದ (Doddaballapura) ಗುಂಜೂರಿನಲ್ಲಿ ನಡೆದಿದೆ.
ಮೃತ ವೃದ್ಧೆಯನ್ನು ಗ್ರಾಮದ ಚೌಡಮ್ಮ (75) ಎಂದು ಗುರುತಿಸಲಾಗಿದೆ. ಮೃತ ವೃದ್ಧೆ ತಮ್ಮ ಜಮೀನಿನಲ್ಲಿ ಬೆಳೆದಿದ್ದ ರಾಗಿ ಬೆಳೆಯನ್ನು ದನ-ಕರುಗಳು ಹಾಳು ಮಾಡುತ್ತವೆ ಎಂದು ಕಾವಲಿಗೆ ತೆರಳಿದ್ದರು. ಈ ವೇಳೆ ಜಮೀನಿನ ಬಳಿ ವೃದ್ಧೆಯ ಕತ್ತು ಹಿಸುಕಿ ತಲೆಗೆ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ವೃದ್ಧೆಯ ತಲೆಗೆ ತೀವ್ರ ಪೆಟ್ಟಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಕಗ್ಗೊಲೆ!
ವೃದ್ಧೆಯ ಕತ್ತಿಗೆ ಆಕೆಯ ಸೀರೆಯ ಸೆರಗನ್ನು ಬಿಗಿದು ಉಸಿರು ಕಟ್ಟಿಸಲಾಗಿದೆ ಎಂದು ಶಂಕಿಸಲಾಗಿದೆ. ಮಹಿಳೆಯ ಮಾಂಗಲ್ಯ ಸರ ಮತ್ತು ಕಿವಿಯ ಓಲೆ ಹಾಗೆಯೇ ಇದೆ. ಬೆಳೆದಿರುವ ರಾಗಿ ಬೆಳೆಯನ್ನು ದನ ಕರುಗಳು ತಿನ್ನುತ್ತಿವೆ ಎಂದು ಚೌಡಮ್ಮ ಇತ್ತೀಚೆಗೆ ಕೆಲವರೊಂದಿಗೆ ಜಗಳವಾಡುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಇನ್ಸ್‍ಪೆಕ್ಟರ್ ಮುನಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಫೋಟೋ ಎಡಿಟ್ ಮಾಡಿ ಬ್ಲಾಕ್‍ಮೇಲ್ – ಆರೋಪಿ ಅರೆಸ್ಟ್