ಮಂಗಳೂರು: ಶಾಲೆಯ ಹಳೆ ವಿದ್ಯಾರ್ಥಿಗಳು ತಮಗೆ ಕಲಿಸಿದ ಗುರುಗಳಿಗೆ ಕಾರ್ ಗಿಫ್ಟ್ ನೀಡುವ ಮೂಲಕ ಗುರುಗಳೂ ಶಿಷ್ಯರನ್ನು ಮರೆಯಲಾಗದಂತೆ ಮಾಡಿದ್ದಾರೆ.
ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆ ಮಂಗಳೂರಿನ ದಾರುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳು ತಮಗೆ ಕಲಿಸಿದ ಗುರುಗಳನ್ನು ಮರೆಯದೆ ಕಾರ್ ಗಿಫ್ಟ್ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Advertisement
Advertisement
ತಮಗೆ ಅಕ್ಷರಾಭ್ಯಾಸ ನೀಡಿದ ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ಬಿ.ಕೆ.ಫಕ್ರುದ್ದೀನ್ ಅವರು ನಿವೃತ್ತಗೊಂಡ ಸಂದರ್ಭದಲ್ಲಿ ಕಾರನ್ನು ಉಡುಗೊರೆ ನೀಡಿ ಬೀಳ್ಕೊಟ್ಟಿದ್ದಾರೆ. ತಮ್ಮ ನೆಚ್ಚಿನ ಶಿಕ್ಷಕರಿಗೆ ನಿವೃತ್ತಿಯಾಗುತ್ತಿದೆ ಎಂದು ತಿಳಿದ ಹಳೆ ವಿದ್ಯಾರ್ಥಿಗಳು ಏನಾದರೂ ವಿಭಿನ್ನ ಉಡುಗೊರೆ ಕೊಡಬೇಕೆಂದು ನಿರ್ಧರಿಸಿದರು. ಅದರಂತೆ ನಿವೃತ್ತ ಶಿಕ್ಷಕರಿಗೆ ಶಾಲಾ ಮಂಡಳಿ, ಹಳೆ ವಿದ್ಯಾರ್ಥಿಗಳು, ಊರ ನಾಗರಿಕರ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದರು.
Advertisement
ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಫಕ್ರುದ್ದೀನ್ ಅವರಿಗೆ ಹಳೆ ವಿದ್ಯಾರ್ಥಿಗಳು ಸೇರಿ ಖರೀದಿಸಿದ ಹೊಸ ಆಲ್ಟೋ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
Advertisement
ಸನ್ಮಾನ ಹಾಗೂ ಕಾರನ್ನು ಉಡುಗೊರೆಯಾಗಿ ಸ್ವೀಕರಿಸಿದ ಫಕ್ರುದ್ದೀನ್ ಅವರು ಮಾತನಾಡಿ, ಹಳೆ ವಿದ್ಯಾರ್ಥಿಗಳು ಇನ್ನೂ ನನ್ನನ್ನು ನೆನಪು ಇಟ್ಟುಕೊಂಡಿರೋದೇ ನನಗೆ ದೊಡ್ಡ ಉಡುಗೊರೆ. ಅಲ್ಲದೆ ಈ ಶಾಲೆಯಲ್ಲಿ ಕಲಿತ ಹಾಗೂ ತನ್ನಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಇಂದು ದೊಡ್ಡ ಹುದ್ದೆಗಳಲ್ಲಿರುವುದು ನನಗೆ ದೊಡ್ಡ ಉಡುಗೊರೆ. ಇಂತಹ ಅಪರೂಪದ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.