ಕೋಲಾರ: 60 ವರ್ಷ ಜೊತೆಯಾಗಿ ಬಾಳಿ ಬದುಕಿದ ಆದರ್ಶ ವೃದ್ಧ ದಂಪತಿ ಈಗ ಸಾವಿನಲ್ಲೂ ಒಂದಾಗಿದ್ದಾರೆ.
ಚಿನ್ನದನಾಡು ಕೋಲಾರದ ಪಿಸಿ ಬಡವಾಣೆಯ ನಿವಾಸಿಗಳಾದ 80 ವರ್ಷದ ಕೃಷ್ಣಪ್ಪ ಹಾಗೂ ಪತ್ನಿ 70 ವರ್ಷದ ಜಯಮ್ಮ 60 ವರ್ಷಗಳ ಹಿಂದೆ ಮದುವೆಯಾಗಿ ಅನ್ಯೋನ್ಯವಾಗಿ ತುಂಬು ಸಂಸಾರ ನಡೆಸಿದ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ.
Advertisement
ಕೃಷಿಕ ವಂಶವಾಗಿರುವ ಕೃಷ್ಣಪ್ಪ ಹಾಗೂ ಭಾಗ್ಯಮ್ಮ ದಂಪತಿ ತಮ್ಮ ಆರು ಜನ ಮಕ್ಕಳಲ್ಲಿ ಮೂರು ಗಂಡು, ಮೂರು ಹೆಣ್ಣು ಮಕ್ಕಳನ್ನು ಒಳ್ಳೆಯ ಸ್ಥಾನ ಮಾನಕ್ಕೆ ಬೆಳೆಸಿ, ಎಲ್ಲರಿಗೂ ಮದುವೆ ಮಾಡಿ ಮೊಮ್ಮಕ್ಕಳನ್ನು ಕಂಡಿದ್ದಾರೆ. ಕೊನೆ ಮಗ ಗಣೇಶ್ ಮನೆಯಲ್ಲಿ ವಾಸವಾಗಿದ್ದ ಇವರಿಬ್ಬರಿಗೆ ಕಳೆದ ಹಲವು ವರ್ಷಗಳಿಂದ ವಯೋಸಹಜ ಕಾಯಿಲೆಗಳು ಕಾಣಿಸಿಕೊಂಡಿತ್ತು.
Advertisement
Advertisement
ಸಕ್ಕರೆ ಖಾಯಿಲೆಯಿಂದ ಕೃಷ್ಣಪ್ಪ ಬಳಲುತ್ತಿದ್ರೆ, ಪತ್ನಿ ಭಾಗ್ಯಮ್ಮ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಸೋಮವಾರ ಬೆಳಗ್ಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಇವರಿಬ್ಬರು ಒಟ್ಟಾಗಿ ಕೊನೆಯುಸಿರು ಎಳೆದಿದ್ದು, ಮಕ್ಕಳು, ಮೊಮ್ಮಕಳು ಹಾಗೂ ಸೊಸೆಯಂದಿರಿಗೆ ಅಚ್ಚರಿ ಮೂಡಿಸಿದೆ. ರಾತ್ರಿ ಊಟ ಮಾಡಿ ಮಲಗಿದ್ದ ಮೃತ ಕೃಷ್ಣಪ್ಪ ಜೋರಾಗಿ ಗೊರಕೆ ಹೊಡೆಯುತ್ತಿರುವ ಶಬ್ಧ ಕೇಳಿ ಮಗ ಗಣೇಶ್ ಮಧ್ಯರಾತ್ರಿ ತಂದೆಯ ಆರೋಗ್ಯ ವಿಚಾರಿಸಿಕೊಂಡು ಮಲಗಿದ್ದಾರೆ.
Advertisement
ಸಂಜೆಯೇ ಗಣೇಶ್ ಕೋಲಾರದ ಬೇತಮಂಗಲದಲ್ಲಿರುವ ಅಕ್ಕ ಶೋಭಾಗೆ ಕರೆ ಮಾಡಿ ತಾಯಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಸಿದೆ. ಬೆಳಗ್ಗೆ 6 ಗಂಟೆಗೆ ಬಾ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡೋಣ ಎಂದು ತಿಳಿಸಿದ್ದಾರೆ. ಅದರಂತೆ ಬೆಳಗ್ಗೆ ತಾಯಿಗೆ ಸ್ನಾನ ಮಾಡಿಸಿ ಬೇಗ ರೆಡಿ ಆಗೋಣ ಎಂದು ತನ್ನ ತಾಯಿ ಮಲಗಿದ್ದ ಕೊಠಡಿಗೆ ಮಗ ಗಣೇಶ್ ಹಾಗೂ ಸೊಸೆ ಹೋಗಿ ನೋಡಿದಾಗ ಭಾಗ್ಯಮ್ಮ ಕೂಡ ಉಸಿರಾಟ ನಿಲ್ಲಿಸಿದ್ದಾರೆ.
ಕೂಡಲೇ ಈ ವಿಚಾರವನ್ನು ತಂದೆ ಕೃಷ್ಣಪ್ಪ ಅವರಿಗೆ ತಿಳಿಸಲು ಮತ್ತೊಂದು ಕೊಠಡಿಗೆ ಹೋದಾಗ ಅಲ್ಲಿಯೂ ತಂದೆ ಮೃತಪಟ್ಟಿರೋದು ತಿಳಿದಿದೆ. ಒಂದೂ ಕ್ಷಣ ನಂಬಲೂ ಅಸಾಧ್ಯವಾದರೂ, ವೃದ್ಧ ದಂಪತಿ ಒಂದೇ ರಾತ್ರಿಯಲ್ಲಿ ಹೀಗೆ ಆಗಿದ್ದು ಅಚ್ಚರಿಯೇ ಸರಿ. ಕೂಡಲೇ ಮಕ್ಕಳು, ಮೊಮ್ಮಕ್ಕಳು ಹಾಗೂ ಸೊಸೆಯಂದಿರಿಗೆ ವಿಷಯ ಮುಟ್ಟಿಸಿದ್ದಾರೆ. ಈ ಅಪರೂಪದ ಜೋಡಿಗಳ ಅಂತಿಮ ದರ್ಶನ ಮಾಡಲು ದಂಪತಿ ಸಮೇತ ಬಂದ ಕೆಲವರು ಪೂಜೆ ಸಲ್ಲಿಸಿ ಅಚ್ಚರಿ ವ್ಯಕ್ತಪಡಿಸಿದರು.