-ನೂತನ ವಾಹನ ನಿಯಮ ಜಾರಿಗೊಳಿಸಿದ ದೆಹಲಿ ಸರ್ಕಾರ
ನವದೆಹಲಿ: ಆ್ಯಪ್ ಆಧಾರಿದ ಟ್ಯಾಕ್ಸಿ ಸೇವೆಗಳಾದ ಓಲಾ ಮತ್ತು ಊಬರ್ ಗಳಲ್ಲಿ, ಪ್ರಯಾಣಿಕರು ಬುಕ್ಕಿಂಗ್ ಮಾಡಿದ ಮೇಲೆ ಚಾಲಕರು ಬರಲ್ಲ ಎಂದರೆ 25 ಸಾವಿರ ರೂಪಾಯಿ ದಂಡ ವಿಧಿಸುವ ನೂತನ ಯೋಜನೆಯನ್ನು ದೆಹಲಿ ಸರ್ಕಾರ ಜಾರಿಗೊಳಿಸಿದೆ.
ಹೌದು, ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳನ್ನು ನೀಡುತ್ತಿರುವ ಓಲಾ ಹಾಗೂ ಊಬರ್ ನಂತಹ ಖಾಸಗಿ ಕಂಪೆನಿಗಳ ಚಾಲಕರು, ಬುಕ್ಕಿಂಗ್ ಮಾಡಿದ ಬಳಿಕ, ಟ್ರಿಪ್‍ಗಳನ್ನು ರದ್ದು ಮಾಡುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಅಲ್ಲದೇ ಪ್ರಯಾಣಿಕರು ನಿಗದಿಪಡಿಸಿರುವ ಸ್ಥಳಗಳಿಗೆ ಬರಲು ಚಾಲಕರು ನಿರಾಕರಿಸುತ್ತಿರುವ ದೂರುಗಳು ಸಾಕಷ್ಟು ಪ್ರಮಾಣದಲ್ಲಿ ಕೇಳಿ ಬಂದಿದೆ.
Advertisement
Advertisement
ಪ್ರಯಾಣಿಕರಿಂದ ದಿನೇ ದಿನೇ ದೂರುಗಳು ದಾಖಲಾಗುತ್ತಿದ್ದರೂ, ಓಲಾ ಹಾಗೂ ಊಬರ್ ಕಂಪೆನಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಹೀಗಾಗಿ ಖಾಸಗಿ ಕಂಪೆನಿ ಹಾಗೂ ಚಾಲಕರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ದೆಹಲಿ ಸರ್ಕಾರ, ನೂತನ ಸಾರಿಗೆ ನಿಯಮವನ್ನು ಜಾರಿಗೆ ತಂದಿದೆ.
Advertisement
ದೆಹಲಿ ಸರ್ಕಾರ ಜಾರಿಗೆ ತಂದಿರುವ ನಿಯಮದ ಪ್ರಕಾರ, ಯಾವುದೇ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳಾದ ಓಲಾ ಮತ್ತು ಊಬರ್ ಗಳಲ್ಲಿ, ಪ್ರಯಾಣಿಕರು ಬುಕ್ಕಿಂಗ್ ಮಾಡಿದ ಬಳಿಕ ಟ್ರಿಪ್‍ಗಳನ್ನು ಯಾವುದೇ ಕಾರಣಕ್ಕೂ ರದ್ದು ಮಾಡುವಂತಿಲ್ಲ. ಅಲ್ಲದೇ ಪ್ರಯಾಣಿಕರು ನಿಗದಿಪಡಿಸಿದ ಸ್ಥಳಗಳಿಗೆ ತೆರಳಲು ಕೊನೆ ಸಮಯದಲ್ಲಿ ಚಾಲಕರು ನಿರಾಕರಿಸುವಂತಿಲ್ಲ ಎನ್ನುವ ಆದೇಶವನ್ನು ನೀಡಿದೆ. ಒಂದು ವೇಳೆ ಚಾಲಕರು ಅಥವಾ ಸಂಸ್ಥೆಗಳು ಕೊನೆ ಕ್ಷಣದಲ್ಲಿ ಪ್ರಯಾಣವನ್ನು ರದ್ದುಗೊಳಿಸಿದರೆ, ಅಂತವರ ವಿರುದ್ಧ ಸುಮಾರು 25,000 ರೂಪಾಯಿ ದಂಡ ವಿಧಿಸುವ ನಿಯಂತ್ರಕ ನೀತಿಯನ್ನು ಜಾರಿಗೊಳಿಸಿದೆ.
Advertisement
ಪ್ರಸ್ತುತ ಈ ನಿಯಮವು ದೆಹಲಿಯಲ್ಲಿ ಜಾರಿಯಾಗುತ್ತಿದೆ. ಅಲ್ಲದೇ ದೆಹಲಿ ಸರ್ಕಾರ ನೂತನ ಸಂಚಾರಿ ನಿಯಮಗಳನ್ನು ಸಾಕಷ್ಟು ಪರಿಷ್ಕರಣೆ ಮಾಡುತ್ತಿದೆ. ಇದಲ್ಲದೇ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಿರುವ ಸರ್ಕಾರವು, ಪ್ರಯಾಣಿಕರ ಮೇಲೆ ದೌರ್ಜನ್ಯ ಅಥವಾ ಅವರೊಂದಿಗೆ ಅಸಭ್ಯವಾಗಿ ವರ್ತಿಸುವ ದೂರುಗಳು ದಾಖಲಾದರೆ, ಅಂತವರ ಮೇಲೆ 1 ಲಕ್ಷ ರೂಪಾಯಿ ವರೆಗಿನ ದಂಡ ವಸೂಲಾತಿಗೆ ನಿಯಮವನ್ನು ರೂಪಿಸಿದೆ.
ಇದಲ್ಲದೇ ದೆಹಲಿಯ ಲೋಕೋಪಯೋಗಿ ಸಚಿವ ಎಸ್.ಜೈನ್ ನೇತೃತ್ವದ ತಜ್ಞರ ಸಮಿತಿಯು 2017 ರ ಪರವಾನಗಿ ಹಾಗೂ ಆ್ಯಪ್ ಆಧಾರಿದ ಟ್ಯಾಕ್ಸಿ ಸೇವೆಗಳು ಮತ್ತು ಸಿಟಿ ಟ್ಯಾಕ್ಸಿ ನಿಯಮಗಳನ್ನು ಪುನರ್ ಪರಿಷ್ಕರಣೆ ನಡೆಸಿ, ನೂತನ ನಿಯಾಮಳಿಗಳನ್ನು ದಿಲ್ಲಿ ಸಂಪುಟಕ್ಕೆ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಕಡ್ಡಾಯವಾಗಿ ಟ್ಯಾಕ್ಸಿಗಳು ಪಾಲಿಸಬೇಕಾದ ನಿಯಮಗಳು:
1. ಆ್ಯಪ್ ಆಧಾರಿತ ಹಾಗೂ ಸಿಟಿ ಟ್ಯಾಕ್ಸಿ ಸೇವೆಗಳ ಕಾಲ್ ಸೆಂಟರ್ ಗಳನ್ನು ಕಡ್ಡಾಯವಾಗಿ 24 ಗಂಟೆ ಜಾರಿಯಲ್ಲಿಡುವುದು.
2. ಆದಾಯ ತೆರಿಗೆ ಇಲಾಖೆಯಿಂದ ಮಾನ್ಯತೆ ಪಡೆದ ಆ್ಯಪ್ ಆಧಾರಿತ ಸೇವೆಗಳನ್ನು ಬಳಸುವುದು.
3. ಕಡ್ಡಾಯವಾಗಿ ಸಂಚಾರಿ ಇಲಾಖೆಯಿಂದ ಪರವಾನಿಗೆ ಪಡೆಯುವುದು.
4. ಪ್ರತಿ ವಾಹನಗಳಿಗೂ ಕಡ್ಡಾಯವಾಗಿ ಜಿಪಿಎಸ್ ಸಾಧನಗಳನ್ನು ಅಳವಡಿಸುವುದು.
5. ತುರ್ತು ಸಂದರ್ಭಗಳಲ್ಲಿ ಸ್ಥಳೀಯ ಪೊಲೀಸರಿಗೆ ಸಂದೇಶ ರವಾನಿಸುವ ಪ್ಯಾನಿಕ್ ಬಟನ್‍ಗಳನ್ನು ಸ್ಥಾಪಿಸುವುದು.
ಏನನ್ನು ಮಾಡಬಾರದು:
1. ಬುಕ್ಕಿಂಗ್ ಆಧಾರಿತ ಟ್ರಿಪ್ ಹಾಗೂ ಸರ್ವೀಸ್‍ಗಳನ್ನು ನಿರಾಕರಿಸುವಂತಿಲ್ಲ.
2. ಪ್ರಯಾಣಿಕರ ಲಿಂಗ, ಜಾತಿ, ಮತ, ಧರ್ಮ, ರಾಷ್ಟ್ರೀಯತೆ ಅಥವಾ ವೈಕಲ್ಯತೆಗಳ ಮೇಲೆ ತಾರತಮ್ಯ ಮಾಡುವಂತಿಲ್ಲ.
3. ಸಂಚಾರಿ ಇಲಾಖೆ ನಿಗದಿಪಡಿಸಿರುವ ನಿಗದಿತ ದರಕ್ಕಿಂತ ಅಧಿಕ ಮೊತ್ತ ಪಡೆಯುವಂತಿಲ್ಲ. ಒಂದು ವೇಳೆ ನಿಯಮವನ್ನು ಮೀರಿದರೆ ಪರವಾನಗಿ ರದ್ದುಪಡಿಸಲಾಗುತ್ತದೆ.
4. ಕುಡಿದು ವಾಹನಗಳನ್ನು ಚಲಾಯಿಸುವಂತಿಲ್ಲ.
5. ವಿಶೇಷವಾಗಿ ಮಹಿಳಾ ಪ್ರಯಾಣಿಕರು ಹಾಗೂ ಪ್ರಯಾಣಿಕರ ಜೊತೆ ಕೆಟ್ಟದಾಗಿ ನಡೆದುಕೊಳ್ಳುವಂತಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv