ಪಾಟ್ನಾ: ಬಿಹಾರ ರಾಜ್ಯದ ಸರ್ಕಾರಿ ಕಚೇರಿಯ ಸಿಬ್ಬಂದಿ ಪ್ರತಿದಿನ ಹೆಲ್ಮೆಟ್ ಧರಿಸಿ ಬಂದು ತಮ್ಮ ಕೆಲಸ ನಿರ್ವಹಿಸುತ್ತಾರೆ. ಆಫೀಸ್‍ನ ಒಂದು ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಶ್ಚಿಮ ಬಿಹಾರದ ಚಂಪಾರಣ್ ಜಿಲ್ಲೆಯ ಅರೆರಾಜ್ ಬ್ಲಾಕ್‍ನ ಭೂ ದಾಖಲೆಗಳ ಕಚೇರಿಯ ಸಿಬ್ಬಂದಿ ತಮ್ಮ ಪ್ರಾಣ ರಕ್ಷಣೆಗಾಗಿ ಪ್ರತಿದಿನ ಹೆಲ್ಮೆಟ್ ಧರಿಸ್ತಾರೆ. ಕಚೇರಿಯ ಕಟ್ಟಡ ಬೀಳುವ ಹಂತದಲ್ಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸಿಬ್ಬಂದಿ ಹೆಲ್ಮೆಟ್ ಹಾಕ್ತಾರೆ.
ಯಾವಗಲಾದ್ರೂ ಮೇಲ್ಚಾವಣಿಯ ಪ್ಲಾಸ್ಟರ್ ಕುಸಿದು ಬೀಳುತ್ತಿರುತ್ತದೆ. ಈಗಾಗಲೇ ಕೆಲ ಸಿಬ್ಬಂದಿಯ ತಲೆಯ ಮೇಲೆ ಸೀಲಿಂಗ್ ಬಿದ್ದು ಗಾಯಗೊಂಡಿದ್ದಾರೆ. ಹಾಗಾಗಿ ನಾವು ಹೆಲ್ಮೆಟ್ ಹಾಕ್ತೀವಿ ಎಂದು ಕಚೇರಿಯ ಉದ್ಯೋಗಿ ಎಂಡಿ ಪರ್ವೇಜ್ ಹೇಳ್ತಾರೆ.
ಕಚೇರಿಯ ಕಟ್ಟಡಕ್ಕಾಗಿ ಹಿರಿಯ ಅಧಿಕಾರಿಗಳಿಗೆ ಪತ್ರದ ಮೂಲಕ ತಿಳಿಸಲಾಗಿದೆ. ಆದ್ರೆ ಅಧಿಕಾರಿಗಳಿಂದ ಯಾವುದೇ ಉತ್ತರ ಸಿಕ್ಕಿಲ್ಲ. ಕಟ್ಟಡ ನಿರ್ಮಾಣ ಸಂಸ್ಥೆಯ ಅಧಿಕಾರಿಗಳು ಎರಡು ವರ್ಷಗಳ ಹಿಂದೆಯೇ ಕಟ್ಟಡ ವಾಸಕ್ಕೆ ಯೋಗ್ಯವಿಲ್ಲ ಮತ್ತು ಇದು ತುಂಬಾ ಅಪಾಯಕಾರಿ ಎಂದು ವರದಿ ನೀಡಿದ್ದಾರೆ. ಇನ್ನೂ ನಮಗೆ ಸರ್ಕಾರ ಮಾತ್ರ ಬೇರ ಕಟ್ಟಡಕ್ಕೆ ಸ್ಥಳಾಂತರಿಸಿಲ್ಲ ಎಂದು ಬಿಡಿಓ ಅಧಿಕಾರಿ ಅಮಿತ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಕಚೇರಿಯ ಸ್ಥಳಾಂತರದ ಕಾರ್ಯ ಈಗಾಗಲೇ ನಡೆಯುತ್ತಿದ್ದು, ಸೋಮವಾರದೊಳಗೆ ಕಚೇರಿ ಮತ್ತು ಸಿಬ್ಬಂದಿಯನ್ನು ಕೃಷಿ ಭವನಕ್ಕೆ ಶಿಫ್ಟ್ ಮಾಡಲಾಗುತ್ತದೆ. ಕಚೇರಿಯ ಸ್ಥಳಾಂತರದ ಕಾರ್ಯವನ್ನು ಸ್ಥಳೀಯ ಬಿಡಿಓ ಅಧಿಕಾರಿ ನಿಧಾನಗತಿಯಲ್ಲಿ ಮಾಡಿದ್ದು, ಇದಕ್ಕೆ ಸಂಬಂಧಪಟ್ಟಂತೆ ಅವರಿಗೆ ವಿವರಣೆ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಸಬ್-ಡಿವಿಸನಲ್ ಆಫೀಸರ್ ವಿಜಯ್ ಪಾಂಡೆ ಹೇಳಿದ್ದಾರೆ.