ವಿಜಯಪುರ: ಪೊಲೀಸ್ ಠಾಣೆ ಅಂದ್ರೆ ಅನ್ಯಾಯಕ್ಕೊಳಗಾದ ಜನರಿಗೆ ನ್ಯಾಯ ಕೊಡಿಸುವ ಪವಿತ್ರ ಸ್ಥಳ. ಆದ್ರೆ ಅದೇ ಪೊಲೀಸ್ ಠಾಣೆ ಬಾರ್ ಆಗಿ ಪರಿಣಮಿಸಿದ್ರೆ? ಹೌದು. ಇಡೀ ಪೊಲೀಸ್ ಇಲಾಖೆನೇ ತಲೆ ತಗ್ಗಿಸುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ವಿಜಯಪುರದ ಜಲ ನಗರ ಠಾಣೆ ಅಧಿಕಾರಿಗಳು ಹಾಗೂ ಪೇದೆಗಳು ಜನರ ಸಮಸ್ಯೆ ಆಲಿಸುವುದನ್ನು ಬಿಟ್ಟು ಹಾಡಹಗಲೇ ಠಾಣೆ ಆವರಣದಲ್ಲೇ ಗುಂಡಿನ ಮತ್ತಲ್ಲಿ ತೇಲಾಡಿದ್ದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಠಾಣೆಯನ್ನೇ ಬಾರ್ ಮಾಡಿಕೊಂಡ ಎಎಸ್‍ಐ ಮಾಳೆಗಾವ್, ಪೇದೆ ಸೊಡ್ಡಿ, ಪ್ರಕಾಶ ಅಕ್ಕಿ ಸೇರಿದಂತೆ ಇನ್ನುಳಿದ ಇಬ್ಬರು ಮದ್ಯಪಾನ ಮಾಡಿದ್ದು, ಇದರ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ದುರಂತವೆಂದರೆ ಕುಡುಕ ಪೊಲೀಸ್ ಅಧಿಕಾರಿಗಳಿಗೆ ಸರ್ವರ್ ಬೇರಾರೂ ಅಲ್ಲ ಠಾಣೆಯಲ್ಲೇ ಇರುವ ಮಹಿಳಾ ಪೇದೆ. ಅಸಹಾಯಕ ಮಹಿಳಾ ಪೇದೆ ಹಿರಿಯ ಅಧಿಕಾರಿಗಳಿಗೆ ಮರು ಪ್ರಶ್ನೆ ಮಾಡದೇ ಅವರು ಹೇಳಿದಂತೆ ಬಾಟಲಿಯಲ್ಲಿನ ಮದ್ಯವನ್ನು ಗ್ಲಾಸ್‍ಗಳಿಗೆ ಹಾಕಿ ಕೊಡಬೇಕಾದ ಅನಿವಾರ್ಯತೆ.
ಜಲನಗರ ಠಾಣೆ ಕಾಂಪೌಂಡಿನ ಬೈಕ್ ಪಾರ್ಕಿಂಗ್ ಬಳಿ ದೂರು ನೀಡಲು ಬಂದ ಜನರಿಗೆ ಕೂರಲು ವ್ಯವಸ್ಥೆ ಮಾಡಿರುವ ಕುರ್ಚಿಗಳೇ ಈ ಪೊಲೀಸ್ ಅಧಿಕಾರಿಗಳಿಗೆ ಆಸನ. ಇನ್ನು ಇವರಿಗೆ ಮದ್ಯದ ಜೊತೆ ನೆಂಚಿಕೊಳ್ಳೊಕೆ ಠಾಣೆ ಪಕ್ಕದಲ್ಲೇ ಇರುವ ಕಲ್ಯಾಣ ಮಂಟಪದಲ್ಲಿ ನಡೆಯುವ ಮದುವೆ ಮನೆಯ ಉಪ್ಪಿನಕಾಯಿ, ಬಜ್ಜಿ, ಮಿರ್ಚಿ, ಸಾಲದಕ್ಕೆ ಅಲ್ಲಿಯ ಭೂರಿ ಭೋಜನ. ಯಾರೂ ಹೇಳೋರೂ ಕೇಳೋರು ಇಲ್ಲವೆಂಬಂತೆ ಕುಡಿತದ ನಶೆಯಲ್ಲಿ ಇವರು ಆಡಿದ್ದೇ ಆಟ, ಆನೆ ನಡೆದಿದ್ದೇ ದಾರಿ ಎನ್ನುವಂತೆ ವರ್ತಿಸಿದ್ದಾರೆ.
https://www.youtube.com/watch?v=OOcU6Gc7EsM&feature=youtu.be