ಮೈಸೂರು: ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನಲ್ಲಿರುವ ತಾರಕ ಜಲಾಶಯದ ಕ್ರಸ್ಟ್ ಗೇಟ್ ಸಂಪೂರ್ಣವಾಗಿ ಮುಚ್ಚಲು ಇನ್ನೂ ಅಧಿಕಾರಿಗಳು ಪರದಾಡುತ್ತಿದ್ದಾರೆ.
ಭಾನುವಾರ ಸಂಜೆಯಿಂದ ಮೂರು ಕ್ರಸ್ಟ್ ಗೇಟ್ ಮುಚ್ಚಲು ಅಧಿಕಾರಿಗಳು ಪರದಾಡುತ್ತಿದ್ದು, ರಾತ್ರಿಯ ವೇಳೆಗೆ ಒಂದು ಗೇಟ್ ಅನ್ನು ಸಂಪೂರ್ಣವಾಗಿ ಮುಚ್ಚಲಾಯಿತು. ಆದರೆ ಉಳಿದ ಎರಡು ಗೇಟ್ ಗಳನ್ನು ಸಂಪೂರ್ಣವಾಗಿ ಮುಚ್ಚಲು ಸಾಧ್ಯವಾಗಿಲ್ಲ. ಇದರಿಂದ ನೀರು ಪೋಲಾಗುವುದು ಮುಂದುವರಿದಿದೆ.
ಭಾನುವಾರ ಸಂಜೆಯಿಂದ ಅಪಾರ ಪ್ರಮಾಣದ ನೀರು ಅಧಿಕಾರಿಗಳ ಬೇಜಾವಾಬ್ದಾರಿತನದಿಂದ ಪೋಲಾಗುತ್ತಿದೆ. ಐದು ವರ್ಷಗಳ ನಂತರ ಈಗ ಜಲಾಶಯ ಭರ್ತಿಯಾಗಿದೆ. ತಾರಕ ಜಲಾಶಯ 124 ಅಡಿ ಎತ್ತರವಿದ್ದು 4 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿದೆ. ಸುಮಾರು 14 ಸಾವಿರ ಎಕ್ಟೇರ್ ಕೃಷಿ ಪ್ರದೇಶಕ್ಕೆ ನೀರು ಸಿಗುತ್ತದೆ. ಇದನ್ನೂ ಓದಿ: ತಾರಕ ಜಲಾಶಯದಿಂದ ಭಾರೀ ಪ್ರಮಾಣದ ನೀರು ಪೋಲು – ರೈತರ ಆಕ್ರೋಶ
ಅಲ್ಲದೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡು ಪ್ರಾಣಿಗಳಿಗೆ ಕುಡಿಯುವ ನೀರು ಇದರಿಂದ ದೊರೆಯುತ್ತದೆ. ಈ ಬಾರಿ ಜಲಾಶಯ ತುಂಬಿದ್ದ ಕಾರಣ ವನ್ಯ ಪ್ರಾಣಿಗಳ ಕುಡಿಯುವ ನೀರಿಗೆ ಹಾಗೂ ಕೃಷಿಗೆ ನೀರಿನ ಸಮಸ್ಯೆ ಉಂಟಾಗುವುದಿಲ್ಲ ಎಂದು ಭಾವಿಸಲಾಗಿತ್ತು. ಆದರೆ ಅಧಿಕಾರಿಗಳ ಬೇಜಾವಾಬ್ದಾರಿಯಿಂದ ಭಾನುವಾರ ಸಂಜೆಯಿಂದ ಸಾವಿರಾರು ಕ್ಯೂಸೆಕ್ ನೀರು ವ್ಯರ್ಥವಾಗಿ ನದಿ ಪಾಲಾಗುತ್ತಿದೆ.