Connect with us

Latest

19 ಕಾಲ್ಬೆರಳು, 12 ಕೈಬೆರಳಿರುವ ಅಜ್ಜಿಯನ್ನ ಮಾಟಗಾತಿ ಎಂದು ನಿಂದಿಸಿದ ಜನ

Published

on

ಭುವನೇಶ್ವರ್: ಕೆಲವೊಂದು ಸನ್ನಿವೇಶದಲ್ಲಿ ಜನ್ಮಜಾತ ಕಾಯಿಲೆಯು ವ್ಯಕ್ತಿಯನ್ನು ಸಮಾಜದಿಂದ ಬೇರ್ಪಡಿಸುತ್ತದೆ. ಜೊತೆಗೆ ಜನರ ನಿಂದನೆ ಅಂತವರನ್ನು ಮನೆಯಿಂದ ಹೊರಹೋಗುವಂತೆ ಮಾಡುತ್ತದೆ. ಇಂತಹದ್ದೇ ಪರಿಸ್ಥಿತಿಯನ್ನು ಒಡಿಶಾದ ವೃದ್ಧೆಯೊಬ್ಬರು ಅನುಭವಿಸುತ್ತಿದ್ದಾರೆ.

ಸಾಮಾನ್ಯವಾಗಿ 10 ಕೈಬೆರಳು, 10 ಕಾಲ್ಬೆರಳು ಇರುತ್ತವೆ. ಆದರೆ ಒಡಿಶಾದ ಗಂಜಾಂ ಜಿಲ್ಲೆಯ 63 ವರ್ಷದ ಕುಮಾರ್ ನಾಯಕ್ ಎಂಬ ಮಹಿಳೆಗೆ ಪಾದಗಳಲ್ಲಿ 19 ಬೆರಳು, ಕೈಯಲ್ಲಿ 12 ಬೆರಳುಗಳನ್ನು ಹೊಂದಿದ್ದಾರೆ. ಹೀಗಾಗಿ ಗ್ರಾಮಸ್ಥರು ವೃದ್ಧೆಯನ್ನು ಮಾಟಗಾತಿ ಎಂದು ನಿಂದಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಯಾರೊಬ್ಬರೂ ಅಜ್ಜಿಯ ಬಳಿಗೆ ಹೋಗುವುದಿಲ್ಲ, ಮಾತನಾಡುವುದಿಲ್ಲ. ಇದನ್ನೂ ಓದಿ: 25 ಬಾರಿ ಸರ್ಜರಿಗೆ ಒಳಗಾದ್ರೂ ಕೈಯಲ್ಲಿ ತೊಗಟೆ ಬೆಳೆಯುವುದು ನಿಂತಿಲ್ಲ!

ಕುಮಾರ್ ನಾಯಕ್ ಅವರು ಹುಟ್ಟಿನಿಂದಲೇ ಪಾಲಿಡಾಕ್ಟೈಲಿ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಪರಿಣಾಮವಾಗಿ ಕೈ ಮತ್ತು ಕಾಲ್ಬೆರಳುಗಳ ಸಂಖ್ಯೆ ಸಾಮಾನ್ಯ ಮನುಷ್ಯರಿಗಿಂತ ಹೆಚ್ಚಾಗಿವೆ. ಜನರು ಇದನ್ನು ಅಸಹ್ಯವೆಂದು ಪರಿಗಣಿಸಿದ್ದಾರೆ. ಕುಮಾರ್ ನಾಯಕ್ ಚಿಕ್ಕವರಿದ್ದಾಗಲೇ ಮನೆಯಿಂದ ಹೊರಹೋಗುವಂತೆ ಸಂಬಂಧಿಕರು ಒತ್ತಾಯಿಸಿದ್ದರು ಎಂದು ವರದಿಯಾಗಿದೆ.

ಈ ಕುರಿತು ತಮ್ಮ ಅಳಲು ತೋಡಿಕೊಂಡ ವೃದ್ಧೆ, ಬಡ ಕುಟುಂಬದಲ್ಲಿ ಜನಿಸಿದ ಕಾರಣ ಚಿಕಿತ್ಸೆ ಸಿಗಲಿಲ್ಲ. 63 ವರ್ಷಗಳ ನಂತರವೂ ಜನರ ಆಲೋಚನೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅವರ ಮತ್ತು ನನ್ನ ನಡುವಿನ ಅಂತರವು ಹಾಗೇ ಉಳಿದಿದೆ. ಸ್ವಲ್ಪ ಸಮಯದ ನಂತರ ನಾನು ಅವರ ಟೀಕೆಗಳಿಂದ ಗಟ್ಟಿಯಾದೆ. ಆಗ ಮನೆ ಬಿಟ್ಟು ಹೋಗದಿರಲು ನಿರ್ಧರಿಸಿದೆ. ಅತಿ ಹೆಚ್ಚು ಬೆರಳುಗಳನ್ನು ನಾನು ಹೊಂದಿರುವುದನ್ನು ನೋಡಲು ಕೆಲವರು ಹತ್ತಿರ ಬರುತ್ತಾರೆ ಎಂದು ಹೇಳಿದ್ದಾರೆ.  ಇದನ್ನೂ ಓದಿ:  ವೃದ್ಧನ ತಲೆಯ ಮೇಲೆ ಬೆಳೆದ ಕೊಂಬು

ಪಾಲಿಡಾಕ್ಟೈಲಿ ಎಂದ್ರೇನು?:
ಸಾಮಾನ್ಯರಿಗಿಂತ ಕೈ ಮತ್ತು ಕಾಲುಗಳಲ್ಲಿ ಹೆಚ್ಚು ಬೆರಳುಗಳು ಇರಲು ಪಾಲಿಡಾಕ್ಟೈಲಿ (Polydactyly) ಕಾಯಿಲೆ ಕಾರಣವಾಗಿರುತ್ತದೆ. ಗರ್ಭಧಾರಣೆಯ 7 ಅಥವಾ 8ನೇ ವಾರದಲ್ಲಿ ಭ್ರೂಣವು ಹೆಚ್ಚು ಬೆರಳುಗಳನ್ನು ಬೆಳೆಸಿದಾಗ ಅಂತಹ ಪರಿಸ್ಥಿತಿ ಉಂಟಾಗುತ್ತದೆ. ಅಂಕಿಅಂಶಗಳ ಪ್ರಕಾರ, ವಿಶ್ವದಾದ್ಯಂತ 700ರಿಂದ 1000 ಮಕ್ಕಳಲ್ಲಿ ಇಂತಹ ಒಂದು ಪ್ರಕರಣ ಕಂಡು ಬರುತ್ತದೆ. ಆದರೆ ಇದನ್ನು ಗರ್ಭಾವಸ್ಥೆಯಲ್ಲಿ ಅಲ್ಟ್ರಾಸೌಂಡ್ ಮೂಲಕ ಕಂಡುಹಿಡಿಯಬಹುದು.

ಗುಜರಾತ್‍ನ ದೇವೇಂದ್ರ ಸುತಾರ್ ಕೂಡ ಪಾಲಿಡಾಕ್ಟೈಲಿ ಕಾಯಿಲೆಯಿಂದ ಹೋರಾಡುತ್ತಿದ್ದಾರೆ. ಅವರ ಕೈಗಳಲ್ಲಿ 14 ಮತ್ತು ಕಾಲುಗಳಲ್ಲಿ 14 ಬೆರಳುಗಳಿವೆ. ಇದಕ್ಕಾಗಿ ಅವರ ಹೆಸರನ್ನು ಗಿನ್ನೆಸ್ ಬುಕ್ ಆಫ್ ರೆಕಾಡ್ರ್ಸ್ ನಲ್ಲಿ ದಾಖಲಿಸಲಾಗಿದೆ. ದೇವೇಂದ್ರ ವೃತ್ತಿಯಲ್ಲಿ ಬಡಗಿಯಾಗಿದ್ದು, ಗರಿಷ್ಠ ಬೆರಳುಗಳನ್ನು ಹೊಂದಿರುವ ವಿಶ್ವದ ಏಕೈಕ ವ್ಯಕ್ತಿ ಎಂದು ಕರೆಯಲಾಗುತ್ತದೆ. ಆದರೆ ದೇವೇಂದ್ರ ಅವರ ಕುಟುಂಬದ ಇತರ ಸದಸ್ಯರು ಸಾಮಾನ್ಯರಂತೆ ಬೆರಳುಗಳನ್ನು ಹೊಂದಿದ್ದಾರೆ. ದೇವೇಂದ್ರ ಅವರು ಗಿನ್ನೆಸ್ ಬುಕ್ ಆಫ್ ರೆಕಾಡ್ರ್ಸ್ ನಿಂದ ಅಂತರಾಷ್ಟ್ರೀಯ ಖ್ಯಾತಿಯನ್ನು ಪಡೆದರು. ಆದರೆ ಯಾವುದೇ ಹಣಕಾಸಿನ ಸಹಾಯವನ್ನು ಹೊಂದಿರಲಿಲ್ಲ.

Click to comment

Leave a Reply

Your email address will not be published. Required fields are marked *