ಭುವನೇಶ್ವರ: ಹುಡುಗಿಯೊಬ್ಬಳನ್ನು ಕಿಡ್ನಾಪ್ ಮಾಡಿ ಮನೆಯಲ್ಲಿ ಕೂಡಿ ಹಾಕಿ 28 ದಿನಗಳ ಸತತವಾಗಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದು, ಬಳಿಕ ಸಂತ್ರಸ್ತೆಯನ್ನು ನದಿಗೆ ಎಸೆದಿರುವ ಘಟನೆ ಒಡಿಶಾದ ಜಾಜ್ಪುರ್ ಜಿಲ್ಲೆಯಲ್ಲಿ ನಡೆದಿದೆ.
ಭಾನುವಾರ ಆರೋಪಿಗಳು ಸಂತ್ರಸ್ತೆಯನ್ನು ಖರಾಸ್ರೋಟಾ ನದಿಗೆ ಬಿಸಾಕಿದ್ದಾರೆ. ಬಳಿಕ ಸಂತ್ರಸ್ತೆ ಹೇಗೋ ಕಷ್ಟಪಟ್ಟು ಈಜಿಕೊಂಡು ಜಿಲ್ಲೆಯ ಕೌಖಿಯಾ ಪೊಲೀಸ್ ವ್ಯಾಪ್ತಿಯಲ್ಲಿ ಬರುವ ರೌಟ್ಪುರ್ ಗ್ರಾಮದ ತೀರಕ್ಕೆ ಬಂದಿದ್ದಾಳೆ. ಬಳಿಕ ನಡೆದ ಘಟನೆಯ ಬಗ್ಗೆ ಅಲ್ಲಿನ ಗ್ರಾಮಸ್ಥರಿಗೆ ತಿಳಿಸಿದ್ದಾಳೆ.
ಆಗಸ್ಟ್ 20ರಂದು ಮಧುಬಾನ್ ಬಜಾರ್ ಗೆ ಹೋಗುತ್ತಿದ್ದಾಗ ಅಪರಿಚಿತ ಯುವಕರ ಗುಂಪೊಂದು ಬಂದು ನನ್ನನ್ನು ಅಪಹರಿಸಿತ್ತು. ಬಳಿಕ ನಿರ್ಜನ ಪ್ರದೇಶದಲ್ಲಿದ್ದ ಒಂದು ಮನೆಯಲ್ಲಿ ಕೂಕಿ ಹಾಕಿದ್ದು, ಅಂದಿನಿಂದಲೂ ಭಾನುವಾರದ ವರೆಗೂ ಅಂದರೆ ಸತತ 28 ದಿನಗಳ ಕಾಲ ನನ್ನ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಗ್ರಾಮಸ್ಥರ ಬಳಿ ಹೇಳಿಕೊಂಡಿದ್ದಾಳೆ.
ಭಾನುವಾರ ರಾತ್ರಿ ಆರೋಪಿಗಳು ಸಂತ್ರಸ್ತೆಯನ್ನು ಕೊಲೆ ಮಾಡುವ ಉದ್ದೇಶದಿಂದ ಖರಾಸ್ರೋಟಾ ನದಿಗೆ ಎಸೆದಿದ್ದಾರೆ. ಆದರೆ ಸಂತ್ರಸ್ತೆ ಬದುಕುಳಿದಿದ್ದು, ಈಜಿಕೊಂಡು ದಡ ಸೇರಿದ್ದಾಳೆ. ನಂತರ ಗ್ರಾಮಸ್ಥರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಸಂತ್ರಸ್ತೆಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಆಗಸ್ಟ್ 20 ರಂದು ನಮ್ಮ ಮಗಳು ನಾಪತ್ತೆಯಾಗಿದ್ದಾಳೆ ಎಂದು ಸಂತ್ರಸ್ತೆಯ ಪೋಷಕರು ದೂರು ದಾಖಲಿಸಿದ್ದರು. ನಾವು ಅನೇಕ ದಿನಗಳಿಂದ ಹುಡುಕಾಟ ನಡೆಸುತ್ತಿದ್ದೆವು. ಈಗ ಸಂತ್ರಸ್ತೆ ಪತ್ತೆಯಾಗಿದ್ದಾಳೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv