ಸ್ಯಾಂಡಲ್ ವುಡ್ ಅನೇಕ ಕಲಾವಿದರು ಈಗಾಗಲೇ ಆಮ್ ಆದ್ಮಿ ಪಾರ್ಟಿ ಸೇರಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ನಿರ್ದೇಶಕರೊಬ್ಬರು ಎಪಿಪಿ ಸೇರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಬಳ್ಳಾರಿ ದರ್ಬಾರ್, 18 ಟು 25 ಲವ್ ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ದೇಶನ ಮಾಡಿರುವ ಹಾಗೂ ಕೆಲ ಸಿನಿಮಾಗಳಿಗೆ ಬಣ್ಣ ಹಚ್ಚಿರುವ ನಿರ್ದೇಶಕ ನಾರಿ ಶ್ರೀನಿವಾಸ್ (ಸ್ಮೈಲ್ ಶ್ರೀನು) (Smile Srinu) ಅವರು ಆಮ್ ಆದ್ಮಿ ಪಕ್ಷಕ್ಕೆ (Aam Aadmi Party) ಸೇರ್ಪಡೆಯಾಗಿದ್ದಾರೆ. ಅವರ ನಿರ್ದೇಶನದ ಓ ಮೈ ಲವ್ ಸಿನಿಮಾ ಇದೀಗ 50 ದಿನಗಳನ್ನು ಪೂರೈಸಿದ್ದು, ಈ ಸಂದರ್ಭದಲ್ಲಿ ಅವರು ರಾಜಕೀಯಕ್ಕೆ ಪ್ರವೇಶ ಮಾಡಿದ್ದಾರೆ.
ಬೆಂಗಳೂರಿನ (Bangalore) ಪಕ್ಷದ ಕಛೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನಿವೃತ್ತ ಪೋಲೀಸ್ ಅಧಿಕಾರಿ ಹಾಗೂ ಎಎಪಿ ರಾಜ್ಯ ಉಪಾಧ್ಯಕ್ಷ ಭಾಸ್ಕರ ರಾವ್ (Bhaskar Rao) ಅವರು ಪಕ್ಷದ ಧ್ವಜವನ್ನು ನಾರಿ ಶ್ರೀನಿವಾಸ್ ಅವರಿಗೆ ನೀಡುವ ಮೂಲಕ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ಜಗದೀಶ್ ಅವರ ಸಮ್ಮುಖದಲ್ಲಿ ನಡೆದ ಈ ಕಾಯ್ರಕ್ರಮದಲ್ಲಿ ಮಾತನಾಡಿದ ಶ್ರೀನಿವಾಸ್ ನಾನು ಹಣ ಹೆಸರು ಮಾಡಲು, ನಾಯಕನಾಗಲು ಬಂದಿಲ್ಲ, ನಮ್ಮ ಜನ ತಮ್ಮ ದುಖಗಳನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೆ ನುಂಗಿಕೊಳ್ಳುತ್ತಿದ್ದಾರೆ. ಜನರಿಗೆ ಉತ್ತಮ ಆರೋಗ್ಯ ಶಿಕ್ಷಣ ಇದ್ದರೆ ಎಲ್ಲವನ್ನೂ ಗೆಲ್ಲಬಹುದು. ಕಟ್ಟಕಡೆಯ ವ್ಯಕ್ತಿಗೂ ಸಹ ಮೂಲಭೂತ ಸೌಕರ್ಯಗಳು ದೊರೆಯಬೇಕು ಎನ್ನುವುದೇ ನನ್ನ ಉದ್ದೇಶ. ಸಂಘ ಸಂಸ್ಥೆಗಳ ಮೂಲಕ ಜನರಿಗೆ ಸಹಾಯ ಮಾಡಬಹುದು. ಒಬ್ಬನೇ ಮಾಡಲು ಸಾಧ್ಯವಿಲ್ಲ. ನಾನು ಜನರ ಸೇವೆ ಮಾಡಲೆಂದೇ ರಾಜಕೀಯಕ್ಕೆ ಬಂದಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ:ನಾಗಚೈತನ್ಯ- ಸಮಂತಾ ಬ್ರೇಕಪ್ ಬಗ್ಗೆ ಕೊನೆಗೂ ಮೌನ ಮುರಿದ ನಟ ನಾಗಾರ್ಜುನ್
ನಂತರ ಭಾಸ್ಕರ ರಾವ್ ಮಾತನಾಡಿ ಕೇಜ್ರಿವಾಲರ ಪ್ರಾಮಾಣಿಕತೆಗೆ ಬೆಲೆ ಕೊಟ್ಟು ಹೆಚ್ಚಿನ ಸಂಖ್ಯೆಯ ಯುವಕರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ಒಂದು ಪಕ್ಷ ಹತ್ತು ವರ್ಷಗಳಲ್ಲಿ ೨ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರುವುದು ಸಾಮಾನ್ಯದ ಮಾತಲ್ಲ. ನಾವು ಮಾಡುವ ಕೆಲಸ ಜನರಿಗೆ ಇಷ್ಟವಾಗಿದೆ. ನಮಗೆ ಅನುಭವಿ ರಾಜಕಾರಣಿಗಳು ಬೇಕಿಲ್ಲ, ಇಂಥ ಯುವಕರೇ ಬೇಕಾಗಿದೆ ಎಂದು ಹೇಳಿದರು.