ದಾವಣಗೆರೆ: ಕಳೆದ ವರ್ಷದ ದೀಪಾವಳಿ ಮುನ್ನಾ ದಿನ ನ್ಯಾಮತಿಯ (Nyamathi) ಎಸ್‍ಬಿಐನಲ್ಲಿ (SBI) ನಡೆದಿದ್ದ 17 ಕೆಜಿ ಚಿನ್ನ (Gold) ಕಳ್ಳತನ ಪ್ರಕರಣ ಸುಖಾಂತ್ಯ ಕಂಡಿದೆ. ಗ್ರಾಹಕರ ಬಂಗಾರವನ್ನು ಪೊಲೀಸರು ಬ್ಯಾಂಕ್‍ಗೆ ಹಸ್ತಾಂತರಿಸಿದ್ದಾರೆ.
ಅಕ್ಟೋಬರ್ 2024ರ 28ರಂದು ಕಳ್ಳತನ ನಡೆದಿತ್ತು. ಈ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬಿಳಿಸಿತ್ತು. ಅಲ್ಲಿ ಪಕ್ಕಾ ಹಾಲಿವುಡ್ ಸಿನೆಮಾ ಮೀರಿಸುವಂತೆ ಸಂಚು ಮಾಡಿ ಕಳ್ಳತನ ಮಾಡಲಾಗಿತ್ತು. ಆ ಬ್ಯಾಂಕಿನಿಂದ 12.95 ಕೋಟಿ ರೂ. ಮೌಲ್ಯದ 509 ಜನ ಗ್ರಾಹಕರ, 17 ಕೆಜಿಗೂ ಅಧಿಕ ಚಿನ್ನಾಭರಣ ಕದ್ದು ಕಳ್ಳರು ಕಾಲ್ಕಿತ್ತಿದ್ದರು. ಇದನ್ನೂ ಓದಿ: ನ್ಯಾಮತಿ ಬ್ಯಾಂಕ್ ದರೋಡೆ ಪ್ರಕರಣ – ತಮಿಳುನಾಡಿನ ಪಾಳು ಬಾವಿಯಲ್ಲಿ ಚಿನ್ನಾಭರಣ ಇಟ್ಟಿದ್ದ ಗ್ಯಾಂಗ್!
ಹೊರಡುವ ಮುನ್ನ ಖತರ್ನಾಕ್ ಕಳ್ಳರು ಬ್ಯಾಂಕ್‍ನಲ್ಲಿ ಪ್ರಮುಖ ಸಾಕ್ಷಿಯಾಗಬಲ್ಲ ಸಿಸಿ ಟಿವಿ ಕ್ಯಾಮೆರಾ ಡಿವಿಆರ್ ತೆಗೆದುಕೊಂಡು, ಇಡಿ ಬ್ಯಾಂಕ್ ತುಂಬೆಲ್ಲಾ ಕಾರದ ಪುಡಿ ಎಸೆದಿದ್ದರು. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಬ್ಯಾಂಕ್‍ನಲ್ಲಿ ಬಂಗಾರ ಅಡವಿಟ್ಟಿದ್ದ ಗ್ರಾಹಕರು ಅಕ್ಷರಶಃ ಕಂಗಾಲಾಗಿದ್ದರು.
ದಾವಣಗೆರೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಸಂಪೂರ್ಣ ಬಂಗಾರ ವಶಪಡಿಸಿಕೊಂಡಿದ್ದರು. ಕಾನೂನು ಪ್ರಕ್ರಿಯೆ ಮುಗಿದ ಹಿನ್ನಲೆ ಪೊಲೀಸರು ಗ್ರಾಹಕರ ಸಮ್ಮುಖದಲ್ಲಿ ಎಲ್ಲ ಬಂಗಾರವನ್ನು ಬ್ಯಾಂಕ್‍ಗೆ ಹಸ್ತಾಂತರ ಮಾಡಿದ್ದಾರೆ.
ಪೊಲೀಸರು ಹಸ್ತಾಂತರ ಮಾಡುತ್ತಿದ್ದಂತೆ ಸೇರಿದ್ದ ಎಸ್‍ಬಿಐ ಗ್ರಾಹಕರು, ಕಳ್ಳತನ ನಡೆದ ದಿನ ತಮ್ಮ ಕುಟುಂಬದ ಪರಿಸ್ಥಿತಿ ನೆನೆದು ಭಾವುಕರಾಗಿದ್ದಾರೆ. ಇದನ್ನೂ ಓದಿ: ಎಸ್‌ಬಿಐ ಬ್ಯಾಂಕ್ ದರೋಡೆ ಕೇಸ್ – 12.96 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ್ದ 5 ಆರೋಪಿಗಳು ಅರೆಸ್ಟ್