ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆಯು (ISRO) ಮಹತ್ವಾಕಾಂಕ್ಷೆಯ ಗಗನಯಾನಕ್ಕೆ (Mission Gaganyaan) ಸಜ್ಜಾಗುತ್ತಿದೆ. ಈಗಾಗಲೇ ಅಂತರಿಕ್ಷಯಾನಿಗಳ ಹೆಸರು ಹಾಗೂ ವಿವರಗಳನ್ನೂ ಬಹಿರಂಗಪಡಿಸಿದೆ.
ಗ್ರೂಪ್ ಕ್ಯಾಪ್ಟನ್‌ಗಳಾದ ಪ್ರಶಾಂತ್ ಬಾಲಕೃಷ್ಣನ್ ನಾಯರ್ (Prashanth Nair), ಅಂಗದ್ ಪ್ರತಾಪ್, ಅಜಿತ್ ಕೃಷ್ಣನ್ ಮತ್ತು ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ (Shubhanshu Shukla) ಅವರು ಬಾಹ್ಯಾಕಾಶಕ್ಕೆ ಭಾರತದ ಮೊದಲ ಮಾನವ ಸಹಿತ ಗಗನಯಾನ ಮಿಷನ್‌ನಲ್ಲಿ ಗಗನಯಾತ್ರಿಗಳಾಗಿ ಆಯ್ಕೆಯಾಗಿದ್ದಾರೆ. ಗಗನಯಾತ್ರಿಗಳ ಆಯ್ಕೆಯು ಐಎಎಫ್‌ನ ಇನ್‌ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್‌ನಲ್ಲಿ ಇತ್ತೀಚೆಗೆ ನಡೆಯಿತು. ಇದನ್ನೂ ಓದಿ: ಆದಿತ್ಯ ಮಿಷನ್ ಉಡಾವಣೆಯಾದ ದಿನವೇ ಇಸ್ರೋ ಮುಖ್ಯಸ್ಥ ಸೋಮನಾಥ್‌ಗೆ ಕ್ಯಾನ್ಸರ್
Advertisement
Advertisement
ಭಾರತದ ಮೊಟ್ಟ ಮೊದಲ ಗಗನಯಾತ್ರೆಗೆ ಆಯ್ಕೆಯಾಗಿರುವ ನಾಲ್ವರು 140 ಕೋಟಿ ಭಾರತೀಯರ ಕನಸನ್ನು ನಭಕ್ಕೆ ಕೊಂಡೊಯ್ಯಲಿದ್ದಾರೆ. ಅಂದು ರಾಕೆಟ್ ಸೃಷ್ಟಿಸುವ ಸದ್ದಿಗೆ ಅವರ ಕಿವಿ ತಡೆದುಕೊಳ್ಳಬೇಕು, ಹೃದಯ ಬಡಿತ ಅಷ್ಟೇ ಸ್ಥಿರತೆ ಕಾಯ್ದುಕೊಳ್ಳಬೇಕು. ಇಸ್ರೋ ವಿಜ್ಞಾನಿಗಳಿಗೆ ಇದು ಕೇವಲ ಉಡಾವಣೆಯಷ್ಟೇ ಅಲ್ಲ. ಯಾತ್ರಿಕರು ಗಗನ ತಲುಪಿ ಮೂರ್ನಾಲ್ಕು ದಿನ ಅವರು ಕುಳಿತ ಕ್ಯಾಪ್ಸುಲ್ 300 ಕಿಮೀ ಆಚೆಗೆ ಸುತ್ತಾಡಿ, ಮರಳಿ ಭೂಮಿಗೆ ಬರುವವರೆ ಅವರ ಯೋಗಕ್ಷೇಮ ಅಷ್ಟೇ ಮುಖ್ಯ. ಅದಕ್ಕಾಗಿ ಈಗಾಗಲೇ ಇಸ್ರೋ ಸೂಕ್ತ ತರಬೇತಿಯನ್ನೂ ಕೊಡಿಸುತ್ತಿದೆ.
Advertisement
ಕಳೆದ 50 ವರ್ಷಗಳಲ್ಲಿ ಹಲವಾರು ಉಪಗ್ರಹಗಳನ್ನು ಇಸ್ರೋ ಕಕ್ಷೆಗೆ ಸೇರಿಸಿದೆ. ಆದ್ರೆ ಅವುಗಳನ್ನು ಎಲೆಕ್ಟ್ರಾನಿಕ್ ಸಿಗ್ನಲ್ ಬಳಸಿ ನಿಯಂತ್ರಿಸುತ್ತಿದೆ. ಮಂಗಳನ ಕಕ್ಷೆಗೆ ನೌಕೆ ಬಿಟ್ಟಿದ್ದು, ಚಂದ್ರನ ಮೇಲೆ ರೋವರ್ ಇರಿಸಿದ್ದು, ಸೂರ್ಯನ ಅಧ್ಯಯನಕ್ಕೆ ನೌಕೆ ಕಳುಹಿಸಿರುವುದು ಇದೆಲ್ಲವೂ ಇಸ್ರೋನ ಹೆಮ್ಮೆ. ಆದ್ರೆ ಗಗನಯಾನ ಇದೆಲ್ಲದಕ್ಕಿಂತಲೂ ಭಿನ್ನ. ಏಕೆಂದರೆ ಭಾರತ ಈವರೆಗೆ ಗಗನಯಾನಕ್ಕೆ ಯಾವುದೇ ಜೀವಿಯನ್ನು ಕಳುಹಿಸಿಲ್ಲ. ಹಾಗಾಗಿ ಯಾವ ಅನುಭವಗಳನ್ನು ಆಧಾರವಾಗಿಟ್ಟುಕೊಂಡು ಭಾರತ ಗಗನಯಾನಕ್ಕೆ ವಿಜ್ಞಾನಿಗಳನ್ನ ಕಳುಹಿಸಲಿದೆ ಎಂಬುದೂ ಅಷ್ಟೇ ಕುತೂಹಲ. ಇದರೊಂದಿಗೆ ಗಗನಯಾತ್ರಿಗೆ ಹೋಗುವವರ ಆರೋಗ್ಯ ದೃಷ್ಟಿಯಿಂದ ಅವರಿಗೆ ನೀಡಬೇಕಾದ ಆಹಾರ ಕ್ರಮದ ಬಗ್ಗೆಯೂ ಕಾಳಜಿ ಇರುತ್ತದೆ. ಅಂತರಿಕ್ಷ ಯಾನ ಮುಗಿಯುವವರೆಗೆ ಅವರು ಯಾವ ರೀತಿಯ ಆಹಾರ ಸೇವನೆ ಮಾಡಬೇಕು? ಏನೇನು ಆಹಾರ ಸೇವಿಸುತ್ತಾರೆ ಅನ್ನೋದು ಸಹ ಕುತೂಹಲವಿರುತ್ತದೆ.
Advertisement
ಗಗನಯಾನಿಗಳ ಆಹಾರ ಕ್ರಮ ಹೇಗಿರುತ್ತೆ? ಎಲ್ಲಿಂದ ತಯಾರಾಗುತ್ತೆ?
ಗಗನಯಾತ್ರಿಗಳಿಗೆ ಆಹಾರ ತಯಾರಿಸುವ ಹೊಣೆಯನ್ನು ಹೈದರಾಬಾದಿನ ಐಸಿಎಂಆರ್ – ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (ಎನ್ಐಎನ್) ಸಂಸ್ಥೆಯು ಹೊತ್ತಿದೆ. ಇಲ್ಲಿನ ಸಂಶೋಧಕರು ಗಗನಯಾತ್ರಿಗಳೊಡನೆ ಸಹಯೋಗ ಹೊಂದಿ, ಅವರಿಗಾಗಿ ಅವಶ್ಯಕ ಪೋಷಕಾಂಶಗಳನ್ನು ಹೊಂದಿರುವ ಆಹಾರ ಕ್ರಮವನ್ನು ರೂಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಗಗನಯಾತ್ರಿಗಳು ಬಾಹ್ಯಾಕಾಶದಿಂದ ಮರಳಿದ ಬಳಿಕವೂ ಅವರ ಆಹಾರ ಕ್ರಮದೆಡೆಗೆ ವಿಶೇಷ ನಿಗಾವನ್ನು ಸಹ ವಹಿಸಲಾಗುತ್ತಿದೆ.
ಬಾಹ್ಯಾಕಾಶ ಯಾನ ತರಬೇತಿ ಸಂದರ್ಭದಲ್ಲಿ, ಬಾಹ್ಯಾಕಾಶಯಾನ ಸಂದರ್ಭದಲ್ಲಿ ಮತ್ತು ಹಾರಾಟ ಹಂತಗಳ ಬಳಿಕವು ಅವರ ಶಕ್ತಿ ಮಟ್ಟವನ್ನು ಅಳೆಯಬೇಕಾಗುತ್ತದೆ. ಅದಕ್ಕಾಗಿಯೇ ಆಹಾರ ಕ್ರಮವು ಮುಖ್ಯವಾಗಿದೆ. ಇದು ಅವರ ಆರೋಗ್ಯ, ದೈನಂದಿನ ಚಟುವಟಿಕೆಗಳು, ಜೀವರಾಸಾಯನಿಕ ಮತ್ತು ಶಾರೀರಿಕ ಸೂಚಕಗಳ ಪರೀಕ್ಷೆಗಳನ್ನು ಒಳಗೊಂಡಿದ್ದು, ಇದರ ಮೌಲ್ಯಮಾಪನದ ಆಧಾರದಲ್ಲಿ ಆಹಾರ ಯೋಜನೆಯನ್ನು ರೂಪಿಸಲಾಗುತ್ತದೆ. ಇದನ್ನೂ ಓದಿ: ನೌಕಾಪಡೆಗೆ ಎಂಹೆಚ್ 60ಆರ್ ಸೀಹಾಕ್ ಹೆಲಿಕಾಪ್ಟರ್ ನಿಯೋಜನೆಗೆ ಸಿದ್ಧತೆ – ಭಾರತಕ್ಕೆ ಭೀಮ ಬಲ
ವಿಜ್ಞಾನಿಗಳು ಈಗಾಗಲೇ ಗಗನಯಾತ್ರಿಗಳ ಆಹಾರ ಆದ್ಯತೆಗಳ ಕುರಿತು, ರುಚಿಗಳ ಕುರಿತು ಮಾಹಿತಿ ಕಲೆಹಾಕಿದ್ದಾರೆ. ಇದು ಸಸ್ಯಾಹಾರ ಮತ್ತು ಮಾಂಸಾಹಾರಗಳನ್ನೂ ಒಳಗೊಂಡಿರುತ್ತದೆ. ಗಗನಯಾತ್ರಿಗಳು ತಮ್ಮ ಪ್ರಯಾಣದ ಮೊದಲ ದಿನದಂದು ತಾಜಾ ತರಕಾರಿಗಳನ್ನು ಸೇವಿಸುವ ಅವಕಾಶವಿದೆಯಾದರೂ, ಇನ್ನುಳಿದ ಪ್ರಯಾಣದ ಸಂದರ್ಭದಲ್ಲಿ ತಾವು ಕೊಂಡೊಯ್ದ ಆಹಾರವನ್ನೇ ಸೇವಿಸಬೇಕಾಗುತ್ತದೆ. ಅವರಿಗೆ ನೀಡಿರುವ ಆಹಾರ ಆಯ್ಕೆಗಳಲ್ಲಿ ಬಿರಿಯಾನಿಯೂ ಒಂದಾಗಿದೆ ಎಂದು ಆಹಾರ ಸಂಶೋಧಕರು ತಿಳಿಸಿದ್ದಾರೆ.
ಭಾರತದ ಗಗನಯಾನಕ್ಕೆ ಆಧಾರ ಏನು?
ಈ ಹಿಂದೆ ರಷ್ಯಾದ ದತ್ತಾಂಶಗಳನ್ನೇ ಆಧರಿಸಿ ಚೀನಾ ಬಾಹ್ಯಾಕಾಶಕ್ಕೆ ಜಿಗಿದಿತ್ತು. 20023ರ ಅಕ್ಟೋಬರ್ 15 ರಂದು ಶೆಂಝೌ-15 ನೌಕೆ ಮೂಲಕ ಚೀನಾದ ಗಗನ ಯಾತ್ರಿಕ ಯಾಂಗ್ ಲಿವೆಯಿ 21 ಗಂಟೆಗಳಲ್ಲಿ ಭೂಮಿಗೆ 14 ಸುತ್ತುಗಳನ್ನು ಪೂರ್ಣಗೊಳಿಸಿದ್ದರು. ಬಳಿಕ ಪ್ಯಾರಾಚುಟ್ ಮೂಲಕ ಇನ್ನರ್ ಮಂಗೋಲಿಯಾದ ಮರುಭೂಮಿಯಲ್ಲಿ ಯಶಸ್ವಿಯಾಗಿ ಇಳಿದು ಇತಿಹಾಸ ನಿರ್ಮಿಸಿದ್ದರು. ಲಿವೆಯಿಗೆ ರಷ್ಯಾದಲ್ಲೇ ಚೀನಾ ತರಬೇತಿ ಕೊಡಿಸಿತ್ತು. ಆದ್ರೆ ಪ್ರಸ್ತುತ ಭಾರತದ ಗಗನಯಾತ್ರಿಕರಿಗೂ ರಷ್ಯಾ ತನ್ನ ನೆಲದಲ್ಲಿಯೇ ತರಬೇತಿ ನೀಡಿದೆ. ಸೆಂಟ್ರಿಫ್ಯೂಜ್ ಸಿಮ್ಯೂಲೆಟರ್‌ಗಳಲ್ಲಿ ಯಾತ್ರಿಕರ ಗುರುತ್ವಬಲದ ತಾಳ್ಮೆ ಎಷ್ಟು ಎಂಬುದನ್ನು ರಷ್ಯಾ ನೆಲದಲ್ಲಿ ಪರೀಕ್ಷಿಸಿದೆ. ಅಲಲ್ದೇ ಅಲ್ಲಿನ ಕೆಲವು ಸಾಧನಗಳಲ್ಲಿ ದೇಹದ ಮೇಲೆ ಪೋಷಾಕಿನ ಭಾರವನ್ನೂ ಹೊತ್ತು ಕಡಿಮೆ ತೇವಾಂಶ, ತಾಪಮಾನ ಹಾಗೂ ಗಾಳಿಯ ಒತ್ತಡಗಳಲ್ಲಿನ ದೇಹ ನಿಯಂತ್ರಣದ ಅನುಭವವನ್ನೂ ಯಾತ್ರಿಕರಿಗೆ ನೀಡಲಾಗಿದೆ. ಮಾನವನ ದೇಹದ ಮೇಲೆ ಬಾಹ್ಯಾಕಶ ಪರಿಣಾಮಗಳ ಬಗ್ಗೆ ವಿವರವಾದ ದತ್ತಾಂಶ ಈಗಾಗಲೇ ಇಸ್ರೋ ಬಳಿ ಲಭ್ಯವಿದೆ, ಈ ದತ್ತಾಂಶವನ್ನು ಪರೀಕ್ಷಿಸಲು ಇಸ್ರೋ ರೊಬೊಟಿಕ್ ತಂತ್ರಜ್ಞಾನದ ಸೇವೆಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಲಿದೆ.
ಸಾಹಸಕ್ಕೆ ಸಿದ್ಧವಾಗಿರುವವರು ಇವರೇ..
ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್:
ಪ್ರಶಾಂತ್ ಬಾಲಕೃಷ್ಣನ್ ನಾಯರ್ 1976ರ ಆಗಸ್ಟ್ 26ರಂದು ಕೇರಳದ ತಿರುವಾಳಿಯಾಡ್‌ನಲ್ಲಿ ಜನಿಸಿದರು. 1998ರ ಡಿಸೆಂಬರ್ 19ರಂದು ಐಎಎಫ್ ಫೈಟರ್ ಜೆಟ್ ಪೈಲಟ್ ಆಗಿ ವೃತ್ತಿ ಆರಂಭಿಸಿದರು. ʻಟೆಸ್ಟ್ ಪೈಲಟ್ ಮತ್ತು ಕ್ಯಾಟ್ ಎʼ ಹಾರಾಟ ತರಬೇತುರಾರರಾಗಿರುವ ಪ್ರಶಾಂತ್ 3,000 ಗಂಟೆಗಳ ಒಟ್ಟು ವಿಮಾನ ಚಾಲನೆಯ ಅನುಭವ ಹೊಂದಿದ್ದಾರೆ. ಏರ್ಫೋರ್ಸ್ ಅಕಾಡೆಮಿಯಿಂದ ʻಸ್ಕ್ವಾಡ್ ಆಫ್ ಆನರ್ʼ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಪಾಕ್ ವಶದಲ್ಲಿದ್ದ ‘ಸಿಂಗಂ’ ವಿಂಗ್ ಕಮಾಂಡರ್ ತಾಯ್ನಾಡಿಗೆ ವಾಪಸ್ – ಭಾರತದ ಗೆಲುವಿಗೆ 5ರ ಸಂಭ್ರಮ
ಗ್ರೂಪ್ ಕ್ಯಾಪ್ಟನ್ ಅಜಿತ್ ಕೃಷ್ಣನ್:
ಅಜಿತ್ ಕೃಷ್ಣನ್ 1982ರ ಏಪ್ರಿಲ್ 19ರಂದು ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು. 2003ರ ಜೂನ್ 21 ರಂದು ಐಎಎಫ್ ಯುದ್ಧವಿಮಾನಗಳ ಪೈಲಟ್ ಆಗಿ ವೃತ್ತಿ ಆರಂಭಿಸಿದ ಅಜಿತ್ ಸದ್ಯ ಟೆಸ್ಟ್ ಪೈಲಟ್ ಮತ್ತು ಹಾರಾಟ ತರಬೇತುದಾರರಾಗಿದ್ದಾರೆ. ಸುಮಾರು 2,900 ಗಂಟೆಗಳ ವಿಮಾನ ಚಾಲನೆ ಮಾಡಿದ ಅನುಭವ ಹೊಂದಿದ್ದಾರೆ. ರಾಷ್ಟ್ರಪತಿ ಚಿನ್ನದ ಪದಕ ಪಡೆದಿರುವುದು ಇವರ ಹೆಗ್ಗಳಿಕೆ.
ಗ್ರೂಪ್ ಕ್ಯಾಪ್ಟನ್ ಅಂಗದ್ ಪ್ರತಾಪ್:
ಅಂಗದ್ ಪ್ರತಾಪ್ 1982ರ ಜುಲೈ 17 ರಂದು ಉತ್ತರ ಪ್ರದೇಶದ ಪ್ರಯಾಗ್‌ನಲ್ಲಿ ಜನಿಸಿದರು. ಸದ್ಯ ಫ್ಲೈಯಿಂಗ್ ತರಬೇತುದಾರರು ಮತ್ತು ಟೆಸ್ಟ್ ಪೈಲಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು 2,000 ಸಾವಿರ ಗಂಟೆಗಳ ವಿಮಾನ ಚಾಲನೆ ಅನುಭವ ಹೊಂದಿದ್ದಾರೆ.
ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ:
1985ರ ಅಕ್ಟೋಬರ್ 10ರಂದು ಉತ್ತರ ಪ್ರದೇಶದ ಲಕ್ನೋನಲ್ಲಿ ಜನಿಸಿದ ಶುಕ್ಲಾ ಅವರು 2006ರ ಏಪ್ರಿಲ್ 17ರಂದಯು ವಾಯುಪಡೆಯ ಫೈಟರ್ ಜೆಟ್ ಪೈಲಟ್ ಆಗಿ ನೇಮಕಗೊಂಡರು. ಸದ್ಯ ಫೈಟರ್ ಕಾಂಬ್ಯಾಟ್ ಲೀಡರ್ ಮತ್ತು ಟೆಸ್ಟ್ ಪೈಲಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು 2,000 ಗಂಟೆಗಳ ವಿಮಾನ ಚಾಲನೆ ಅನುಭವ ಹೊಂದಿದ್ದಾರೆ.
ಮಾಹಿತಿ ಸಂಗ್ರಹ: ಗಿರೀಶ್ ಲಿಂಗಣ್ಣ (ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)