– ವಿಡಿಯೋ ತೋರಿಸಿ ಮದ್ವೆಯಾಗುವಂತೆ ಒತ್ತಡ
– ಬ್ಲಾಕ್‍ಮೇಲ್ ಮಾಡಿ ಮತ್ತೆರಡು ಬಾರಿ ಅತ್ಯಾಚಾರ
ಲಕ್ನೋ: ಯುವಕನೊಬ್ಬ ಮತ್ತು ಬರುವ ಜ್ಯೂಸ್ ಕುಡಿಸಿ ಅತ್ಯಾಚಾರ ಎಸಗಿದ್ದಲ್ಲದೇ ಕೃತ್ಯವನ್ನು ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿಯನ್ನು ಮೋನು ಎಂದು ಗುರುತಿಸಲಾಗಿದೆ. ನಾನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಕೃತ್ಯದ ವಿಡಿಯೋವನ್ನು ಸಹ ರೆಕಾರ್ಡ್ ಮಾಡಿಕೊಂಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಇದೀಗ ಪೊಲೀಸರು ಆರೋಪಿ ಮೋನುವನ್ನು ಬಂಧಿಸಿದ್ದಾರೆ.
Advertisement
Advertisement
ಏನಿದು ಪ್ರಕರಣ?
ಸಂತ್ರಸ್ತೆ ನರ್ಸ್ ಆಗಿದ್ದು, ಆರೋಪಿ ಮೋನುವನ್ನು ವಿವಾಹ ಸಮಾರಂಭದಲ್ಲಿ ಭೇಟಿಯಾಗಿದ್ದಳು. ನಂತರ ಇಬ್ಬರು ಪರಸ್ಪರ ಫೋನ್ ನಂಬರ್ ತೆಗೆದುಕೊಂಡಿದ್ದು, ಅಂದಿನಿಂದ ಫೋನಿನಲ್ಲಿ ಮಾತನಾಡುತ್ತಿದ್ದರು. ದಿನಗಳೆದಂತೆ ಇಬ್ಬರು ಭೇಟಿಯಾಗಲು ಪ್ರಾರಂಭಿಸಿದರು. ಇದೇ ವೇಳೆ ಆರೋಪಿ ಮೋನು ಸಂತ್ರಸ್ತೆಯ ಜೊತೆ ಸಲುಗೆ ಬೆಳೆಸಿಕೊಂಡಿದ್ದು, ಆಕೆಯನ್ನು ಅನೇಕ ಬಾರಿ ಆಸ್ಪತ್ರೆಯಿಂದ ಮನೆಗೆ ಡ್ರಾಪ್ ಮಾಡಿದ್ದನು.
Advertisement
ಒಂದು ದಿನ ಮೋನು ಸಂತ್ರಸ್ತೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದನು. ಅಲ್ಲಿ ಆಕೆಗೆ ಕುಡಿಯಲು ಜ್ಯೂಸ್ ಕೊಟ್ಟಿದ್ದು, ಅದರಲ್ಲಿ ಮತ್ತು ಬರುವ ಔಷಧಿಯನ್ನು ಮಿಕ್ಸ್ ಮಾಡಿದ್ದನು. ಅದನ್ನು ಕುಡಿದ ಸಂತ್ರಸ್ತೆ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಈ ವೇಳೆ ಆರೋಪಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಅದನ್ನು ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಆರೋಪಿ ಅತ್ಯಾಚಾರದ ವಿಡಿಯೋ ಇಟ್ಟುಕೊಂಡು ಬ್ಲಾಕ್‍ಮೇಲ್ ಮಾಡುತ್ತಿದ್ದಾನೆ. ತನ್ನನ್ನು ಮದುವೆಯಾಗುವಂತೆ ಒತ್ತಡ ಹಾಕಿದ್ದಾನೆ. ನಾನು ಮದುವೆಯಾಗಲೂ ನಿರಾಕರಿಸಿದೆ. ಇದರಿಂದ ಕೋಪಗೊಂಡ ಆರೋಪಿ ನನ್ನ ಕುಟುಂಬದವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಅಲ್ಲದೇ ಮನೆಗೆ ಬಂದು ಅತ್ಯಾಚಾರದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬ್ಲಾಕ್‍ಮೇಲ್ ಮಾಡುತ್ತಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ವಿಡಿಯೋ ಇಟ್ಟುಕೊಂಡು ಬ್ಲಾಕ್ ಮಾಡಿ ಆರೋಪಿ ಮತ್ತೆ ಎರಡು ಬಾರಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಪದೇ ಪದೇ ಮದುವೆಯಾಗುವಂತೆ ಒತ್ತಡ ಹಾಕುತ್ತಿದ್ದನು. ಶುಕ್ರವಾರ ಕೂಡ ಆರೋಪಿ ಸಂತ್ರಸ್ತೆಯನ್ನು ಮನೆಗೆ ಬರುವಂತೆ ಒತ್ತಾಯಿಸಿದ್ದಾನೆ. ಕೊನೆಗೆ ಆತನ ಕಾಟವನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ನಡೆದ ಘಟನೆಯ ಬಗ್ಗೆ ಪೋಷಕರಿಗೆ ತಿಳಿಸಿದ್ದಾಳೆ. ನಂತರ ಮನೆಯವರು ಮೋನುವಿಗೆ ಫೋನ್ ಮಾಡಿ ಮನೆಯ ಹತ್ತಿರ ಕರೆಯುವಂತೆ ತಿಳಿಸಿದ್ದಾರೆ. ಮನೆಯವರು ಹೇಳಿದಂತೆ ಸಂತ್ರಸ್ತೆ ಆರೋಪಿಗೆ ಫೋನ್ ಮಾಡಿ ಮನೆಯ ಬಳಿ ಬರುವಂತೆ ಕರೆದಿದ್ದಾಳೆ. ತಕ್ಷಣ ಮನೆಯ ಹತ್ತಿರ ಬಂದ ಆರೋಪಿಯನ್ನು ಪೋಷಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.
ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ನಾವು ಆರೋಪಿಯಿಂದ ಮೊಬೈಲ್ ಫೋನ್ ಕೂಡ ವಶಪಡಿಸಿಕೊಂಡಿದ್ದೇವೆ. ಕಳೆದ ಎರಡು ತಿಂಗಳಿನಿಂದ ಆರೋಪಿ ಸಂತ್ರಸ್ತೆಗೆ ಕಿರುಕುಳ ನೀಡುತ್ತಿದ್ದ. ಆತನ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಅಜಯ್ ಸಾಹ್ನಿ ಹೇಳಿದರು.