ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ನಾಳೆ ವಿಶ್ವದಾದ್ಯಂತ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. ದಾಖಲೆಯ ರೀತಿಯಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದ್ದು, ಮೊದಲ ದಿನ ವಿಶ್ವದಾದ್ಯಂತ ಅಂದಾಜು 9500 ಶೋಗಳು ಮತ್ತು 2500 ಸ್ಕ್ರೀನ್ ಗಳಲ್ಲಿ ಈ ಸಿನಿಮಾವನ್ನು ನೋಡಬಹುದಾಗಿದೆ. ಒಟ್ಟು 50 ದೇಶಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಬೆಂಗಳೂರಿನಲ್ಲಿ ಬೆಳಗ್ಗೆ 5 ಗಂಟೆಯಿಂದಲೇ ಪ್ರದರ್ಶನ ಪ್ರಾರಂಭವಾಗುತ್ತಿದೆ.
ನಾಳೆಯಿಂದ ಪ್ರದರ್ಶನಗೊಳ್ಳುತ್ತಿರುವ ವಿಕ್ರಾಂತ್ ರೋಣ ಸಿನಿಮಾ, ಮೊದಲ ದಿನ ಯಾವೆಲ್ಲ ರಾಜ್ಯದಲ್ಲಿ ಎಷ್ಟು ಸ್ಕ್ರೀನ್ ಮತ್ತು ಶೋಗಳು ನಡೆಯಲಿವೆ ಎನ್ನುವ ಅಂದಾಜು ಇಲ್ಲಿದೆ. ಕರ್ನಾಟಕದಲ್ಲಿ ಒಟ್ಟು 390 ಸ್ಕ್ರೀನ್ ಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದು, 2500 ಶೋಗಳನ್ನು ಆಯೋಜನೆ ಮಾಡಲಾಗಿದೆ. ಬೆಂಗಳೂರು ಒಂದರಲ್ಲೇ 110 ಸ್ಕ್ರೀನ್ ಮತ್ತು 1200 ಶೋಗಳು ನಡೆಯಲಿವೆ. ಇದನ್ನೂ ಓದಿ:ಕಿಚ್ಚ ಸುದೀಪ್ ಅವರನ್ನು ವಿಶ್ವದ ಬಾಕ್ಸ್ ಆಫೀಸಿಗೆ ಹೋಲಿಸಿದ ಉಪೇಂದ್ರ
ಆಂಧ್ರ ಮತ್ತು ತೆಲಂಗಾಣದಲ್ಲೂ ವಿಕ್ರಾಂತ್ ರೋಣ ಹಿಂದೆ ಬಿದ್ದಿಲ್ಲ. ಅಂದಾಜು 350ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ 1400 ಶೋಗಳು ನಡೆಯಲಿವೆ. ತಮಿಳುನಾಡಿನಲ್ಲಿ 250 ಸ್ಕ್ರೀನ್ ಗಳಲ್ಲಿ 1000 ಶೋಗಳು ಅರೇಂಜ್ ಆಗಿವೆ ಎನ್ನುವ ಅಂದಾಜಿದೆ. ಕೇರಳದಲ್ಲಿ 110 ಸ್ಕ್ರೀನ್ ಗಳಲ್ಲಿ 600 ಶೋಗಳು ನಡೆಯುತ್ತಿವೆ. ಉತ್ತರ ಭಾರತದಲ್ಲಿ ಒಟ್ಟು ಸ್ಕ್ರೀನ್ ಗಳ ಸಂಖ್ಯೆ 690 ಎಂದು ಅಂದಾಜಿಸಲಾಗಿದ್ದು, 2800 ಶೋಗಳು ಅಲ್ಲಿ ನಡೆಯಲಿವೆ.
ದೇಶದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ವಿಕ್ರಾಂತ್ ರೋಣ ಛಾಪು ಮೂಡಿಸಲು ಸಜ್ಜಾಗಿದೆ. ಅಂದಾಜು 50ಕ್ಕೂ ಹೆಚ್ಚು ದೇಶಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, 600 ಸ್ಕ್ರೀನ್ ಗಳಲ್ಲಿ 1500 ಶೋಗಳನ್ನು ಆಯೋಜನೆ ಮಾಡಿದ್ದಾರೆ ನಿರ್ಮಾಪಕರು. ಇದು ಮೊದಲ ದಿನದ ಅಂದಾಜು ಸ್ಕ್ರೀನ್ಸ್ ಮತ್ತು ಶೋಗಳು ಆಗಿದ್ದು, ನಾಳೆ ಇದರ ಚಿತ್ರಣ ಮತ್ತಷ್ಟು ಬದಲಾಗಬಹುದು. ಇನ್ನಷ್ಟು ಚಿತ್ರಮಂದಿರಗಳಲ್ಲೂ ಸಿನಿಮಾ ರಿಲೀಸ್ ಆಗಬಹುದು.