ತುಮಕೂರು: ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ಸಿ) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮಾಹಿತಿ ಪಡೆಯಲು ಬಂದಿದ್ದಾರೆಂದು ಅನುಮಾನಿಸಿ ಮುಸ್ಲಿಮರು ಆರ್ಥಿಕ ಗಣತಿ ಮಾಡಲು ಬಂದಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಜಿಲ್ಲೆಯ ಮುಸ್ಲಿಮರಲ್ಲಿ ಈ ಹೊಸ ಕಾಯ್ದೆಯ ಮೇನಿಯಾ ಕಾಡುತ್ತಿದ್ದು, ಆರ್ಥಿಕ ಗಣತಿ ಮಾಡಲು ಬಂದಿದ್ದ ಸಿಎಸ್‍ಸಿ ಏಜೆನ್ಸಿ ಸಿಬ್ಬಂದಿ ಕಂಡು ಮುಸ್ಲಿಮರು ಆತಂಕಗೊಂಡಿದ್ದಾರೆ. ಮನೆಮನೆಗೆ ಭೇಟಿ ಕೊಟ್ಟು ಆರ್ಥಿಕ ಗಣತಿಗಾಗಿ ಮಾಹಿತಿ ಕಲೆ ಹಾಕುತ್ತಿದ್ದ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡಿದ್ದಾರೆ. ಎನ್ಆರ್ಸಿ ಜಾರಿ ಕುರಿತು ಸಮೀಕ್ಷೆ ಮಾಡುತ್ತಿರಬಹುದು ಎಂದು ಆತಂಕಗೊಂಡು ಸಿಬ್ಬಂದಿ ಐಡಿ ಕಾರ್ಡ್, ಮಾನ್ಯತಾ ಪತ್ರ ಎಲ್ಲವನ್ನೂ ಪರಿಶೀಲಿಸಿದ್ದಾರೆ. ಆದರೂ ಸಮಾಧಾನ ಆಗದೆ ಗಣತಿ ಮಾಡುತ್ತಿದ್ದ ಸಿಬ್ಬಂದಿಯನ್ನ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸಿಎಸ್ಸಿ ಸಿಬ್ಬಂದಿ ಜಿ.ಸಿ.ಆರ್ ಕಾಲೋನಿ, ಪೂರ್ ಹೌಸ್ ಕಾಲೋನಿ ಹಾಗೂ ಬಿಬಿಜಾನ್ ಲೇಔಟ್‍ಗಳಲ್ಲಿ ಆರ್ಥಿಕ ಗಣತಿ ಮಾಡುತ್ತಿದ್ದರು. ಕೇವಲ ಮುಸ್ಲಿಮರು ಹೆಚ್ಚಾಗಿರುವ ಬಡಾವಣೆಗಳಲ್ಲೇ ಸರ್ವೆ ನಡೆಯುತ್ತಿದ್ದದ್ದು ಇನ್ನಷ್ಟು ಆತಂಕ್ಕೆ ಕಾರಣವಾಗಿತ್ತು. ಸಿಬ್ಬಂದಿ ಎಷ್ಟೇ ಮನವೊಲಿಸಿದರೂ ಸ್ಥಳೀಯರಿಗೆ ಸಮಾಧಾನ ತಂದಿಲ್ಲ. ಬಳಿಕ ಸಿಬ್ಬಂದಿಯನ್ನು ನಗರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಆಗ ಸತ್ಯಾಸತ್ಯತೆ ತಿಳಿದಿದೆ. ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಸಿಎಸ್ಸಿ ಏಜೆನ್ಸಿ ರಾಷ್ಟ್ರೀಯ 7ನೇ ಆರ್ಥಿಕ ಗಣತಿ ಕಾರ್ಯಕ್ರಮದ ಅನ್ವಯ ಆರ್ಥಿಕ ಗಣತಿ ನಡೆಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಕಚೇರಿ ಮೂಲ ಕೂಡ ಸ್ಪಷ್ಟಪಡಿಸಿದೆ.
2019ರ ನವೆಂಬರಿನಿಂದ ದೇಶಾದ್ಯಂತ ಆರ್ಥಿಕ ಗಣತಿ ಕಾರ್ಯ ನಡೆಯುತ್ತಿದೆ. ರಾಜ್ಯದಲ್ಲಿ ನವೆಂಬರ್ 6 ರಿಂದ ಆರಂಭಗೊಂಡಿದೆ. ಇದೇ ರೀತಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಆರ್ಥಿಕ ಗಣತಿ ನಡೆಯುತ್ತಿದೆ. ಆದರೆ ಎನ್ಆರ್ಸಿ ಹಾಗೂ ಪೌರತ್ವ ಕಾಯ್ದೆ ಬಗ್ಗೆ ಪ್ರತಿಪಕ್ಷಗಳು ಭಯಹುಟ್ಟಿಸಿರುವುದು ಹಾಗೂ ಕೇಂದ್ರ ಸರ್ಕಾರ ಸಾರ್ವಜನಿಕರಲ್ಲಿ ಸರಿಯಾಗಿ ಅರಿವು ಮೂಡಿಸದಿರುವುದು ಅವಾಂತರಕ್ಕೆ ಕಾರಣವಾಗಿದೆ.