ಬೆಂಗಳೂರು: ಹಂತಕರು ಒಟ್ಟು ಐವರು ವಿಚಾರವಂತರ ಹತ್ಯೆಯ ಗುರಿ ಇಟ್ಟುಕೊಂಡಿದ್ದು, ಅದರಲ್ಲಿ ಕಲ್ಬುರ್ಗಿ ಹಾಗೂ ಗೌರಿ ಹತ್ಯೆ ಆಗಿದೆ. ಈಗ ಅವರ ಮುಂದಿನ ಹಿಟ್ ಲಿಸ್ಟ್‍ನಲ್ಲಿ ನಾನು ಇರಬಹುದು ಮುಂದೆ ಭಗವಾನ್ ಇರಬಹುದು ಎಂದು ನಿಡುಮಾಮಿಡಿ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಹೇಳಿದ್ದಾರೆ.
ಖಾಸಗಿ ಹೋಟೆಲ್ ನಲ್ಲಿ ಗೌರಿ ಲಂಕೇಶ್ ಅವರಿಗೆ ಪರಿಯಾರ್ ಪ್ರಶಸ್ತಿ ಸಮಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೌರಿ ಹತ್ಯೆಯನ್ನು ಸಂಭ್ರಮಿಸುವವರನ್ನು ನೋಡಿದಾಗಲೇ ಹಂತಕರು ಯಾರು ಅನ್ನೋದು ತಿಳಿಯುತ್ತದೆ. ಕಲ್ಬುರ್ಗಿ ಅವರದ್ದು ಧಾರ್ಮಿಕ ಹತ್ಯೆ ಹಾಗೂ ಗೌರಿ ಅವರದ್ದು ರಾಜಕೀಯ ಹತ್ಯೆ. ಮುಂದೆ ನನ್ನನ್ನೇ ಟಾರ್ಗೆಟ್ ಮಾಡಲಾಗಿದೆ ಅನ್ನೋದು ನನಗೆ ಗೊತ್ತಿದೆ. ನನಗೆ ಸಾಕಷ್ಟು ಜನ ಹೇಳಿದ್ದಾರೆ ಎಂದು ಸ್ವಾಮೀಜಿ ತಿಳಿಸಿದರು.
Advertisement
ಅನಂತಮೂರ್ತಿಯವರ ಪುಸ್ತಕದ ಒಂದು ಮಾತನ್ನು ಕಲ್ಬುರ್ಗಿ ಅವರು ಸಭೆಯಲ್ಲಿ ಉಲ್ಲೇಖ ಮಾಡಿದ್ದರು. ಅದೇ ಅವರ ಹತ್ಯೆಗೆ ಕಾರಣವಾಯಿತು. ಕಲ್ಬುರ್ಗಿ ಮತ್ತು ಗೌರಿಯ ಹಂತಕರು ಹಿಂದು ಭಯೋತ್ಪಾದಕರಾಗಿದ್ದಾರೆ. ರಾಘವೇಶ್ವರ ಶ್ರೀ ವಿರುದ್ಧ ತನಿಖೆ ನಡೆಯುತ್ತಿದೆ ಹಾಗೂ ಎಲ್ಲಾ ಆಯಾಮದಿಂದಲೂ ತನಿಖೆ ನಡೆಯುತ್ತಿದೆ. ಅಷ್ಟಕ್ಕೆ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸೋದು ಸರಿಯಿಲ್ಲ ಎಂದು ನಿಡುಮಾಮಿಡಿ ಸ್ವಾಮೀಜಿ ಹೇಳಿದರು.
Advertisement
ವಿಚಾರವಾದಿಗಳ ವೇದಿಕೆಯಲ್ಲಿ ಗೌರಿ ಹಂತಕರನ್ನು ಹಿಡಿಯಲು ರಾಜ್ಯ ಸರ್ಕಾರಕ್ಕೆ ಡೆಡ್‍ಲೈನ್ ಕೊಟ್ಟು ಮುಂದಿನ ವಿಜಯದಶಮಿಯೊಳಗೆ ಹಂತಕರನ್ನು ಹಿಡಿಯಬೇಕೆಂದು ಆಗ್ರಹಿಸಿದೆ. ಹಂತಕರನ್ನು ಹಿಡಿಯದೆ ಇದ್ದರೆ ರಾಜ್ಯ ಸರ್ಕಾರ ತನ್ನ ವೈಫಲ್ಯವನ್ನು ಒಪ್ಪಿಕೊಂಡು ರಾಜ್ಯ ಜನರ ಮುಂದೆ ಕ್ಷಮೆ ಯಾಚಿಸಬೇಕು ಎಂದು ಸ್ವಾಮೀಜಿ ತಿಳಿಸಿದರು.
Advertisement
ಗೌರಿ ಮತ್ತು ಕಲ್ಬುರ್ಗಿ ಹಂತಕರು ಯಾರು ಎನ್ನುವುದಕ್ಕೆ ನಿಡುಮಾಮಿಡಿ ಶ್ರೀ ಪ್ರಣವಾನಂದ ಸ್ವಾಮೀಜಿ ಕಡೆ ಬೊಟ್ಟು ಮಾಡಿದ್ದಾರೆ. ಕಲ್ಬುರ್ಗಿ ಹತ್ಯೆಗೆ ಹದಿನೈದು ದಿನದ ಮುಂಚೆ ಪ್ರಣವಾನಂದ ಸ್ವಾಮೀಜಿ ಸುದ್ದಿಗೋಷ್ಟಿ ಕರೆದು ಐದು ಜನರ ಪ್ರಾಣ ತೆಗೆಯುತ್ತೇನೆ ಎಂದಿದ್ದರು. ಈಗ ಇಬ್ಬರ ಕೊಲೆಯಾಗಿದೆ. ಮುಂದೆ ನಾನು ಮತ್ತು ಭಗವಾನ್ ಲಿಸ್ಟ್ ನಲ್ಲಿದ್ದೇವೆ ಎಂದು ಸ್ವಾಮಿಜಿ ಹೇಳಿದರು.
Advertisement
ಪ್ರಣವಾನಂದ ಕೊಲೆಯ ಪ್ರಾಯೋಜಕರು ಅವರನ್ನು ವಿಚಾರಣೆ ಮಾಡಿದರೆ ಹಂತಕರು ಗೊತ್ತಾಗಲಿದ್ದಾರೆ. ಐವರು ವಿಚಾರವಾದಿಗಳನ್ನು ಹತ್ಯೆ ಮಾಡೋದಾಗಿ ಹೇಳಿದರೂ ಯಾಕೆ ಸರ್ಕಾರ ಕ್ರಮ ಕೈಗೊಂಡಿಲ್ಲ ಆಗಲೇ ಎಲ್ಲರ ಲಿಸ್ಟ್ ರೆಡಿಯಾಗಿದೆ ಹಂತಕರು ಕರ್ನಾಟಕದವರು. ಆದರೆ ಬಾಡಿಗೆ ಕೊಲೆಗಾರರನ್ನು ತಂದಿರಬಹುದು. ಗೌರಿ ಹತ್ಯೆಗೆ ನ್ಯಾಯ ಸಿಗಲಿದೆ ಅನ್ನೋ ನಂಬಿಕೆ ನನಗಿಲ್ಲ ಎಂದರು.
ವರ್ಷಕ್ಕೊಂದು ವಿಚಾರವಾದಿಗಳು ಸಾಯುತ್ತಾರೆ. ಇಂದು ಗೌರಿ ನಾಳೆ ನಾನು ನಾಡಿದ್ದು ಭಗವಾನ್ ಅದರಾಚೆ ಅಗ್ನಿ ಶ್ರೀಧರ್. ಬಿಜೆಪಿಗೆ ಮೋದಿ ಸರ್ಕಾರಕ್ಕೆ ಹಿಂಸೆ ಅನಿವಾರ್ಯ. ಹಿಂಸೆಯ ಮೂಲಕವೇ ರಾಜಕೀಯ ಪ್ರಾಬಲ್ಯ ಸ್ಥಾಪಿಸಲು ಹೊರಟಿದ್ದಾರೆ. ಹಿಂದುತ್ವದ ಬಗ್ಗೆ ಮಾತಾನಾಡಿದವರನ್ನು ಬಿಡಲ್ಲ ಅವರನ್ನು ಕೊಲ್ಲುತ್ತೇವೆ ಅನ್ನೋ ಸಂದೇಶವನ್ನು ಇವರಿಬ್ಬರನ್ನು ಹತ್ಯೆ ಮಾಡುವುದರ ಮೂಲಕ ನೀಡಿದ್ದಾರೆ ಎಂದು ಆರೋಪಿಸಿದರು.
ಭಾರತದಲ್ಲಿ ವಧಾ ಸಂಸ್ಕೃತಿ ವಿಜೃಂಭಿಸುತ್ತಿದೆ. ಸನಾತನ ಧರ್ಮ ಪುನಶ್ಚೇತನಗೊಂಡಾಗೆಲ್ಲ ವಧಾ ಸಂಸ್ಕೃತಿ ಹತ್ಯೆ ಮಾಡುವ ಸಂಸ್ಕೃತಿ ಬರುತ್ತದೆ. ಹಿಂದೆ “ಭಟ್ಟ” ಅನ್ನೋ ಹೆಸರಿನ ವ್ಯಕ್ತಿಯಿಂದ ಬೆದರಿಕೆ ಬಂದಿತ್ತು. ಈ ಬಗ್ಗೆ ಮಠದಿಂದ ಠಾಣೆಗೂ ದೂರು ಕೊಡಲಾಗಿದೆ ಹಾಗೂ ಹಿಂದುತ್ವದ ಬಗ್ಗೆ ಮಾತಾನಾಡೋ ನಿನ್ನನ್ನು ಉಳಿಸಲ್ಲ, ಖಾವಿ ಕಳಚಿ ಓಡಿಸುತ್ತೇವೆ ಅಂತಾ ಬೆದರಿಕೆ ಹಾಕಿದ್ದಾರೆ. ಮಠಕ್ಕೆ ಬನ್ನಿ ಮಾತಾನಾಡೋಣ ಅಂತಾ ಹೇಳಿದೆ ಆದರೆ ಯಾರು ಬಂದಿಲ್ಲ. ಕೆಲದಿನದ ಹಿಂದೆ ನಡೆದ ಘಟನೆ ಇದು ಈ ಬಗ್ಗೆ ದೂರು ನೀಡಲಾಗಿದೆ ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದರು.
ಸರ್ಕಾರಿ ಕಚೇರಿ, ಶಿಕ್ಷಣ ಸಂಸ್ಥೆ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಎಲ್ಲಾ ಧರ್ಮದ ದೇವರ ಭಾವಚಿತ್ರ ತೆಗೆಯಬೇಕು. ಕಚೇರಿಗಳಲ್ಲಿ ಧಾರ್ಮಿಕ ಆಚರಣೆ ಸಂಪ್ರದಾಯಗಳನ್ನು ಅನುಸರಿಸೋದನ್ನು ನಿಷೇಧಿಸಬೇಕೆಂದು ಸರ್ಕಾರಕ್ಕೆ ವಿಚಾರವಾದಿಗಳ ವೇದಿಕೆ ಒತ್ತಾಯ ಮಾಡಿದೆ.