ಮಂಡ್ಯ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಾಗೂ ಬಿಜೆಪಿಗೆ ಉಪಚುನಾವಣೆ ಪ್ರತಿಷ್ಠೆಯ ವಿಚಾರವಾಗಿದೆ. ಆದರೆ ಮಂಡ್ಯದಲ್ಲಿ ಮಾತ್ರ ಮತದಾರರಿಂದ ತೀವ್ರ ನಿರಾಸಕ್ತಿ ಉಂಟಾಗಿದ್ದು, ಒಬ್ಬೊಬ್ಬರು ಒಂದೊಂದು ಕಾರಣಕ್ಕೆ ನೋಟಾ ಅಭಿಯಾನದ ಮೊರೆ ಹೋಗುತ್ತಿದ್ದಾರೆ.
ಲೋಕಸಭಾ ಚುನಾವಣೆಗೆ ಐದು ತಿಂಗಳು ಬಾಕಿ ಇರುವಾಗ ಉಪಚುನಾವಣೆ ಅನಿವಾರ್ಯವಿತ್ತೇ ಎನ್ನುವುದು ಕ್ಷೇತ್ರದ ಕೆಲ ಮತದಾರರ ವಾದ. ಮಾಜಿ ಸಂಸದೆ ರಮ್ಯಾ ಅವರಿಗೆ ಟಿಕೆಟ್ ನೀಡಿಲ್ಲ ಅಂತಾ ಅವರ ಅಭಿಮಾನಿಗಳು ನೋಟಾ ಅಭಿಯಾನಕ್ಕೆ ಮುಂದಾಗಿದ್ದಾರಂತೆ. ಅಷ್ಟೇ ಅಲ್ಲದೆ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಸೋಲಲು ಎಲ್.ಆರ್.ಶಿವರಾಮೇಗೌಡ ಅವರೇ ಕಾರಣ. ಆದರೂ ಮೈತ್ರಿ ಸರ್ಕಾರವು ಅವರಿಗೆ ಟಿಕೆಟ್ ನೀಡಿದ್ದಕ್ಕೆ ರಮ್ಯಾ ಅಭಿಮಾನಿಗಳು ಕಿಡಿಕಾರಿದ್ದಾರೆ.
ಸಮ್ಮಿಶ್ರ ಸರ್ಕಾರ ಅಥವಾ ಕೇಂದ್ರದ ಬಿಜೆಪಿ ಸರ್ಕಾರ ರೈತರ ಸಾಲಮನ್ನಾ ಬಗ್ಗೆ ಗಮನಹರಿಸುತ್ತಿಲ್ಲ. ಹೀಗಾಗಿ ಗ್ರಾಮಕ್ಕೆ ಯಾವುದೇ ಅಭ್ಯರ್ಥಿ ಮತ ಕೇಳಲು ಬಂದರೂ, ಮೊದಲು ಸಾಲಮನ್ನಾ ಮಾಡಿ. ಆ ನಂತರ ಮತ ಕೇಳಲು ಬನ್ನಿ ಅಂತಾ ಮತದಾರರು ಪಟ್ಟು ಹಿಡಿದಿದ್ದಾರೆ. ಸಾಲ ಮನ್ನಾ ವಿಚಾರವಾಗಿ ಪ್ರಶ್ನೆ ಮಾಡುವಂತೆ ಎಲ್ಲ ರೈತರಿಗೂ ಹೇಳಿದ್ದೇವೆ ಎಂದು ರೈತ ಮುಂಖಡರು ಹೇಳಿದ್ದಾರೆ.
ಇತ್ತ ಸಾಮಾನ್ಯ ಮತದಾರರು ಕೂಡ, ಇಷ್ಟು ಕಡಿಮೆ ಅವಧಿಗೆ ಚುನಾವಣೆ ನಡೆಸುತ್ತಿರುವುದಕ್ಕೆ ನಮಗೆ ಬೇಸರವಿದ್ದು, ನಾವು ನೋಟಾ ಆಯ್ಕೆ ಮಾಡುವ ಮೂಲಕ ನಮ್ಮ ಪ್ರತಿಭಟನೆ ಸಂದೇಶ ತಲುಪಿಸುತ್ತೇವೆ ಎನ್ನುತ್ತಿದ್ದಾರೆ. ಬಿಸಿಲು, ಮಳೆ ಲೆಕ್ಕಿಸದೆ ಮಂಡ್ಯದಾದ್ಯಂತ ಸಂಚರಿಸಿ ಮತ ಕೇಳುತ್ತಿರುವ ಅಭ್ಯರ್ಥಿಗಳಿಗೆ ಮತದಾರರ ನೋಟಾ ನಿರ್ಧಾರ ತಲೆನೋವಾಗಿ ಪರಿಣಮಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv