ಕೋಲಾರ: ಶಟಪ್, ನೀವೆಲ್ಲಾ ಸ್ಕೌಂಡ್ರಲ್ಸ್. ನಿಮಗೆ ಈಗಲೇ ಏನಾದರು ಆಗುತ್ತದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಜಿಲ್ಲಾ ವೈದ್ಯಾಧಿಕಾರಿ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ಇಂದು ಬೆಳಗ್ಗೆ ಆಯುರ್ವೇದ ಆಸ್ಪತ್ರೆ ಹಾಗೂ ಕ್ಷೇತ್ರದ ಸಮಸ್ಯೆ ಪರಿಶೀಲನೆ ನಡೆಸಿದ ರಮೇಶ್ ಕುಮಾರ್, ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ಸೂಕ್ತ ವೈದ್ಯಕೀಯ ಉಪಕರಣಗಳನ್ನು ನೀಡಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಡ ರೋಗಿಗಳ ಸೇವೆಗೆ ಬೇಕಾದ ಉಪಕರಣಗಳನ್ನು ನೀಡಲು ನಿಮಗೇನು ಕಷ್ಟ? ಶಟಪ್ ನೀವೆಲ್ಲ ಸ್ಕೌಂಡ್ರಲ್ಸ್, ನಿಮಗೆಲ್ಲ ಮಾನವೀಯತೆ ಇದೆಯಾ? ಬಡತನದ ಬಗ್ಗೆ ಕಿಂಚಿತ್ತಾದರೂ ಕರುಣೆ ಇದೆಯಾ? ಭಗವಂತ ಏನಾದರೂ ಇದ್ದರೆ, ನಿಮಗೆಲ್ಲ ಈಗಿಂದಿಗಲೇ ಏನಾದರೂ ತೊಂದರೆಯಾಗುತ್ತದೆ ಎಂದು ಹೇಳಿ ಕೆಂಡಾಮಂಡಲರಾಗಿದ್ದಾರೆ.
ಒಂದೆಡೆ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರದ ವಿಚಾರದಲ್ಲಿ ಸುದ್ದಿಯಾಗುತ್ತಿರುವ ರಮೇಶ್ ಕುಮಾರ್ ಕ್ಷೇತ್ರದ ಸಮಸ್ಯೆ ಪರಿಶೀಲನೆ ವೇಳೆ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಸಲಕರಣೆಗಳಿಲ್ಲದ್ದನ್ನು ಕಂಡು ಇನ್ನೂ ಸಿಟ್ಟಾಗಿದ್ದಾರೆ.
ಜಿಲ್ಲಾ ವೈದ್ಯಾಧಿಕಾರಿ ಡಾ.ವಿಜಯ್ ಕುಮಾರ್ ಸ್ಪಷ್ಟನೆ ನೀಡಲು ಬಂದರೂ ಸಹ, ಕೇಳದ ಸ್ಪೀಕರ್ ರಮೇಶ್ ಕುಮಾರ್ ಸಿಕ್ಕಾಪಟ್ಟೆ ತರಾಟೆ ತೆಗದುಕೊಂಡಿದ್ದಾರೆ. ಅಗತ್ಯವಿರುವ ಔಷಧಿ ಹಾಗೂ ವೈದ್ಯಕೀಯ ಉಪಕರಣಗಳನ್ನು ಕಳುಹಿಸಲಾಗಿದೆ ಎಂದು ಹೇಳಿದರೂ ಸಹ, ಶಟಪ್ ಸ್ಕೌಂಡ್ರಲ್ ಎಂದು ಬೈಯ್ಯುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.