ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಬಾಲಿವುಡ್ ನಟ ಶಾರುಖ್ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರದಲ್ಲಿ ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ನಟಿಸಲಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಈ ಕಾಂಬಿನೇಷನ್ ಬಗ್ಗೆ ಸುದ್ದಿ ವೈರಲ್ ಕೂಡ ಆಗಿತ್ತು. ಈ ಹಿಂದೆ ರಿಷಬ್ ‘ನಾನು ಕನ್ನಡ ಸಿನಿಮಾದಲ್ಲಿ ಮಾತ್ರ ನಟಿಸುತ್ತೇನೆ. ಬೇರೆ ಚಿತ್ರೋದ್ಯಮವನ್ನು ಕನ್ನಡದಿಂದಲೇ ಪ್ರತಿನಿಧಿಸುತ್ತೇನೆ’ ಎಂದಿದ್ದರು. ಹಾಗಾಗಿ ಅವರು ತಮ್ಮ ಮಾತು ಇಷ್ಟುಬೇಗ ಮರೆತರಾ? ಎನ್ನುವ ಪ್ರಶ್ನೆ ಕೂಡ ಮಾಡಲಾಗಿತ್ತು. ಆದರೆ, ಅದು ಅಸಲಿ ಸುದ್ದಿ ಅಲ್ಲವೆಂದಿದ್ದಾರೆ ರಿಷಬ್.
ಪಬ್ಲಿಕ್ ಟಿವಿ ಡಿಜಿಟಲ್ ರಿಷಬ್ ಶೆಟ್ಟಿ ಅವರನ್ನು ಸಂಪರ್ಕಿಸಿದಾಗ, ‘ಇಂತಹ ಸುಳ್ಳುಗಳನ್ನು ಯಾರು ಹಬ್ಬಿಸುತ್ತಾರೋ ಗೊತ್ತಿಲ್ಲ. ಹೊಂಬಾಳೆ ಫಿಲ್ಮ್ಸ್ ನವರು ಶಾರುಖ್ ಖಾನ್ ಗೆ ಸಿನಿಮಾ ಮಾಡುತ್ತಿದ್ದರೆ ಅವರೇ ಹೇಳುತ್ತಾರೆ. ಅಧಿಕೃತ ಮಾಹಿತಿಗಳನ್ನು ಅವರು ಕಾಲ ಕಾಲಕ್ಕೆ ಕೊಡುತ್ತಲೇ ಬಂದಿದ್ದಾರೆ. ನನಗೆ ಈ ವಿಚಾರ ಗೊತ್ತಿಲ್ಲ. ಆದರೆ, ನಾನು ಶಾರುಖ್ ಖಾನ್ ಜೊತೆ ಸಿನಿಮಾ ಮಾಡುತ್ತಿದ್ದೇನೆ ಅನ್ನುವುದು ಶುದ್ಧ ಸುಳ್ಳು ಎಂದಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್ ವುಡ್ ನಲ್ಲಿ ಎರಡು ದಿನ ಟೆಲಿವಿಷನ್ ಕ್ರಿಕೆಟ್ ಲೀಗ್
ನನ್ನ ಮೊದಲ ಪ್ರಾಶಸ್ತ್ಯ ಕನ್ನಡ ಎಂದು ಈಗಾಗಲೇ ಸ್ಪಷ್ಟ ಪಡಿಸಿರುವೆ. ಕನ್ನಡ ಸಿನಿಮಾ ಮಾಡಿಕೊಂಡೇ, ಅದೇ ಸಿನಿಮಾವನ್ನು ಇತರ ಭಾಷೆಗೆ ತಗೆದುಕೊಂಡು ಹೋಗುತ್ತೇನೆ. ಯಾವ ಸಿನಿಮಾ ಮಾಡುತ್ತಿದ್ದೇನೆ, ಅದರಲ್ಲಿ ಯಾರು ಇದ್ದಾರೆ ಎನ್ನುವುದನ್ನೇ ನಾನೇ ಮಾಹಿತಿಯನ್ನು ಕೊಡುತ್ತಾ ಬರುತ್ತೇನೆ. ಶಾರುಖ್ ಖಾನ್ ಜೊತೆಗಿನ ಸಿನಿಮಾ ಸುದ್ದಿ ಕೇವಲ ಗಾಸಿಪ್. ಅದು ಸುಳ್ಳು ಎಂದಿದ್ದಾರೆ ರಿಷಬ್ ಶೆಟ್ಟಿ.