ಬಾರದ ನೆರೆ ಪರಿಹಾರ – ರೈತ ಆತ್ಮಹತ್ಯೆಗೆ ಶರಣು

Public TV
1 Min Read
HVR Still 01

ಹಾವೇರಿ: ನೆರೆ ಪರಿಹಾರದ ಹಣ ಬಾರದೆ ಅನ್ನದಾತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ವಕ್ಷೇತ್ರದಲ್ಲೇ ನಡೆದಿದೆ.

ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹಳೇಮನ್ನಂಗಿ ಗ್ರಾಮದ ರೈತ ಬಸವರಾಜ ದೇವಗಿರಿ (45) ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ.

farmers money pm samman 1

ಬಸವರಾಜ ಅವರು ಎರಡೂವರೆ ಎಕರೆ ಜಮೀನು ಹೊಂದಿದ್ದರು. ಬ್ಯಾಂಕ್ ಮತ್ತು ಕೈಸಾಲ ಸೇರಿ ಆರು ಲಕ್ಷ ರೂ.ಗೂ ಅಧಿಕ ಸಾಲ ಮಾಡಿಕೊಂಡಿದ್ದರು. ಈ ಬಾರಿ ಮಳೆ ಚೆನ್ನಾಗಿ ಆಗುತ್ತದೆ. ಇದರಿಂದ ಬೆಳೆಯೂ ಚೆನ್ನಾಗಿ ಬರುತ್ತದೆ. ಎಲ್ಲ ಸಾಲವನ್ನೂ ತೀರಿಸಿಬಿಡಬಹುದು ಎಂದುಕೊಂಡಿದ್ದರು. ಅಲ್ಲದೆ ಸಾಲ ಮನ್ನಾ ಯೋಜನೆಯು ಸಹಾಯವಾಗಲಿದೆ ಎಂಬ ಭರವಸೆಯಲ್ಲಿದ್ದರು. ಆದರೆ, ರಣಮಳೆಯಿಂದಾಗಿ ಅತಿವೃಷ್ಟಿ ಮತ್ತು ವರದಾ ನದಿ ತುಂಬಿ ಹರಿದಿದ್ದರಿಂದ ಹೊಲಕ್ಕೆ ಸಂಪೂರ್ಣ ನೀರು ನುಗ್ಗಿ ಬೆಳೆ ಹಾಳಾಗಿ ಬಸವರಾಜ ಅವರು ಕಂಗಾಲಾಗಿದ್ದರು. ಹೀಗಾಗಿ ಮನನೊಂದು ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Basavaraja Bommai 1

ರೈತನ ಆತ್ಮಹತ್ಯೆಯಿಂದಾಗಿ ಕುಟುಂಬ ಕಂಗಾಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇಷ್ಟೆಲ್ಲ ನಡೆದರೂ ಸಹ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಆಗಮಿಸಿ ವಿಚಾರಿಸಿಲ್ಲ. ನೆರೆ ಸಂಭವಿಸಿದಾಗ ಗ್ರಾಮಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದರು. ಇದೀಗ ನೆರೆ ನಿಂತು ತಿಂಗಳು ಕಳೆದರೂ ಸಹ ನೆರೆ ಪರಿಹಾರ ಹಾಗೂ ಬೆಳೆ ಪರಿಹಾರ ಎರಡೂ ಬಂದಿಲ್ಲ. ಹೀಗಾಗಿ ಮನನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತು ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share This Article