ನವದೆಹಲಿ: ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಸಾವು ತುಂಬಾ ನೋವಾಗಿದೆ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ಇಂದು ಬೆಳಗ್ಗೆ ಬೇಸರ ವ್ಯಕ್ತಪಡಿಸಿದ್ದು, ಅಂತಿಮ ದರ್ಶನದ ವೇಳೆ ಅವರೊಂದಿಗಿನ ಒಡನಾಟ ನೆನೆದು ಕಣ್ಣೀರು ಹಾಕಿದ್ದಾರೆ.
ಸುಷ್ಮಾ ಸ್ವರಾಜ್ ಅವರೊಂದಿಗಿನ ನೆನಪುಗಳನ್ನು ಮೆಲುಕು ಹಾಕುವ ಮೂಲಕ ಸಂತಾಪ ವ್ಯಕ್ತಪಡಿಸಿರುವ ಅವರು, ರಾಜಕೀಯ ಜೀವನದಲ್ಲಿ ಸುಷ್ಮಾ ಅವರು ತಮಗೆ ಮಾಡಿದ ಪ್ರೀತಿಯ ಮಾರ್ಗದರ್ಶನವನ್ನು ಸಹ ಇದೇ ಸಂದರ್ಭದಲ್ಲಿ ನೆನೆದಿದ್ದಾರೆ.
Advertisement
Advertisement
91 ವರ್ಷದ ಅಡ್ವಾಣಿ ಅವರ ಪುತ್ರಿ ಪ್ರತಿಭಾ ಸಹ ಸುಷ್ಮಾ ಸ್ವರಾಜ್ ಅವರ ಪುತ್ರಿ ಬನ್ಸೂರಿ ಅವರನ್ನು ತಬ್ಬಿಕೊಂಡು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
Advertisement
ಸುಷ್ಮಾ ಪ್ರತಿ ಬಾರಿ ತಮ್ಮ ಜನ್ಮದಿನದಂದು ನೆಚ್ಚಿನ ಚಾಕೊಲೇಟ್ ಹಾಗೂ ಕೇಕ್ ತರುತ್ತಿದ್ದರು. ಅವರು ತರದೇ ಇದ್ದ ಒಂದು ವರ್ಷವನ್ನೂ ನೆನಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ ಅಡ್ವಾಣಿ ಅವರು ಭಾವುಕರಾಗಿದ್ದಾರೆ.
Advertisement
ಸುಷ್ಮಾ ಸ್ವರಾಜ್ ಅವರು ಬಿಜೆಪಿಯಿಂದಲೇ ತಮ್ಮ ಶ್ರೇಷ್ಠ ರಾಜಕಾರಣದ ಇನ್ನಿಂಗ್ಸ್ ಪ್ರಾರಂಭಿಸಿದ್ದರು. ಅಲ್ಲದೆ, ಅಡ್ವಾಣಿ ಅವರೊಂದಿಗೆ ಹೆಚ್ಚು ಕೆಲಸ ಮಾಡಿದ್ದರು. ಅಡ್ವಾಣಿಯವರ ತಂಡದಲ್ಲಿ ಸೇರ್ಪಡೆಗೊಳ್ಳುವ ಯುವ ಕಾರ್ಯಕರ್ತೆಯಾಗಿ ಸುಷ್ಮಾ ಗುರುತಿಸಿಕೊಂಡಿದ್ದರು.
ವರ್ಷಗಳ ಕಾಲ ಪಕ್ಷದ ಅತ್ಯಂತ ಜನಪ್ರಿಯ ಮತ್ತು ಪ್ರಮುಖ ನಾಯಕಿಯರಲ್ಲಿ ಒಬ್ಬರಾಗಿದ್ದರು. ಮಹಿಳಾ ನಾಯಕಿಯರಿಗೆ ಆದರ್ಶರಾಗಿದ್ದರು. ಅದ್ಭುತ ವಾಗ್ಮಿ, ಯಾವುದೇ ಘಟನೆ ಕುರಿತು ನೆನಪಿಸಿಕೊಳ್ಳುವ, ಅವುಗಳನ್ನು ಅತ್ಯಂತ ಸ್ಪಷ್ಟತೆ ಮತ್ತು ವಾಕ್ ಚಾತುರ್ಯದಿಂದ ಪ್ರಸ್ತುತ ಪಡಿಸುವ ಅವರ ಸಾಮಥ್ರ್ಯವನ್ನು ಕಂಡು ನಾನು ಆಗಾಗ ಆಶ್ಚರ್ಯಚಿಕಿತನಾಗುತ್ತಿದ್ದೆ ಎಂದು ಅವರು ನೆನಪಿಸಿಕೊಂಡರು.
ಸುಷ್ಮಾ ಜೀ ಅವರು ಉತ್ತಮ ಮಾನವೀಯ ಮೌಲ್ಯ ಉಳ್ಳವರಾಗಿದ್ದರು. ಮೃದು ಮತ್ತು ಸಹಾನುಭೂತಿ ಸ್ವಭಾವದಿಂದ ಎಲ್ಲರನ್ನು ಮುಟ್ಟಿದ್ದರು. ಜನ್ಮದಿನದಂದು ನನ್ನ ನೆಚ್ಚಿನ ಚಾಕೊಲೇಟ್ ಕೇಕ್‍ನ್ನು ತರುವುದನ್ನು ಒಂದು ಸಲವೂ ತಪ್ಪಿಸಿದ ನೆನಪುಗಳೇ ಇಲ್ಲ ಎಂದು ನೆನಪಿಸಿಕೊಂಡಿದ್ದಾರೆ.
ಸುಷ್ಮಾ ಅವರ ನಿಧನ ನನಗೆ ವೈಯಕ್ತಿಕವಾಗಿ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಸುಷ್ಮಾ ಅವರ ಉಪಸ್ಥಿತಿಯನ್ನು ಮಿಸ್ ಮಾಡಿಕೊಳ್ಳುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಿಳಿಸಿದ್ದಾರೆ.
ಸುಷ್ಮಾ ಸ್ವರಾಜ್ ಅವರು ಹೃದಯಾಘಾತವಾಗಿ ನಿನ್ನೆ ರಾತ್ರಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ವರ್ಷದಿಂದಲೂ ಸುಷ್ಮಾ ಅವರು ಸಾರ್ವಜನಿಕ ಜೀವನದಿಂದ ದೂರ ಇದ್ದರು. ಅಲ್ಲದೆ, ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ.