ಬೆಂಗಳೂರು: ಸಮ್ಮಿಶ್ರ ಸರ್ಕಾರದ 12 ಮಂದಿ ಅತೃಪ್ತ ಶಾಸಕರು ರಾಜೀನಾಮೆಯನ್ನು ನೀಡಿದ್ದು, ಇದೀಗ 8 ಮಂದಿ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ.
ರಾಜೀನಾಮೆ ಕೊಟ್ಟ ಬಳಿಕ ಮೊದಲ ತಂಡದಲ್ಲಿರುವ 8 ಮಂದಿ ರಾಜ್ಯಪಾಲರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆಗೆ ಕಾರಣಗಳನ್ನು ತಿಳಿಸಿದ್ದಾರೆ. ಈ ವೇಳೆ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಕೂಡ ಉಪಸ್ಥಿತರಿದ್ದರು.
ಒಟ್ಟು 22 ಶಾಸಕರು ರಾಜೀನಾಮೆ ನೀಡಲಿದ್ದಾರೆ. ಈಗ ನಮ್ಮ ಸಂಖ್ಯೆ 14 ಇದೆ ಇನ್ನು 8 ಜನ ಶಾಸಕರು ರಾಜೀನಾಮೆ ಕೊಡುತ್ತಾರೆ ಎಂದು ರಾಜ್ಯಪಾಲರಿಗೆ ಬಂಡಾಯ ಶಾಸಕರು ತಿಳಿಸಿದ್ದಾರೆ.
ಅಲೋಕ್ ಕುಮಾರ್ ಭೇಟಿ ಯಾಕೆ?
ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರ ರಾಜೀನಾಮೆಯ ಬಳಿಕದ ಸ್ವೀಕೃತಿ ಪತ್ರವನ್ನು ಸಚಿವ ಡಿಕೆ ಶಿವಕುಮಾರ್ ಅವರು ಹರಿದು ಹಾಕಿದ್ದರು. ಈ ಬಗ್ಗೆ ಅವರು ರಾಜ್ಯಪಾಲರಿಗೆ ದೂರು ನೀಡಿದ್ದರು. ಹೀಗಾಗಿ ತನಿಖೆ ನಡೆಸಲು ಅಲೋಕ್ ಕುಮಾರ್ ಅಲ್ಲಿ ಹಾಜರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಅಷ್ಟೇ ಅಲ್ಲದೇ ರಾಜೀನಾಮೆ ನೀಡುವ ಶಾಸಕರಿಗೆ ಭದ್ರತೆ ನೀಡಲು ಅಲೋಕ್ ಕುಮಾರ್ ಅವರಿಗೆ ರಾಜ್ಯಪಾಲರು ಸೂಚಿಸಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ.
ನಾಳೆ ಮತ್ತೆ ಐವರು ಶಾಸಕರು ರಾಜೀನಾಮೆ ನಿಡುವ ಸಾಧ್ಯತೆಗಳಿವೆ. ಚಿಕ್ಕೋಡಿಯ ಗನೇಶ್ ಹುಕ್ಕೇರಿ, ಎಚ್ ಡಿ ಕೋಟೆಯ ಅನಿಲ್ ಚಿಕ್ಕಮಾದು, ಖಾನಪುರದ ಅಂಜಲಿ ನಿಂಬಾಳ್ಕರ್, ಶ್ರೀಮಂತ್ ಪಾಟೀಲ್ ಹಾಗೂ ಜಯನಗರ ಶಾಸಕಿ ಸೌಮ್ಯ ರೆಡ್ಡಿ ರಾಜೀನಾಮೆ ನೀಡುವ ಸಾಧ್ಯತೆಗಳಿವೆ. ಜೊತೆಗೆ ಕೋಲಾರದ ಐವರು ಶಾಸಕರು ಕೂಡ ನಾಳೆ ರಾಜೀನಾಮೆ ನೀಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.