ಮೂಗುತಿ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರ ಅಲಂಕಾರ ಮಾತ್ರವಲ್ಲ. ಮೂಗುತಿಯು ಭಾರತೀಯ ಸಂಸ್ಕೃತಿಯ ಭಾಗವಾಗಿ ಶತಮಾನಗಳಿಂದಲೂ ಇದ್ದಿದ್ದು, ಇತ್ತೀಚೆಗೆ ಇದು ಹೊಸ ರೂಪದಲ್ಲಿ ಫ್ಯಾಷನ್ ಜಗತ್ತಿನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸುತ್ತಿದೆ. ಇದು ಭಾರತೀಯ ಮಹಿಳೆಯರ ಸೌಂದರ್ಯವರ್ಧಕವಾಗಿ ಮಾತ್ರವಲ್ಲದೆ, ಅವರ ವೈವಾಹಿಕ ಸ್ಥಿತಿಯ ಪ್ರತೀಕವಾಗಿಯೂ ಪರಿಗಣಿಸಲಾಗುತ್ತದೆ.
ಮೂಗುತಿ ಧರಿಸುವ ಸಂಪ್ರದಾಯ ಮತ್ತು ಅದರ ಮೂಲಗಳು
ಮೂಗುತಿ ಧರಿಸುವ ಸಂಪ್ರದಾಯವು ಸುಮಾರು 4000 ವರ್ಷಗಳ ಹಿಂದಿನ ಮಧ್ಯಪ್ರಾಚ್ಯ ಮತ್ತು ದಕ್ಷಿಣ ಏಷ್ಯಾದ ಸಂಸ್ಕೃತಿಗಳಿಂದ ಉಗಮವಾಗಿದೆ. ಭಾರತದಲ್ಲಿ, ಈ ಸಂಪ್ರದಾಯವು ವಿವಿಧ ಪ್ರಾಂತ್ಯಗಳಲ್ಲಿ ವಿಭಿನ್ನ ರೂಪಗಳಲ್ಲಿ ಕಂಡುಬರುತ್ತದೆ. ಉದಾಹರಣೆಗೆ ಉತ್ತರ ಭಾರತದ ಮಹಿಳೆಯರು ದೊಡ್ಡ ಗಾತ್ರದ ಮೂಗುತಿಗಳನ್ನು ಧರಿಸುತ್ತಾರೆ. ದಕ್ಷಿಣ ಭಾರತದ ಮಹಿಳೆಯರು ಸಣ್ಣ ಗಾತ್ರದ ಮೂಗುತಿಗಳನ್ನು ಧರಿಸುತ್ತಾರೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವ
ಹಿಂದೂ ಧರ್ಮದಲ್ಲಿ, ಮೂಗುತಿ ಧರಿಸುವುದು ದೇವಿ ಪಾರ್ವತಿಯ ಭಕ್ತಿಯ ಸಂಕೇತವಾಗಿದೆ. ಪಾರ್ವತಿ ದೇವಿ ವಿವಾಹದ ದೇವಿಯಾಗಿರುವ ಕಾರಣ, ಮೂಗುತಿ ಧರಿಸುವುದು ವಿವಾಹಿತ ಮಹಿಳೆಯರ ವೈವಾಹಿಕ ಜೀವನದ ಪ್ರತೀಕವಾಗಿದೆ. ಇದೇ ರೀತಿ, ಮೂಗುತಿ ಧರಿಸುವುದು ಆಧ್ಯಾತ್ಮಿಕ ದೃಷ್ಟಿಯಿಂದಲೂ ಮಹತ್ವಪೂರ್ಣವಾಗಿದೆ. ಮೂಗು ಶರೀರದ ಪ್ರಮುಖ ಭಾಗವಾಗಿರುವುದರಿಂದ, ಮೂಗುತಿ ಧರಿಸುವುದರಿಂದ ನಕಾರಾತ್ಮಕ ಶಕ್ತಿಗಳನ್ನು ದೂರವಿಡಲು ಸಹಾಯವಾಗುತ್ತದೆ ಎಂಬ ನಂಬಿಕೆಯೂ ಇದೆ.
ಹಳೆಯ ಆಭರಣಕ್ಕೆ ಹೊಸ ರೂಪ
ಇಂದಿನ ಯುವತಿಯರು ಮೂಗುತಿಯನ್ನು ಕೇವಲ ಸಂಪ್ರದಾಯದ ಭಾಗವಲ್ಲದೆ, ಒಂದು ಫ್ಯಾಷನ್ ಸ್ಟೇಟ್ಮೆಂಟ್ ಆಗಿ ಬಳಸುತ್ತಿದ್ದಾರೆ. ಸ್ಟ್ರೀಟ್ ಫ್ಯಾಷನ್‌ನಿಂದಾಗಿ ಮೂಗುತಿಯ ಡಿಸೈನ್‌ಗಳು ಈಗ ಹೆಚ್ಚು ವೈವಿಧ್ಯಮಯವಾಗಿವೆ.
1. ಮಿನಿಮಲಿಸ್ಟ್ ಡಿಸೈನ್
ಸಾಧಾರಣವಾಗಿ ಚಿನ್ನ ಅಥವಾ ಬೆಳ್ಳಿಯಲ್ಲಿ ಸಣ್ಣ ಗಾತ್ರದ ಮೂಗುತಿಯು ಪ್ರಚಲಿತವಾಗಿದೆ. ಡೈಲಿ ವೇರ್‌ಗೆ ಸುಲಭವಾಗಿ ಹೊಂದುವಂತೆ ಈ ಡಿಸೈನ್‌ಗಳು ಮಾಡಲಾಗಿದೆ. ಇದು ಮುಖದ ಸೌಂದರ್ಯವನ್ನೂ ಹೆಚ್ಚಿಸುತ್ತದೆ.
2. ಕ್ಲಿಪ್-ಆನ್ ಮೂಗುತಿ
ಇದು ಮೂಗಿನ ರಂಧ್ರವಿಲ್ಲದವರಿಗೆ ಪರಿಪೂರ್ಣ ಆಯ್ಕೆಯಾಗಿದೆ. ವಿಭಿನ್ನ ಶೇಪ್, ಸ್ಟೋನ್‌ಗಳು, ಮತ್ತು ಮೆಟಲ್‌ಗಳಲ್ಲಿ ಲಭ್ಯವಿರುವ ಈ ಕ್ಲಿಪ್-ಆನ್ ಆಭರಣವು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸದ್ದು ಮಾಡಿದೆ.
3. ಆಕ್ಸಿಡೈಜ್ಡ್ ಸಿಲ್ವರ್ ಮೂಗುತಿ
ಬೋಹೋ ಸ್ಟೈಲ್ ಪ್ರಿಯರಿಗೆ ಇದು ಅತ್ಯಂತ ಇಷ್ಟವಾಗುವ ಆಯ್ಕೆಯಾಗಿದೆ. ದಪ್ಪ ವಿನ್ಯಾಸ, ಹಳೆಯ ಮೊಹರಿನಂತಿರುವ ಥೀಮ್‌ಗಳು ಇವುಗಳಲ್ಲಿ ಸಾಮಾನ್ಯ. ಇದು ಹೆಚ್ಚಾಗಿ ಸಾಂಪ್ರದಾಯಿಕ ಉಡುಗೆಗಳಿಗೆ ಬಳಸಲಾಗುತ್ತದೆ. ಇದು ಅಗಲ ಮುಖದವರಿಗೆ ಹೆಚ್ಚು ಒಪ್ಪುತ್ತದೆ.
4. ನಥ್ ವಿಥ್ ಚೈನ್
ವಿಶೇಷವಾಗಿ ಮದುವೆ ಅಥವಾ ಸಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಹಳ ಗಮನ ಸೆಳೆಯುವ ಈ ಡಿಸೈನ್ ಈಗ ಫ್ಯಾಷನ್ ಶೋಗಳಲ್ಲೂ ಕಾಣಸಿಗುತ್ತದೆ. ಮೂಗಿನಿಂದ ಕಿವಿಯವರೆಗೆ ಚೈನ್ ಜೋಡಿಸಲಾಗಿರುವ ಈ ಡಿಸೈನ್‌ಗಳು ಮದುವೆ ಸಮಾರಂಭಗಳಲ್ಲಿ ಗಮನ ಸೆಳೆಯುತ್ತವೆ. ಇದನ್ನೂ ಉತ್ತರ ಭಾರತದ ಮಹಿಳೆಯರು ಹೆಚ್ಚಾಗಿ ಬಳಸುತ್ತಾರೆ. ವಿವಾಹ ಸಂದರ್ಭಗಳಲ್ಲಿ ಅವರು ಇಂತಹ ಮೂಗುತಿಗಳನ್ನೇ ಧರಿಸಿರುತ್ತಾರೆ.
5. ಪರ್ಸನಲೈಜ್ಡ್ ಮೂಗುತಿ
ಇತ್ತೀಚಿನ ದಿನಗಳಲ್ಲಿ ಕಸ್ಟಮ್ ಮಾಡಿಸಿದ ಆಭರಣಗಳು ಬಹುಪಾಲು ಜನಪ್ರಿಯವಾಗಿವೆ. ಹುಟ್ಟಿದ ನಕ್ಷತ್ರ, ಹೆಸರು ಅಥವಾ ಸ್ಟೋನ್‌ಗಳಿಗೆ ಅನುಗುಣವಾಗಿ ಮೂಗುತಿಯ ವಿನ್ಯಾಸ ಮಾಡಿಸಿಕೊಳ್ಳುವವರ ಸಂಖ್ಯೆಯು ಹೆಚ್ಚುತ್ತಿದೆ. ಇದನ್ನು ಬೇರೆ ಬೇರೆ ಬಣ್ಣದ ಹರಳಲ್ಲಿ ಮಾಡಲಾಗುತ್ತದೆ. ಅವರವರಿಗೆ ಹೊಂದಿಕೆಯಾಗುವಂತೆ ಈ ಮೂಗುತಿಗಳನ್ನು ಡಿಸೈನ್ ಮಾಡಲಾಗುತ್ತದೆ.
ಮೂಗುತಿಯು ಕೇವಲ ಆಭರಣವಲ್ಲ, ಇದು ನಮ್ಮ ಸಂಸ್ಕೃತಿಯ ಹೆಮ್ಮೆ ಕೂಡಾ. ಸೌಂದರ್ಯ, ಧಾರ್ಮಿಕತೆ ಮತ್ತು ವೈಯಕ್ತಿಕ ಶೈಲಿಯ ಮಿಶ್ರಣವಿರುವ ಈ ಪುಟ್ಟ ಆಭರಣವು, ಮುಂದಿನ ಪೀಳಿಗೆಯವರೆಗೂ ಅದರ ಗ್ಲಾಮರ್ ಕಳೆದುಕೊಳ್ಳದೇ ಸಾಗುವುದರಲ್ಲಿ ಸಂಶಯವಿಲ್ಲ.