ಸಿಯೋಲ್: ಉಕ್ರೇನ್ ವಿರುದ್ಧ ಹೋರಾಡಲು ರಷ್ಯಾದ (Russia) ಬೆಂಬಲಕ್ಕೆ ಉತ್ತರ ಕೊರಿಯಾ (North Korea) ಸಾವಿರಾರು ಸೈನಿಕರನ್ನು ಕಳುಹಿಸಲು ನಿರ್ಧರಿಸಿದೆ ಎಂದು ದಕ್ಷಿಣ ಕೊರಿಯಾದ ಮಾಧ್ಯಮಗಳು ವರದಿ ಮಾಡಿವೆ.
ವಿಶೇಷ ಪಡೆಗಳು ಸೇರಿದಂತೆ, 12,000 ಸೈನಿಕರ ನಾಲ್ಕು ಬ್ರಿಗೇಡ್‌ಗಳನ್ನು ಕಳುಹಿಸಲು ಉತ್ತರ ಕೊರಿಯಾ ನಿರ್ಧರಿಸಿದೆ. ಈಗಾಗಲೇ ಈ ಪಡೆಗಳು ರಷ್ಯಾ ಕಡೆ ಪ್ರಯಾಣ ಬೆಳೆಸಿವೆ ಎಂದು ರಾಷ್ಟ್ರೀಯ ಗುಪ್ತಚರ ಸೇವೆ (ಎನ್ಐಎಸ್) ಮೂಲಗಳು ತಿಳಿಸಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದ ಸಿಯೋಲ್‌ನ ಬೇಹುಗಾರಿಕಾ ಸಂಸ್ಥೆ, ಉತ್ತರ ಕೊರಿಯಾ ರಷ್ಯಾದ ವ್ಲಾಡಿವೋಸ್ಟಾಕ್‌ನಲ್ಲಿ 1,500 ವಿಶೇಷ ಪಡೆಗಳ ತುಕಡಿಯನ್ನು ನಿಯೋಜಿಸಿದೆ. ಶೀಘ್ರದಲ್ಲೇ ಹೆಚ್ಚಿನ ಪಡೆಗಳನ್ನು ಕಳುಹಿಸಲಿದೆ. ತನ್ನ ವಿಶೇಷ ಪಡೆಗಳನ್ನು ರಷ್ಯಾದ ನೌಕಾಪಡೆಯ ಹಡಗಿನ ಮೂಲಕ ರಷ್ಯಾಕ್ಕೆ ಕಳುಹಿಸಲಾಗಿದೆ. ಇದು ಉತ್ತರ ಕೊರಿಯಾದ ಮಿಲಿಟರಿ ಭಾಗವಹಿಸುವಿಕೆಯ ಪ್ರಾರಂಭವನ್ನು ದೃಢೀಕರಿಸಿದೆ ಎಂದು ತಿಳಿಸಿದೆ.
ಈ ವಿಚಾರದ ಊಹಾಪೋಹಗಳ ನಡುವೆ ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರು ತುರ್ತು ಭದ್ರತಾ ಸಭೆಯನ್ನು ನಡೆಸಿದ್ದಾರೆ. ಸಭೆಯ ಬಳಿಕ ಉತ್ತರ ಕೊರಿಯಾದ ಸೈನಿಕರು ರಷ್ಯಾದಲ್ಲಿ ತರಬೇತಿ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋಗಳ ಸತ್ಯಾಸತ್ಯತೆ ಬಗ್ಗೆ ಸ್ಪಷ್ಟತೆ ಇಲ್ಲ ಎನ್ನಲಾಗಿದೆ.
ರಷ್ಯಾ-ಉತ್ತರ ಕೊರಿಯಾ ನಡುವಿನ ಒಪ್ಪಂದ
ಜೂನ್‌ನಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ಯೊಂಗ್ಯಾಂಗ್‌ಗೆ ಭೇಟಿ ನೀಡಿದ್ದರು. ಈ ವೇಳೆ ಉಭಯ ದೇಶಗಳು ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದವು. ಈ ಒಪ್ಪಂದ ಶಸ್ತ್ರಾಸ್ತ್ರ ವರ್ಗಾವಣೆಗೆ ಉತ್ತೇಜನ ನೀಡಿತು. ಇದು ಎರಡೂ ದೇಶಗಳ ಮೇಲಿನ UN ನಿರ್ಬಂಧವನ್ನು ಉಲ್ಲಂಘಿಸುತ್ತದೆ.